ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ; ಲಕ್ಷಕ್ಕೂ ಹೆಚ್ಚು ವೇತನ, ಗೇಟ್ ಪರೀಕ್ಷೆ ಬರೆದಿದ್ದರೆ ಈಗಲೇ ಅರ್ಜಿ ಸಲ್ಲಿಸಿ..

24-08-26 01:13 pm       HK News Staffer   ಕರಾವಳಿ

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು ಇದೇ ಆಗಸ್ಟ್ 21ರಿಂದ ಸೆಪ್ಟೆಂಬರ್ 19ರೊಳಗೆ ಅರ್ಜಿ ಸಲ್ಲಿಸಬಹುದು. ಮ್ಯಾನೇಜ್‌ಮೆಂಟ್ ಕೇಡರ್‌ನ ಇ-2 ಗ್ರೇಡ್ ಅಡಿಯಲ್ಲಿ ಬರುವ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳ ಭರ್ತಿ ಮಾಡಲು MRPL ನೇಮಕಾತಿ 2026 ರ ಅಧಿಸೂಚನೆ ಪ್ರಕಟಿಸಲಾಗಿದೆ.

ಮಂಗಳೂರು, ಆ.24: ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು ಇದೇ ಆಗಸ್ಟ್ 21ರಿಂದ ಸೆಪ್ಟೆಂಬರ್ 19ರೊಳಗೆ ಅರ್ಜಿ ಸಲ್ಲಿಸಬಹುದು. ಮ್ಯಾನೇಜ್‌ಮೆಂಟ್ ಕೇಡರ್‌ನ ಇ-2 ಗ್ರೇಡ್ ಅಡಿಯಲ್ಲಿ ಬರುವ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳ ಭರ್ತಿ ಮಾಡಲು MRPL ನೇಮಕಾತಿ 2026 ರ ಅಧಿಸೂಚನೆ ಪ್ರಕಟಿಸಲಾಗಿದೆ. 

ಕೆಮಿಕಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿಭಾಗಗಳಲ್ಲಿ ಒಟ್ಟು 26 ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಗೇಟ್-2026 (GATE) ಪರೀಕ್ಷೆಯ ಸ್ಕೋರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್ ಮಾಡಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 19 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ.

ಆಯ್ಕೆಯಾಗುವ ಯುವ ಎಂಜಿನಿಯರ್‌ಗಳಿಗೆ 50 ಸಾವಿರದಿಂದ 1.60 ಲಕ್ಷ ರೂಪಾಯಿ ವರೆಗೆ ಆಕರ್ಷಕ ವೇತನ ಹಾಗೂ ಇತರ ಭತ್ಯೆಗಳು ಸಿಗಲಿವೆ. ಯಾವುದೇ ಕಠಿಣ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ ಗೇಟ್ ಪರೀಕ್ಷೆಯ ಅಂಕಗಳ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 26 ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳನ್ನು ಮೀಸಲಾತಿ ಅನ್ವಯ ಎರಡಾಗಿ ವಿಂಗಡಿಸಲಾಗಿದೆ.

ಭಾಗ 'ಎ' (ವಿಶೇಷ ನೇಮಕಾತಿ ಅಭಿಯಾನ - SC/ST/OBC ಗೆ ಮಾತ್ರ): ಮೆಕ್ಯಾನಿಕಲ್ ಇಂಜಿನಿಯರಿಂಗ್ (08 ಹುದ್ದೆಗಳು): ಒಬಿಸಿ ಅಭ್ಯರ್ಥಿಗಳಿಗೆ 4, ಎಸ್‌ಸಿಗೆ 3 ಹಾಗೂ ಎಸ್‌ಟಿ ವರ್ಗಕ್ಕೆ 1 ಹುದ್ದೆ ಇದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (03 ಹುದ್ದೆಗಳು): ಒಬಿಸಿ, ಎಸ್‌ಸಿ ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ ತಲಾ 1 ಹುದ್ದೆ ಮೀಸಲು.  

ಭಾಗ 'ಬಿ' (ಕೆಮಿಕಲ್ ಇಂಜಿನಿಯರಿಂಗ್ -: ಕೆಮಿಕಲ್ ಇಂಜಿನಿಯರಿಂಗ್ (15 ಹುದ್ದೆಗಳು): ಸಾಮಾನ್ಯ (UR) ವರ್ಗಕ್ಕೆ 8, ಇಡಬ್ಲ್ಯೂಎಸ್‌ಗೆ 1, ಒಬಿಸಿಗೆ 3, ಎಸ್‌ಸಿಗೆ 2 ಹಾಗೂ ಎಸ್‌ಟಿ ವರ್ಗಕ್ಕೆ 1 ಹುದ್ದೆ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಮಾನದಂಡಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಐಸಿಟಿಇ ಅಥವಾ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ 4 ವರ್ಷಗಳ ಬಿ.ಇ, ಬಿ.ಟೆಕ್ ಅಥವಾ ಬಿ.ಎಸ್ಸಿ (ಎಂಜಿನಿಯರಿಂಗ್) ಪೂರ್ಣಗೊಳಿಸಿರಬೇಕು.
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ವರ್ಗದವರು ಪದವಿಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಪಡೆದಿರಬೇಕು. ಎಸ್‌ಸಿ, ಎಸ್‌ಟಿ ಹಾಗೂ ವಿಕಲಚೇತನರು ಕನಿಷ್ಠ ಶೇ. 50 ಅಂಕ ಗಳಿಸಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಗೇಟ್-2026 (GATE 2026) ಪರೀಕ್ಷೆ ಬರೆದು ಮಾನ್ಯತೆ ಪಡೆದ ಸ್ಕೋರ್ ಹೊಂದಿರಲೇಬೇಕು. ಹಿಂದಿನ ವರ್ಷಗಳ ಗೇಟ್ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. 

ಸೆಪ್ಟೆಂಬರ್ 19, 2026ಕ್ಕೆ ಅನ್ವಯಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಸಾಮಾನ್ಯ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ,
ಒಬಿಸಿ (ನಾನ್-ಕ್ರೀಮಿ ಲೇಯರ್) ವರ್ಗದವರಿಗೆ 3 ವರ್ಷ ಸಡಿಲಿಕೆ ಇದ್ದು, ಗರಿಷ್ಠ 30 ವರ್ಷದ ವರೆಗೆ ಅವಕಾಶವಿದೆ. ಎಸ್‌ಸಿ ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ (ಗರಿಷ್ಠ 32 ವರ್ಷ) ಹಾಗೂ ವಿಕಲಚೇತನರಿಗೆ 10 ವರ್ಷಗಳ ವರೆಗೆ ವಯೋಮಿತಿ ವಿನಾಯಿತಿ ಸಿಗಲಿದೆ.

ಆನ್ಲೈನ್ ಅರ್ಜಿ ಸಲ್ಲಿಕೆಗೆ ಎಂಆರ್‌ಪಿಎಲ್ ಅಧಿಕೃತ ವೆಬ್‌ಸೈಟ್ (www.mrpl.co.in/careers) ಗೆ ಭೇಟಿ ನೀಡಿ, ಅಲ್ಲಿ Advt. No. 94/2026 ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸದಾಗಿ ರಿಜಿಸ್ಟರ್ ಆಗಿ ಲಾಗಿನ್ ಐಡಿ, ಪಾಸ್‌ವರ್ಡ್ ಪಡೆದು ವೈಯಕ್ತಿಕ ವಿವರ, ಡಿಗ್ರಿ ಅಂಕಗಳು ಹಾಗೂ ಗೇಟ್-2026 ಸ್ಕೋರ್ ಮಾಹಿತಿಯನ್ನು ತುಂಬಿಸಬೇಕು ಎಂದು ಪ್ರಕಟಣೆ ತಿಳಿಸಿದೆ.