ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲಾಯಿಸಿ ಅಪಘಾತಗಳಾದರೆ ಕೊಲೆಗೆ ಸಮಾನವೆಂದು ಪರಿಗಣಿಸಿ ಕೇಸು ; ಕಮಿಷನರ್ ಸುಧೀರ್ ರೆಡ್ಡಿ ವಾರ್ನಿಂಗ್

27-01-26 10:50 pm       Mangalore Correspondent   ಕರಾವಳಿ

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಹೊಸ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕುಡಿದು ಅಥವಾ ಯಾವುದೇ ರೀತಿಯ ವ್ಯಸನದಿಂದ ವಾಹನ ಚಲಾಯಿಸಿ ಅಪಘಾತಗಳಾದರೆ, ಅದರಿಂದ ಸಾವು ಸಂಭವಿಸಿದಲ್ಲಿ ಅದನ್ನು ಕೊಲೆಗೆ ಸಮಾನ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು, ಈ ಕೇಸು ದಾಖಲಾದರೆ ಹತ್ತು ವರ್ಷ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು, ಜ.27 : ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಹೊಸ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕುಡಿದು ಅಥವಾ ಯಾವುದೇ ರೀತಿಯ ವ್ಯಸನದಿಂದ ವಾಹನ ಚಲಾಯಿಸಿ ಅಪಘಾತಗಳಾದರೆ, ಅದರಿಂದ ಸಾವು ಸಂಭವಿಸಿದಲ್ಲಿ ಅದನ್ನು ಕೊಲೆಗೆ ಸಮಾನ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು, ಈ ಕೇಸು ದಾಖಲಾದರೆ ಹತ್ತು ವರ್ಷ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಲುವಾಗಿ ನಗರದ ಪುರಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಮಿಷನರ್ ಸುಧೀರ್ ರೆಡ್ಡಿ ಮಾತನಾಡಿದರು. ಅಪ್ರಾಪ್ತರಿಗೆ ವಾಹನಗಳನ್ನು ಕೊಡಿಸುವುದು, ಕುಡಿದು ವಾಹನ ಚಲಾಯಿಸುವುದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಕಠಿಣ ಕ್ರಮ ಜರುಗಿಸಲಿದ್ದೇವೆ. ಇಷ್ಟೆಲ್ಲ ರಸ್ತೆ ಸುರಕ್ಷೆ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದರೂ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲೇ 2025ರಲ್ಲಿ 171 ರಸ್ತೆ ಅಪಘಾತಗಳಾಗಿದ್ದು, ಇದರಲ್ಲಿ 25 ಕೇಸುಗಳು ಅಪ್ರಾಪ್ತರು ವಾಹನ ಚಲಾಯಿಸಿದ್ದರಿಂದ ಆಗಿವೆ. ಉಳಿದುದರಲ್ಲಿ ಹೆಚ್ಚಿನ ಪ್ರಕರಣಗಳು ಕುಡಿದು ವಾಹನ ಚಲಾಯಿಸಿದ್ದರಿಂದ ಆಗಿರುವಂಥವು. ಈ ರೀತಿಯ ಅಪಘಾತಗಳು ಹೆಚ್ಚುತ್ತಿರುವ ಕಾರಣದಿಂದ ಟ್ರಾಫಿಕ್ ಪೊಲೀಸರಿಗೆ ಕೊಲೆಗೆ ಸಮಾನ ಎನ್ನುವಂತಹ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ ಎಂದರು.

ಮಂಗಳೂರಿನಲ್ಲಿ 169 ಅಪಘಾತ ಪ್ರಕರಣಗಳು ನಿರ್ಲಕ್ಷ್ಯದಿಂದಲೇ ಆಗಿರುವಂಥವು. ಒಂದೆರಡು ಕೇಸುಗಳು ಮಾತ್ರ ರಸ್ತೆ ಗುಂಡಿ ಮತ್ತಿತರ ಕಾರಣಕ್ಕೆ ಆಗಿರಬಹುದು. ಆದರೆ ಅಪಘಾತಗಳಿಗೆ ರಸ್ತೆ ಗುಂಡಿ, ಆಡಳಿತವನ್ನು ಮಾತ್ರ ದೂಷಣೆ ಮಾಡುತ್ತಾರೆ. ಯಾರು ಕೂಡ ವಾಹನ ಚಲಾವಣೆಯ ನಿರ್ಲಕ್ಷ್ಯದಿಂದ ಆಗಿರುವುದೆಂದು ಹೇಳುವುದಿಲ್ಲ. ವಾಹನ ಚಲಾವಣೆ ವೇಳೆ ಗಂಭೀರ ವಹಿಸುವುದಿಲ್ಲ ಎಂದು ಹೇಳಿದರು.

ಇಲ್ಲಿ ಕಮ್ಯುನಲ್ ಅಥವಾ ರಾಜಕೀಯ ಕಾರಣಕ್ಕೆ ಕೊಲೆಗಳಾದರೆ ಮಾತ್ರ ಸೀರಿಯಸ್ ಆಗುತ್ತಾರೆ. ಅಪಘಾತಗಳಿಂದ ಸಾವು ಆದಲ್ಲಿ ಅದನ್ನು ಗಂಭೀರ ವಹಿಸುವುದಿಲ್ಲ. ಕೆಲವೊಮ್ಮೆ ಅದನ್ನು ಕಮ್ಯುನಲ್ ಏಂಗಲ್ ನಲ್ಲಿ ನೋಡಲು ಯತ್ನಿಸುತ್ತಾರೆ. ಇದನ್ನು ಸಹಿಸಲಾಗದು ಎಂದು ಹೇಳಿದ ಕಮಿಷನರ್ ರೆಡ್ಡಿ, ರಸ್ತೆ ಅಪಘಾತವನ್ನು ತಪ್ಪಿಸುವುದು ಕೇವಲ ಪೊಲೀಸರ ಕೆಲಸ ಅಲ್ಲ, ಅದು ಪ್ರತಿ ನಾಗರಿಕನ ಜವಾಬ್ದಾರಿ. ಪ್ರತಿ ವಾಹನದ ಚಾಲಕನೂ ನಾವು ಎಚ್ಚರದಿಂದ ವಾಹನ ಚಲಾಯಿಸಿದಲ್ಲಿ ಬೇರೆಯವರು ತಪ್ಪು ಮಾಡಿದರೂ ನಮಗೇನೂ ಆಗುವುದಿಲ್ಲ ಎಂಬ ಎಚ್ಚರದಲ್ಲಿ ಇರಬೇಕು ಎಂದು ಸಲಹೆ ನೀಡಿದರು. ಎಲ್ಲ ನಾಗರಿಕರು ಕೂಡ ಅವರಾಗಿಯೇ ನಮ್ಮ ಕರ್ತವ್ಯ, ಜವಾಬ್ದಾರಿಗಳೇನು ಅನ್ನುವುದನ್ನು ಅರಿತು ಅಪಘಾತಗಳೂ ಆಗುವುದಿಲ್ಲ, ಕಮ್ಯುನಲ್ ರೀತಿಯ ತೊಂದರೆಗಳೂ ಆಗುವುದಿಲ್ಲ. ನಾವು ಆ ದಿನಕ್ಕಾಗಿ ಕಾಯುತ್ತಿದ್ದೇವೆ ಎಂದು ಸುಧೀರ್ ರೆಡ್ಡಿ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತುಳು ಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್, ನಮ್ಮ ನಿರ್ಲಕ್ಷ್ಯದಿಂದಲೇ ಅಪಘಾತಗಳಾಗೋದು, ಪ್ರತಿ ವ್ಯಕ್ತಿಯೂ ಮನೆಯಿಂದ ಹೊರಗೆ ಕಾಲಿಡುವಾಗ ನಮ್ಮ ಮನೆಯವರು ನಮಗಾಗಿ ಕಾಯುತ್ತಿರುತ್ತಾರೆ ಎಂಬ ಕಾಳಜಿ ಇಟ್ಟುಕೊಂಡು ವಾಹನ ಚಲಾಯಿಸಿದಲ್ಲಿ ಅಪಘಾಗಳೇ ಆಗಲ್ಲ ಎಂದರು. ಡಾ.ಅರ್ಜುನ್ ಶೆಟ್ಟಿ, ಜಿಲ್ಲಾ ನ್ಯಾಯಾಧೀಶೆ ಜೈಬುನ್ನೀಸಾ, ಡಿಸಿಪಿಗಳಾದ ಮಿಥುನ್ ಕುಮಾರ್, ಉಮೇಶ್, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮತ್ತಿತರರಿದ್ದರು.

In view of the rising number of road accidents, Mangaluru Police Commissioner Sudheer Kumar Reddy has announced strict action against drunken driving. He warned that if a person drives under the influence of alcohol or any intoxicant and causes an accident resulting in death, the case will be registered as equivalent to murder. Such a case can attract punishment of up to 10 years imprisonment.