Mangalore Traffic police, potholes Nanthoor circle: ನಂತೂರು ವೃತ್ತದಲ್ಲಿ ಪ್ರಾಣ ಹಿಂಡುತ್ತಿದ್ದ ಗುಂಡಿಗಳು ; ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಪೊಲೀಸರಿಂದಲೇ ರಿಪೇರಿ ಕೆಲಸ !

22-09-23 10:00 pm       Mangalore Correspondent   ಕರಾವಳಿ

ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಕಳೆದ ಎರಡು ವಾರಗಳಲ್ಲಿ ವಾಹನ ಸವಾರರು ಚಲಿಸಲಾಗದ ಸ್ಥಿತಿ ಉಂಟಾಗಿತ್ತು.

ಮಂಗಳೂರು, ಸೆ.22: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಕಳೆದ ಎರಡು ವಾರಗಳಲ್ಲಿ ವಾಹನ ಸವಾರರು ಚಲಿಸಲಾಗದ ಸ್ಥಿತಿ ಉಂಟಾಗಿತ್ತು. ತಿರುವಿನ ಭಾಗದಲ್ಲಿಯೇ ಇಂತಹ ಸ್ಥಿತಿಯಾಗಿದ್ದರಿಂದ ಅಲ್ಲಿ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯೂ ಭಾರೀ ತ್ರಾಸ ಪಡುತ್ತಿದ್ದರು. ಅಲ್ಲದೆ, ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾಗಿತ್ತು. ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೊಲೀಸ್ ಸಿಬಂದಿಯೇ ಗುಂಡಿ ಬಿದ್ದ ಜಾಗಕ್ಕೆ ಜಲ್ಲಿ ಹುಡಿ ತಂದು ತಾತ್ಕಾಲಿಕ ರಿಪೇರಿ ಕೆಲಸ ಮಾಡಿದ್ದಾರೆ.

ಟ್ರಾಫಿಕ್ ಕರ್ತವ್ಯದಲ್ಲಿದ್ದ ಕದ್ರಿ ಸಂಚಾರಿ ಠಾಣೆ ವಿಭಾಗದ ಎಸ್ಐ ಈಶ್ವರ ಸ್ವಾಮಿ ಮತ್ತು ಎಎಸ್ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿಯನ್ನು ಹಿಡಿದು ತಾವೇ ದುರಸ್ತಿ ಕೆಲಸ ಮಾಡಿದ್ದಾರೆ. ವಾಹನಗಳ ಸಾಗಾಟದ ನಡುವೆಯೇ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ನಂತೂರು ವೃತ್ತದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಜೊತೆಗೂಡುವುದರಿಂದ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಉಡುಪಿ ಕಡೆಯಿಂದ ಬರುವ ದೊಡ್ಡ ಗಾತ್ರದ ವಾಹನಗಳು ಬೆಂಗಳೂರು, ಪುತ್ತೂರು, ಮಡಿಕೇರಿ ಕಡೆಗೆ ಸಾಗಲು ನಂತೂರು ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುತ್ತದೆ. ಅದೇ ಜಾಗದಲ್ಲಿ ಪೂರ್ತಿ ಡಾಮರು ಕಿತ್ತು ಹೋಗಿದ್ದರಿಂದ ಗುಂಡಿ ಬಿದ್ದು ಜಲ್ಲಿ ಜಾರಿ ಹೋಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಾಗಿತ್ತು. ಇತ್ತೀಚೆಗೆ 15 ದಿನಗಳಲ್ಲಿ ಮಳೆ ಹೆಚ್ಚು ಬಿದ್ದಿದ್ದರಿಂದ ಸಂಚಾರವೇ ದುಸ್ತರವಾಗಿತ್ತು. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅಲ್ಲಿಯೇ ನಿಂತು ಪೊಲೀಸರು ಜಾಗ್ರತೆ ವಹಿಸಬೇಕಾದ ಸ್ಥಿತಿಯಿತ್ತು.

ಹೆದ್ದಾರಿ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದ್ದರೂ, ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಪೊಲೀಸ್ ಸಿಬಂದಿಯೇ ಜಲ್ಲಿಯನ್ನು ತಂದು ರಸ್ತೆ ರಿಪೇರಿ ಮಾಡಿಸಿದ್ದಾರೆ. ಪೊಲೀಸರ ಕೆಲಸದ ಬಗ್ಗೆ ಸಾರ್ವಜನಿಕರ ಕಡೆಯಿಂದ ಅಭಿನಂದನೆಗಳ ಮಹಾಪೂರ ಜಾಲತಾಣದಲ್ಲಿ ಹರಿದು ಬಂದಿದೆ. ಇದೇ ಮಳೆಗಾಲದಲ್ಲಿ ಮೂರನೇ ಬಾರಿ ರಸ್ತೆ ಕಿತ್ತು ಹೋಗಿದ್ದು, ಹೆದ್ದಾರಿ ಅಧಿಕಾರಿಗಳ ಕಳಪೆ ಕಾಮಗಾರಿಯನ್ನೂ ಇದು ಎತ್ತಿತೋರಿಸಿದೆ.

Mangalore Traffic police fix dangerous potholes near Nanthoor circle.  Video of the city traffic police repairing a pothole has gone viral on social media. The cops filled a dangerous pothole at Nanthoor on Friday September 22.