U T Khader, Mangalore : ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟು ನಿಟ್ಟಿನ ಕ್ರಮ: ಮೂಡುಶೆಡ್ಡೆ ಕೇಂದ್ರದ ಆಹಾರ ಮಾದರಿ ಲ್ಯಾಬ್‌ಗೆ ರವಾನೆ!

16-09-26 11:28 am       HK News Staffer   ಕರಾವಳಿ

ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುವ ಪೂರಕ ಪೌಷ್ಟಿಕ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮೂಡುಶೆಡ್ಡೆಯ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದಲ್ಲಿ (MSPC) ಸಿದ್ಧಪಡಿಸಲಾಗುವ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಸಚಿವರ ಪ್ರಕಟಣೆ ತಿಳಿಸಿದೆ.

ಮಂಗಳೂರು , ಸೆಪ್ಟೆಂಬರ್ 16:  ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುವ ಪೂರಕ ಪೌಷ್ಟಿಕ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮೂಡುಶೆಡ್ಡೆಯ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದಲ್ಲಿ (MSPC) ಸಿದ್ಧಪಡಿಸಲಾಗುವ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಸಚಿವರ ಪ್ರಕಟಣೆ ತಿಳಿಸಿದೆ.

MSPC ಕೇಂದ್ರಕ್ಕೆ ಅಧಿಕಾರಿಗಳ ಭೇಟಿ: ಸಮಗ್ರ ಪರಿಶೀಲನೆ

ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನೀಡಲಾದ ಆದೇಶದಂತೆ, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕು ಹಾಗೂ ನಗರ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.

ಅಂಗನವಾಡಿ ಮಕ್ಕಳಿಗೆ ವಿತರಿಸುವ ಆಹಾರ ಸಂಪೂರ್ಣ ಸುರಕ್ಷಿತವಾಗಿದ್ದು, ಉತ್ತಮ ಗುಣಮಟ್ಟ ಮತ್ತು ಶುಚಿತ್ವದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಪರಿಶೀಲನೆ ನಡೆಸಲಾಯಿತು.

‘ಪುಷ್ಟಿ’, ಮಿಲ್ಲೆಟ್ ಲಡ್ಡು ಮಿಕ್ಸ್ ಮಾದರಿ ಸಂಗ್ರಹ

ಅಧಿಕಾರಿಗಳು ಕೇಂದ್ರದಲ್ಲಿ ಮಕ್ಕಳಿಗೆ ವಿತರಿಸಲಾಗುವ ‘ಪುಷ್ಟಿ’, ‘ಮಿಲ್ಲೆಟ್ ಲಡ್ಡು ಮಿಕ್ಸ್’ ಸೇರಿದಂತೆ ವಿವಿಧ ಪೂರಕ ಆಹಾರಗಳ ತಯಾರಿಕಾ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಆಹಾರ ತಯಾರಿಕಾ ಹಂತದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಕೇಂದ್ರದ ಸಿಬ್ಬಂದಿಗೆ ಮಾಹಿತಿ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಾಯಿತು. ಜೊತೆಗೆ ‘ಪುಷ್ಟಿ’, ಮಿಲ್ಲೆಟ್ ಲಡ್ಡು ಪೌಡರ್ ಹಾಗೂ ಸಾಂಬಾರ್ ಪೌಡರ್‌ಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಂತ್ರದ ಮೂಲಕ ಪ್ಯಾಕಿಂಗ್‌ಗೆ ಸೂಚನೆ

ಆಹಾರ ತಯಾರಿಕಾ ಕೇಂದ್ರದಲ್ಲಿ ಪ್ಯಾಕಿಂಗ್ ಕಾರ್ಯವನ್ನು ಯಂತ್ರೋಪಕರಣಗಳ ಮೂಲಕವೇ ನಿರ್ವಹಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ.

ಫುಡ್ ಗ್ರೇಡ್ ಪ್ಲಾಸ್ಟಿಕ್, ಲೇಬಲಿಂಗ್ ಕಡ್ಡಾಯ

ಆಹಾರ ಪದಾರ್ಥಗಳ ಪ್ಯಾಕಿಂಗ್‌ಗೆ ಉತ್ತಮ ಗುಣಮಟ್ಟದ ಫುಡ್ ಗ್ರೇಡ್ ಪ್ಲಾಸ್ಟಿಕ್ ಬಳಸುವುದು ಕಡ್ಡಾಯ ಎಂದು ಕೇಂದ್ರದ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಅದೇ ರೀತಿ, ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ ಹಾಗೂ ಬ್ಯಾಚ್ ನಂಬರ್ ಸೇರಿದಂತೆ ಲೇಬಲಿಂಗ್‌ನ ಪ್ರಮುಖ ವಿವರಗಳನ್ನು ಸೂಕ್ತ ಯಂತ್ರೋಪಕರಣಗಳ ಮೂಲಕ ಸ್ಪಷ್ಟವಾಗಿ ಮುದ್ರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವರ ಪ್ರಕಟಣೆ ತಿಳಿಸಿದೆ.

ಅಂಗನವಾಡಿ ಮಕ್ಕಳಿಗೆ ತಲುಪುವ ಪೂರಕ ಪೌಷ್ಟಿಕ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಮೇಲ್ವಿಚಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Health Minister U.T. Khader has directed officials to take strict measures to ensure the quality and safety of supplementary nutritional food distributed to Anganwadi children. Following his directions, samples of various food products prepared at the Supplementary Nutrition Food Manufacturing Centre (MSPC) in Moodushedde have been collected and sent to a food laboratory for testing, according to a statement issued by the Health Minister.