Mangalore Jail, Fight, Crime: ಜೈಲಿನಲ್ಲಿ ಬೀಡಿ ಕೊಡದಿದ್ದರೆ ಅಡುಗೆ ಮಾಡಿಸಲು ಬಿಡಲ್ಲ, ಮಾಡಿದರೆ ಜಿರಳೆ ಹಾಕಿಸಿ ವರ್ಗಾಯಿಸುತ್ತೇವೆ ! ಜೈಲು ಅಧೀಕ್ಷಕರಿಗೆ ವಾರ್ನಿಂಗ್, ಜೈಲಿನಲ್ಲಿ ಕೈದಿ ದಾಂಧಲೆ 

16-09-26 10:46 pm       HK News Staffer   ಕರಾವಳಿ

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ತನಗೆ ಬೀಡಿ ನೀಡುವಂತೆ ಒತ್ತಾಯಿಸಿ ಸಹವರ್ತಿಗಳೊಂದಿಗೆ ಸೇರಿ ಅಡುಗೆ ತಯಾರಿಗೆ ಅಡ್ಡಿಪಡಿಸಿ ದಾಂಧಲೆ ನಡೆಸಿದ್ದಲ್ಲದೆ, ಜೈಲು ಅಧೀಕ್ಷಕರಿಗೇ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಸೆ.16: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ತನಗೆ ಬೀಡಿ ನೀಡುವಂತೆ ಒತ್ತಾಯಿಸಿ ಸಹವರ್ತಿಗಳೊಂದಿಗೆ ಸೇರಿ ಅಡುಗೆ ತಯಾರಿಗೆ ಅಡ್ಡಿಪಡಿಸಿ ದಾಂಧಲೆ ನಡೆಸಿದ್ದಲ್ಲದೆ, ಜೈಲು ಅಧೀಕ್ಷಕರಿಗೇ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೈಲಿನಲ್ಲಿರುವ ಕೈದಿ ಮೊಹಮ್ಮದ್ ಪೈಜಲ್ ಕೃತ್ಯ ಎಸಗಿದವನಾಗಿದ್ದು ಸೆ.14ರಂದು ಬೆಳಗ್ಗೆ 08ರಿಂದ 10 ಗಂಟೆ ಮಧ್ಯೆ ಜೈಲಿನ ಅಡುಗೆ ಮನೆಗೆ ತೆರಳಿದ್ದ. ಅಲ್ಲಿ ಪಾಕಶಾಲೆಯಲ್ಲಿ ಕೆಲಸ ಮಾಡುವ ಇತರ ಬಂಧಿಗಳಿಗೆ “ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿ ಮಾಡಬಾರದು” ಎಂದು ಬೆದರಿಕೆ ಹಾಕಿ ಮಧ್ಯಾಹ್ನದ ಅಡುಗೆಗೆ ತೀವ್ರ ಅಡಚಣೆ ಉಂಟುಮಾಡಿದ್ದ. 

ನಂತರ ಸಹವರ್ತಿ ಬಂಧಿಗಳನ್ನು ಒಟ್ಟುಗೂಡಿಸಿ ಅಧೀಕ್ಷಕರ ಕಚೇರಿಗೆ ಬಂದ ಆರೋಪಿ, “ನೀವು ಬೀಡಿ ಕೊಡುವವರೆಗೂ ಅಡುಗೆ ತಯಾರಿಸಲು ಬಿಡುವುದಿಲ್ಲ. ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ದೊಡ್ಡ ಗಲಾಟೆ ಮಾಡಿ ನಿಮ್ಮನ್ನು ಇಲ್ಲಿಂದ ವರ್ಗಾವಣೆ ಮಾಡಿಸುತ್ತೇವೆ” ಎಂದು ನೇರವಾಗಿ ಬೆದರಿಕೆ ಹಾಕಿದ್ದ. ಅದೇ ದಿನ ಮಧ್ಯಾಹ್ನ ಜೈಲು ಸಿಬ್ಬಂದಿ ಅಡುಗೆ ಮನೆಯ ಗೇಟ್‌ಗೆ ಬೀಗ ಮುದ್ರೆ ಮಾಡಿದಾಗ, ಆರೋಪಿ ಪೈಜಲ್ ಅಲ್ಲಿಯೇ ಇದ್ದ ಗ್ಯಾಸ್ ಸಿಲಿಂಡರ್‌ನಿಂದ ಗೇಟ್ ಮತ್ತು ಬೀಗದ ಕೀಗೆ ಜೋರಾಗಿ ಹೊಡೆದು ಬೀಗ ತೆರೆಯುವಂತೆ ಕೂಗಾಡಿದ್ದಾನೆ. ಅಷ್ಟೇ ಅಲ್ಲದೆ, ಗ್ಯಾಸ್ ಸಿಲಿಂಡರ್‌ಗಳನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಬಳಿಕ ಇತರ ಬಂದಿಗಳನ್ನು ಕೂಡ ಪ್ರಚೋದಿಸಿದ್ದು, ಬೀಡಿ ಕೊಡುವವರೆಗೆ ಕೊಠಡಿಯೊಳಗೆ ತೆರಳದಂತೆ ತಡೆದು, ಜೈಲಿನಲ್ಲಿ ಕಿರುಚಾಡುತ್ತಾ ಅಧಿಕಾರಿಗಳ ಕರ್ತವ್ಯಕ್ಕೆ ತೀವ್ರ ಅಡ್ಡಿಪಡಿಸಿದ್ದಾನೆ. ಜೈಲಿನ ಒಳಗೆ ಭದ್ರತಾ ಲೋಪ ಉಂಟುಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಿದ ವಿಚಾರಣಾ ಬಂಧಿ ಮೊಹಮ್ಮದ್ ಪೈಜಲ್ ವಿರುದ್ಧ ಪ್ರಕರಣ ದಾಖಲಾಗಿದೆ.

A case has been registered against an undertrial prisoner at the Mangaluru District Jail for allegedly disrupting food preparation, threatening jail authorities and creating a security disturbance inside the prison.