ಅಪರಾಧಗಳ ಖಂಡನೆಗೆ ಧರ್ಮ ಅಡ್ಡಿಯಾಗಬಾರದು ! ಪೊಲೀಸ್ ಕಮಿಷನರ್ ವಾರ್ನಿಂಗ್, ಬಿಸಿ ರೋಡ್ ಚಲೋ ಹಿನ್ನೆಲೆ ಭಾರೀ ಬಂದೋಬಸ್ತ್

27-09-26 11:31 pm       HK News Desk   ಕರಾವಳಿ

ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಗೂಂಡಾ ಕಾಯ್ದೆ ಹೇರಿರುವುದನ್ನು ವಿರೋಧಿಸಿ ಹಿಂದು ಪರ ಸಂಘಟನೆಗಳು ಬಿಸಿ ರೋಡ್ ಚಲೋ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ.

ಮಂಗಳೂರು, ಸೆ.27: ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಗೂಂಡಾ ಕಾಯ್ದೆ ಹೇರಿರುವುದನ್ನು ವಿರೋಧಿಸಿ ಹಿಂದು ಪರ ಸಂಘಟನೆಗಳು ಬಿಸಿ ರೋಡ್ ಚಲೋ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ. 

ಸೋಮವಾರ ಬೆಳಗ್ಗೆ ಚಲೋ ಕಾರ್ಯಕ್ರಮ ಇರುವುದರಿಂದ ಬಂದೊಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾನುವಾರವೇ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ತಂಡದಲ್ಲಿ ಹೆಚ್ಚವರಿ ಪೊಲೀಸ್ ಅಧೀಕ್ಷಕರು -01, ಸಹಾಯಕ ಪೊಲೀಸ್ ಅಧೀಕ್ಷಕರು -01, ಪೊಲೀಸ್ ನಿರೀಕ್ಷಕರು -08, ಮ ಪೊಲೀಸ್ ಉಪನಿರೀಕ್ಷಕರು -23, ಸಹಾಯಕ ಪೊಲೀಸ್ ಉಪನಿರೀಕ್ಷಕರು -34, ಸಿಬ್ಬಂದಿಗಳು -184 ಮತ್ರು. ಹೋಮ್‌ಗಾರ್ಡ್‌ -05 ಜನರನ್ನು ನೇಮಕ ಮಾಡಲಾಗಿದೆ. ಇದಲ್ಲದೆ, ಎಸ್ ಎ ಎಫ್ ತುಕಡಿ -02, ಡಿಎಆರ್ ತುಕಡಿ -03, ಕೆಎಸ್ ಆರ್ ಪಿ ತುಕಡಿ -04 ನಿಯೋಜನೆ ಮಾಡಲಾಗಿದೆ. 

ಬೆಳವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಕಟುವಾಗಿ ಪ್ರತಿಕ್ರಿಯಿಸಿದ್ದು, ಕೆಲವು ಸೀಮಿತ ಪ್ರಕರಣಗಳನ್ನು ಹೊರತುಪಡಿಸಿದರೆ, ಕೋಮು ಆಧರಿತ ಅಪರಾಧಗಳ ಬಗ್ಗೆ ಇಲ್ಲಿ ಸಾರ್ವಜನಿಕವಾಗಿ ಧ್ವನಿ ಎತ್ತುವುದು ತಾರತಮ್ಯದಿಂದ ಕೂಡಿರುವುದನ್ನು ಕಂಡಿದ್ದೇನೆ. ಅಪರಾಧಿ ಯಾವುದೇ ಧರ್ಮ, ಸಮುದಾಯಕ್ಕೆ ಸೇರಿದ್ದರೂ, ನಾವು ತಪ್ಪು ಕೆಲಸವನ್ನು ಒಂದೇ ರೀತಿಯಲ್ಲಿ ಖಂಡಿಸಬೇಕು. ಭಯ, ಸಾಮಾಜಿಕ ಒತ್ತಡ ಅಥವಾ ತಪ್ಪು ಕಲ್ಪನೆಯ ನಿಷ್ಠೆಯಿಂದಾಗಿ ವಹಿಸುವ ಮೌನವು, ಎಂದಿಗೂ ನಾವು ನಂಬಿದ ತತ್ವಗಳಿಗೆ ಬೆಲೆ ತೆರುವಂತೆ ಆಗಬಾರದು. ತಪ್ಪನ್ನು ಖಂಡಿಸುವುದಕ್ಕೆ ಅಪರಾಧಿಯ ಗುರುತು ಆಧರಿಸಿರಬಾರದು ಎಂದು ಮಾರ್ಮಿಕ ಮಾತುಗಳನ್ನಾಡಿದ್ದಾರೆ.