ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ ಕೆಪಿಟಿಗೆ ಸ್ವಾಯತ್ತ ಮಾನ್ಯತೆ ; ಈ ಸ್ಥಾನ ಪಡೆದ ಮೊದಲ ಪಾಲಿಟೆಕ್ನಿಕ್ ಗರಿಮೆ, ಆಧುನಿಕ ಪಠ್ಯಕ್ರಮ ರಚನೆಗೆ ಅನುಕೂಲ 

24-01-26 08:14 pm       Mangaluru Staffer   ಕರಾವಳಿ

ರಾಜ್ಯದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ತನ್ನ 78 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸ್ವಾಯತ್ತ ಮಾನ್ಯತೆ ಪಡೆದ ದೇಶದ ಮೊದಲ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ.

ಮಂಗಳೂರು, ಜ.24: ರಾಜ್ಯದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ತನ್ನ 78 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸ್ವಾಯತ್ತ ಮಾನ್ಯತೆ ಪಡೆದ ದೇಶದ ಮೊದಲ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ.

ಈ ಹಿಂದೆ AICTE ಕೇವಲ ಎಂಜಿನಿಯರಿಂಗ್ ಕಾಲೇಜುಗಳಿಗೆ ಮಾತ್ರ ಸ್ವಾಯತ್ತ ಸ್ಥಾನ ನೀಡುತ್ತಿತ್ತು. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈಗ ಡಿಪ್ಲೊಮಾ ಸಂಸ್ಥೆಗಳಿಗೂ ಈ ಅವಕಾಶ ನೀಡಲಾಗಿದೆ. 25 ವರ್ಷಕ್ಕಿಂತ ಹಳೆಯದಾದ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮೊದಲ ಹಂತದಲ್ಲಿ ಆಯ್ಕೆಯಾದ 100 ಕಾಲೇಜುಗಳಲ್ಲಿ, ಅಂತಿಮವಾಗಿ ಶಾರ್ಟ್‌ ಲಿಸ್ಟ್ ಆದ 15 ಕಾಲೇಜುಗಳಲ್ಲಿ ಮಂಗಳೂರಿನ ಕೆಪಿಟಿ ಅಗ್ರಸ್ಥಾನ ಪಡೆದುಕೊಂಡಿದೆ. 

ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯು ಇದಕ್ಕೆ ಅನುಮೋದನೆ ನೀಡಿದ್ದು, ಕೆಪಿಟಿ ಈಗಾಗಲೇ ಸ್ವಾಯತ್ತ ಸಂಸ್ಥೆಯಾಗಿ ಒಂದು ಸೆಮಿಸ್ಟರ್ ಅನ್ನು ಯಶಸ್ವಿಯಾಗಿ ಪೂರೈಸಿದೆ.

ಸ್ವಾಯತ್ತ ಸ್ಥಾನಮಾನದಿಂದ ಲಾಭಗಳು 

ಆಧುನಿಕ ಶಿಕ್ಷಣದ ಇಂದಿನ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ತಾನೇ ರೂಪಿಸಿಕೊಳ್ಳಬಹುದು. ತನ್ನದೇ ಆದ ಪರೀಕ್ಷಾ ಸಮಿತಿಗಳನ್ನು ರಚಿಸಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಮೌಲ್ಯಮಾಪನ ನಡೆಸಿ ಅಂಕಪಟ್ಟಿಗಳನ್ನು ನೀಡಬಹುದು. ಸರ್ಕಾರದ ಅಧಿಸೂಚನೆಗಾಗಿ ಕಾಯದೆ ನೇರವಾಗಿ ಪ್ರವೇಶ ಪ್ರಕ್ರಿಯೆ ನಡೆಸಬಹುದು. AICTE ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದಿಂದ ನೇರವಾಗಿ ಅನುದಾನ ಪಡೆಯಲು ಹೆಚ್ಚಿನ ಆದ್ಯತೆ ಸಿಗಲಿದೆ. 

1946ರಲ್ಲಿ ಸ್ಥಾಪನೆ, 19 ಎಕರೆ ಕ್ಯಾಂಪಸ್ 

1946ರಲ್ಲಿ ಸ್ಥಾಪನೆಯಾದ ಕೆಪಿಟಿ, ಕರ್ನಾಟಕದ ಎರಡನೇ ಅತಿದೊಡ್ಡ ಪಾಲಿಟೆಕ್ನಿಕ್ ಆಗಿದ್ದು 78 ವರ್ಷಗಳಲ್ಲಿ ಸಾವಿರಾರು ಮಂದಿ ಈ ಸಂಸ್ಥೆಯ ಮೂಲಕ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಿದ್ದಾರೆ. ‌1946ರಲ್ಲಿ ಕೇವಲ ನಾಲ್ಕು ವಿಭಾಗಗಳೊಂದಿಗೆ ಆರಂಭವಾದ ಈ ಸಂಸ್ಥೆ ಇಂದು 19 ಎಕರೆ ವಿಸ್ತೀರ್ಣದ ಕ್ಯಾಂಪಸ್ ಹೊಂದಿದ್ದು, ಕಂಪ್ಯೂಟರ್ ಸೈನ್ಸ್, ಪಾಲಿಮರ್ ಟೆಕ್ನಾಲಜಿ ಸೇರಿದಂತೆ ಎಂಟು ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದೆ. ಪ್ರತಿ ವರ್ಷ ಸುಮಾರು 500 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಸತತ 12 ವರ್ಷಗಳಿಂದ ಕ್ರೀಡಾ ಚಾಂಪಿಯನ್ ಆಗಿರುವುದು, ಶೇ. 100 ರಷ್ಟು ದಾಖಲಾತಿ ಮತ್ತು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುತ್ತಿರುವುದು ಸ್ವಾಯತ್ತ ಸ್ಥಾನಮಾನ ಸಿಗಲು ಪ್ರಮುಖ ಕಾರಣ ಎನ್ನಲಾಗಿದೆ.

One of the oldest technical education institutions in the country, Karnataka (Government) Polytechnic (KPT), Mangaluru, has achieved a major milestone in its 78-year history by being granted autonomous status. With this, KPT has become the first government polytechnic in India to receive autonomous recognition from the All India Council for Technical Education (AICTE)