Muslim family in Gokarna perform Pitrakarya at temple: ಕಾರವಾರ ; ಜ್ಯೋತಿಷಿ ಸಲಹೆ, ಇದೇ ಮೊದಲ ಬಾರಿಗೆ ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ !

07-10-23 06:29 pm       HK News Desk   ಕರಾವಳಿ

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪಿತೃಕಾರ್ಯ ನೆರವೇರಿಸಲಾಗುತ್ತದೆ. ಆದರೆ ಮುಸ್ಲಿಂ ಕುಟುಂಬವೊಂದು ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದೆ.

ಕಾರವಾರ, ಅ.7: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪಿತೃಕಾರ್ಯ ನೆರವೇರಿಸಲಾಗುತ್ತದೆ. ಆದರೆ ಮುಸ್ಲಿಂ ಕುಟುಂಬವೊಂದು ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದೆ. ಧಾರವಾಡ ಧಾನೇಶ್ವರಿ ನಗರದ ಶಂಸಾದ್ ಎಂಬುವರು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು ಇಲ್ಲಿನ ಪಿತೃಶಾಲೆಯಲ್ಲಿ ಪೂರೈಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಸಾದ್​, ನಾವು ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರು. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಬೆಳೆದವರು. ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಬಳಿ ಹೋಗಿದ್ದೆವು. ಅವರು ತಿಳಿಸಿದಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳ್ಗೆ ಸಿಗಲಿ ಎಂಬ ಉದ್ದೇಶದಿಂದ ಈ ಪಿತೃ ಕಾರ್ಯ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜ್ಯೋತಿಷಿಗಳ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ನಾಗರಾಜ ಭಟ್ ಗುರ್ಲಿಂಗ್ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಗೋಕರ್ಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು, ವಿದೇಶಿಗರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬವೊಂದು ಪಿತೃಕಾರ್ಯ ನೆರವೇರಿಸಿದ್ದು, ಇದೇ ಮೊದಲು ಎಂದು ಹೇಳಲಾಗಿದೆ.

Muslim family in Gokarna perform Pitrakarya at temple, first time ever.Pitrakarya is usually performed in Hinduism. But a Muslim family has recently performed the patrimony in Gokarna during the festival of the patriarch. Shamsad of Dhaneshwari Nagar, Dharwad, performed Narayana Bali, Tripindi Shraddha and Thilahavana at the Pitrushala here on the advice of an astrologer.