Mangalore Eid Milad 2023, Banner Fish Bunder: ವಿವಾದ ಎಬ್ಬಿಸಿದ ಈದ್ ಮಿಲಾದ್ ಕಡ್ಡಾಯ ರಜೆ ಬ್ಯಾನರ್ ; ಮುಸ್ಲಿಮರೇ ಡಾಮಿನೇಟ್ ಇರೋದು, ಬ್ಯಾನರ್ ನಮಗಲ್ಲ, ಅವರಿಗೇ ಎಂದ ಹಿಂದು ವ್ಯಾಪಾರಸ್ಥರು

25-09-23 06:17 pm       Mangalore Correspondent   ಕರಾವಳಿ

ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರೇ ಪ್ರಭಾವಿಗಳಿದ್ದಾರೆ. ಹಿಂದಿನಿಂದಲೂ ಹಿಂದು- ಮುಸ್ಲಿಮರು ಒಗ್ಗಟ್ಟಿನಿಂದಲೇ ವಹಿವಾಟು ಮಾಡಿಕೊಂಡು ಬಂದಿದ್ದಾರೆ.

ಮಂಗಳೂರು, ಸೆ.25: ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರೇ ಪ್ರಭಾವಿಗಳಿದ್ದಾರೆ. ಹಿಂದಿನಿಂದಲೂ ಹಿಂದು- ಮುಸ್ಲಿಮರು ಒಗ್ಗಟ್ಟಿನಿಂದಲೇ ವಹಿವಾಟು ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಈದ್ ಮಿಲಾದ್ ಹೆಸರಲ್ಲಿ ಕಡ್ಡಾಯ ರಜೆಯ ಬ್ಯಾನರ್ ಹಾಕಿರುವುದು ವಿವಾದಕ್ಕೆ ಗುರಿಯಾಗಿದೆ.  

ಆಳಸಮುದ್ರ ಮೀನುಗಾರಿಕೆ ಬಳಿಕ ದಕ್ಕೆಗೆ ಬರುವ ಬೋಟ್ ಗಳಿಂದ ಮೀನುಗಳನ್ನು ಇಳಿಸಿದಲ್ಲಿ ಅವನ್ನು ಖರೀದಿಸುವುದು ವ್ಯಾಪಾರಿಗಳು. ಇವರು ಏಲಂ ಮಾಡಿ ಮೀನುಗಳನ್ನು ಅಗಾಧ ಪ್ರಮಾಣದಲ್ಲಿ ಖರೀದಿಸಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮತ್ತು ಹೊರ ಪ್ರದೇಶಗಳಿಗೆ ಪೂರೈಕೆ ಮಾಡುತ್ತಾರೆ. ಇಂತಹ ದೊಡ್ಡ ವ್ಯಾಪಾರಿಗಳಲ್ಲಿ ಮುಸ್ಲಿಮರದ್ದೇ ಪ್ರಾಬಲ್ಯ. ಸದ್ಯ ಇಂತಹ 25 ವ್ಯಾಪಾರಿಗಳಿದ್ದು, ಈ ಪೈಕಿ ಇಬ್ಬರಷ್ಟೇ ಹಿಂದುಗಳಿದ್ದಾರಂತೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಪ್ರಭಾವ ಹೆಚ್ಚಿದ್ದರಿಂದ ದಕ್ಕೆಯಲ್ಲಿ ಅವರದೇ ಕಾರುಬಾರು ಎನ್ನುತ್ತಾರೆ, ಬೋಟ್ ಮಾಲೀಕರು.

ಹಾಗೆಂದು, ದಕ್ಕೆಯಲ್ಲಿ ಮತದ ಹೆಸರಲ್ಲಿ ಭೇದ ಇರಲಿಲ್ಲ. ಹಿಂದು, ಮುಸ್ಲಿಮರ ಹಬ್ಬಗಳ ದಿನದಂದು ಸ್ವಯಂಪ್ರೇರಿತ ರಜೆ ಘೋಷಿಸಿಕೊಂಡು ಸೌಹಾರ್ದ ವಾತಾವರಣ ಇದೆ. ಈ ಬಾರಿ ಸೆ.28ರ ಈದ್ ಮಿಲಾದ್ ದಿನದ ಹೆಸರಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿದ್ದು, ಹಿಂದುಗಳನ್ನೇ ಟಾರ್ಗೆಟ್ ಮಾಡಿದ್ದಾಗಿ ಹಿಂದು ಸಂಘಟನೆಗಳು ಆಕ್ರೋಶ ಎಬ್ಬಿಸಿವೆ. ಇದಕ್ಕೆ ಕಾರಣವಾಗಿರುವುದು ಬ್ಯಾನರಿನಲ್ಲಿ ಹಾಕಿದ್ದ ಅಂಶಗಳು. ಸೆ.28ರ ಈದ್ ದಿನದಂದು ಬೆಳಗ್ಗೆ 3.45ರಿಂದಲೇ ರಜೆ ಇದ್ದು, ಯಾರು ಕೂಡ ಮೀನು ವ್ಯಾಪಾರ ಮಾಡಬಾರದು. ದಕ್ಕೆಯಲ್ಲಿ ವ್ಯಾಪಾರ ಮಾಡಿದರೆ, ಅಂಥವರನ್ನು ಒಂದು ತಿಂಗಳ ಕಾಲ ಬಹಿಷ್ಕರಿಸಲಾಗುವುದು. ಅಲ್ಲದೆ, ದಂಡನೆ ವಿಧಿಸಲಾಗುವುದು ಎಂದು ಬ್ಯಾನರ್ ಹಾಕಲಾಗಿದೆ.

ಈ ಬಗ್ಗೆ ಅಲ್ಲಿನ ವ್ಯಾಪಾರಿಗಳಲ್ಲಿ ಮಾಹಿತಿ ಕೇಳಿದಾಗ, ನಮ್ಮಲ್ಲಿ ಭೇದ ಇಲ್ಲ. ಹಿಂದಿನಿಂದಲೂ ಹಿಂದು – ಮುಸ್ಲಿಮರ ತಲಾ ನಾಲ್ಕು ಹಬ್ಬಗಳಿಗೆ ರಜೆ ಇದೆ. ಕ್ರಿಸ್ಮಸ್ ಸೇರಿ ಕ್ರೈಸ್ತರ ಮೂರು ಹಬ್ಬಗಳ ದಿನದಂದೂ ರಜೆ ಇದೆ. ಇವೆಲ್ಲ ಅಲಿಖಿತ ನಿಮಯದಂತೆ ನಡೆದುಕೊಂಡು ಬಂದಿದೆ. ರಜೆ ಇದ್ದ ದಿವಸ ಬೋಟಿನಿಂದ ಮೀನು ಇಳಿಸುವುದಾಗಲೀ, ದಕ್ಕೆಯಲ್ಲಿ ಮೀನು ವ್ಯಾಪಾರ ಆಗಲೀ ಇರುವುದಿಲ್ಲ. ಮೊನ್ನೆ ಗಣೇಶೋತ್ಸವ ದಿನ ರಜೆ ಇದ್ದರೂ, ನಸುಕಿನ 3 ಗಂಟೆ ವೇಳೆಗೆ ಒಂದಿಬ್ಬರು ಪರ್ಸೀನ್ ಬೋಟಿನಿಂದ ಮೀನು ಖರೀದಿಸಿ, ಮಾರಾಟ ಮಾಡಿದ್ದಾರೆ. ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಬ್ಯಾನರ್ ಹಾಕಲಾಗಿದೆ. ರಜೆಯಂದ್ರೆ 6 ಗಂಟೆಯಿಂದ 6 ಗಂಟೆ ವರೆಗೆ ಅಲ್ಲ. ಬೆಳಗ್ಗೆ 3.45ಕ್ಕೇ ಶುರುವಾಗುತ್ತದೆ ಎಂಬುದನ್ನು ತಿಳಿಸಲು ಬ್ಯಾನರ್ ಹಾಕಿದ್ದೇವೆ ಎಂದಿದ್ದಾರೆ.

ಆದರೆ ಈ ರೀತಿ ಹಿಂದೆ ಯಾವತ್ತೂ ಬ್ಯಾನರ್ ಹಾಕಿದ್ದಿಲ್ಲ. ಮುಸ್ಲಿಂ ಡಾಮಿನೇಟ್ ಇರುವ ವ್ಯಾಪಾರಸ್ಥರ ಸಂಘವು ಮುಸ್ಲಿಮರ ಹಬ್ಬಕ್ಕೆ ಕಡ್ಡಾಯ ರಜೆಯ ಬ್ಯಾನರ್ ಹಾಕಿರುವುದು ಹಿಂದುಗಳ ಕಣ್ಣಲ್ಲಿ ತಮ್ಮನ್ನು ಗುರಿ ಮಾಡಲಾಗಿದೆ ಎನ್ನುವಂತೆ ಕಂಡಿದೆ. ಅಲ್ಲದೆ, ಕಾನೂನು ಉಲ್ಲಂಘಿಸಿ ವ್ಯಾಪಾರ ಮಾಡಿದರೆ, ಅಂಥವರನ್ನು ಬಹಿಷ್ಕರಿಸುವುದು ಸೇರಿದಂತೆ ದಂಡನೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ಹಿಂದು ಸಂಘಟನೆಗಳನ್ನು ಕೆರಳಿಸಿದೆ. ಹಿಂದು ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕೋದಕ್ಕೆ ಇಲ್ಲೇನು ಷರೀಯತ್ ಕಾನೂನು ಇದೆಯಾ ಎಂದು ಹಿಂದು ಮುಖಂಡರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ದಕ್ಕೆಯ ಹಿಂದು ವ್ಯಾಪಾರಸ್ಥರಲ್ಲಿ ಕೇಳಿದರೆ, ಮುಸ್ಲಿಮರು ಮುಸ್ಲಿಮರಿಗಾಗಿಯೇ ಅದನ್ನು ಹಾಕಿರೋದು, ತಮಗಲ್ಲ. ಅವರದೇ ವ್ಯಾಪಾರಸ್ಥರು ಹೆಚ್ಚಿರೋದು. ನಾವು ಒಂದಿಬ್ಬರಿದ್ದು ಬ್ಯಾನರ್ ನಮ್ಮನ್ನು ಟಾರ್ಗೆಟ್ ಮಾಡಿಲ್ಲ ಅಂತಿದ್ದಾರೆ.

Mangalore Eid Milad 2023, Banner Fish Bunder: ಈದ್ ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ; ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್, ಷರೀಯತ್ ಕಾನೂನು ಇದ್ಯಾ ಎಂದು ಹಿಂದು ಸಂಘಟನೆಗಳ ಆಕ್ರೋಶ

Eid Milad 2023 banner row in Mangalore, Holiday is only for Muslim traders not for Hindus.