Kotekar health care hospital negligence: ಜ್ವರಕ್ಕೆ ಶಿಲೀಂದ್ರ ಅಂಟಿದ್ದ ಮಾತ್ರೆಗಳ ವಿತರಣೆ ; ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಡವಟ್ಟು, ಮಾತ್ರೆಗಳನ್ನ ಹಿಂಪಡೆದ ಡಿಎಚ್ಓ 

22-09-23 06:02 pm       Mangalore Correspondent   ಕರಾವಳಿ

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಚಿಕಿತ್ಸೆಗೆಂದು ತೆರಳಿದ್ದ ತಾಯಿ, ಮಗಳಿಗೆ ಶಿಲೀಂದ್ರ ಲೇಪಿತ ಮಾತ್ರೆಗಳನ್ನು ನೀಡಿದ ಘಟನೆ ನಡೆದಿದ್ದು, ದೂರಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ತಕ್ಷಣ ಅಲ್ಲಿಗೆ ನೀಡಿರುವ ಪ್ಯಾರಾ ಸಿಟಮಾಲ್ ಮಾತ್ರೆಗಳನ್ನ ಹಿಂಪಡೆದಿದ್ದಾರೆ. 

ಉಳ್ಳಾಲ, ಸೆ.22: ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಚಿಕಿತ್ಸೆಗೆಂದು ತೆರಳಿದ್ದ ತಾಯಿ, ಮಗಳಿಗೆ ಶಿಲೀಂದ್ರ ಲೇಪಿತ ಮಾತ್ರೆಗಳನ್ನು ನೀಡಿದ ಘಟನೆ ನಡೆದಿದ್ದು, ದೂರಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ತಕ್ಷಣ ಅಲ್ಲಿಗೆ ನೀಡಿರುವ ಪ್ಯಾರಾ ಸಿಟಮಾಲ್ ಮಾತ್ರೆಗಳನ್ನ ಹಿಂಪಡೆದಿದ್ದಾರೆ. 

ಕೋಟೆಕಾರು, ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿನ್ನೆ ಮಧ್ಯಾಹ್ನ ಕೆ.ಸಿ ನಗರ ನಿವಾಸಿ ಮಹಿಳೆಯೊಬ್ಬರು ತನ್ನ ಆರನೇ ತರಗತಿಯ ಮಗಳು‌ ರಾಫಿಯಾ ಜೊತೆ ಜ್ವರಕ್ಕೆ ಚಿಕಿತ್ಸೆ ಪಡೆಯಲು ತೆರಳಿದ್ದರು. ಇಬ್ಬರನ್ನೂ ಪರೀಕ್ಷೆ ನಡೆಸಿದ ವೈದ್ಯರು ಎರಡು‌ ದಿವಸಗಳ ಔಷಧಿಗಳನ್ನ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಔಷಧಿ ಸೇವಿಸಲು ಮುಂದಾದಾಗ ಪ್ಯಾರಾ ಸಿಟಮಾಲ್ ಮಾತ್ರೆಯ ಬಣ್ಣ ಬದಲಾಗಿ ಶಿಲೀಂದ್ರ ಆವರಿಸಿತ್ತು. ಈ ಬಗ್ಗೆ ವಿಚಾರಿಸಿದಾಗ ಆರೋಗ್ಯ ಕೇಂದ್ರದ ಸಿಬ್ಬಂದಿ ಎಲ್ಲಾ ಮಾತ್ರೆಗಳು ಹೀಗೇ  ಇವೆ, ಏನಾಗುವುದಿಲ್ಲವೆಂದು ಬಾಲಿಶ ಉತ್ತರ ನೀಡಿದ್ದರಂತೆ.

ಆನಂತರ ಮಾಜಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶಿಲೀಂದ್ರ ಆವರಿಸಿದ್ದ ಮಾತ್ರೆಯ ವೀಡಿಯೋ ತೆಗೆದು ಜಿಲ್ಲಾ ಆರೋಗ್ಯಾಧಿಕಾರಿಯ ವಾಟ್ಸಪ್ ಕಳಿಸಿದ್ದಾರೆ. ತಕ್ಷಣ ಸ್ಪಂದನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಎಚ್‌.ಆರ್ ತಿಮ್ಮಯ್ಯ, ಕೋಟೆಕಾರು ಆರೋಗ್ಯ ಕೇಂದ್ರಕ್ಕೆ ನೀಡಿರುವ ಪ್ಯಾರಸೆಟಮೋಲ್ ಮಾತ್ರೆಗಳನ್ನು ಹಿಂದಕ್ಕೆ ತರಿಸಿಕೊಂಡಿದ್ದಾರೆ. 

ಹೆಡ್ ಲೈನ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಅವರು ಎರಡು ಬ್ಯಾಚ್ ನ ಪ್ಯಾರಾಸೆಟಮೋಲ್ ಮಾತ್ರೆಗಳಲ್ಲಿ ಕೆಲವು ಸ್ಟ್ರಿಪ್ ಗಳ ಮಾತ್ರೆಗಳಿಗೆ ಶಿಲೀಂದ್ರ ಆವರಿಸಿದೆ. 2025 ರ ಜನವರಿ ತಿಂಗಳ ವರೆಗೆ ಮಾತ್ರೆಗಳು ಬಳಕೆಗೆ ಯೋಗ್ಯವಾಗಿದ್ದರೂ ಮಾತ್ರೆಗಳ ವಿತರಣೆಯನ್ನ ನಿಲ್ಲಿಸಿ ಎಲ್ಲವನ್ನು ಹಿಂಪಡೆದಿದ್ದು ಅದನ್ನ ಬೆಂಗಳೂರಿಗೆ ಪರೀಕ್ಷೆಗೆ ಕಳಿಸಲಾಗುವುದು. ಜಿಲ್ಲೆಯ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ಯಾರ ಸೆಟಮೋಲ್ ಮಾತ್ರೆಗಳನ್ನ ಹಿಂಪಡೆದು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Kotekar health care hospital negligence, DHO alerts in Mangalore.