30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈ ಸ್ಪರ್ಶ ; ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡ ಕಡಬ ವಿದ್ಯಾರ್ಥಿನಿ ರಕ್ಷಾ

28-09-26 08:33 pm       HK News Staffer   ಕರಾವಳಿ

ಕೈಗಳನ್ನು ಸೊಂಟದಲ್ಲಿ ಹಿಡಿದುಕೊಂಡು ಮುಂಗೈಗಳನ್ನು ನಿರಂತರವಾಗಿ ಹಿಂದಕ್ಕೆ ಹಾಗೂ ಮುಂದಕ್ಕೆ ಪರಸ್ಪರ ಮುಟ್ಟಿಸುವ ಮೂಲಕ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಾ ಡಿ. ವಿಶಿಷ್ಟ ವಿಶ್ವದಾಖಲೆ ನಿರ್ಮಿಸಿದ್ದಾರೆ. 30 ನಿಮಿಷಗಳಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಈ ಪ್ರದರ್ಶನ ನೀಡುವ ಮೂಲಕ ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದ್ದಾರೆ.

ಪುತ್ತೂರು, ಸೆ.28: ಕೈಗಳನ್ನು ಸೊಂಟದಲ್ಲಿ ಹಿಡಿದುಕೊಂಡು ಮುಂಗೈಗಳನ್ನು ನಿರಂತರವಾಗಿ ಹಿಂದಕ್ಕೆ ಹಾಗೂ ಮುಂದಕ್ಕೆ ಪರಸ್ಪರ ಮುಟ್ಟಿಸುವ ಮೂಲಕ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಾ ಡಿ. ವಿಶಿಷ್ಟ ವಿಶ್ವದಾಖಲೆ ನಿರ್ಮಿಸಿದ್ದಾರೆ. 30 ನಿಮಿಷಗಳಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಈ ಪ್ರದರ್ಶನ ನೀಡುವ ಮೂಲಕ ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದ್ದಾರೆ.

ಸೆಪ್ಟೆಂಬರ್ 26ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ವೈಷ್ಣೋಯಿ ಅವರ ಸಮ್ಮುಖದಲ್ಲಿ ರಕ್ಷಾ ಈ ದಾಖಲೆ ಪ್ರದರ್ಶನ ನಡೆಸಿದರು.

ನಿಖರ ಸಂಖ್ಯೆಯ ಪರಿಶೀಲನೆ

ರಕ್ಷಾ ಅವರಿಗೆ ವಿಶ್ವದಾಖಲೆಯ ಪ್ರಮಾಣಪತ್ರ ಹಸ್ತಾಂತರಿಸಿದ ಡಾ. ಮನೀಷ್ ವೈಷ್ಣೋಯಿ, ಇದು ವಿಶಿಷ್ಟ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 30 ನಿಮಿಷಗಳಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈಗಳನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಮುಟ್ಟಿಸುವ ಪ್ರದರ್ಶನವನ್ನು ರಕ್ಷಾ ನೀಡಿದ್ದಾರೆ. ಪ್ರದರ್ಶನದ ವಿಡಿಯೋ ದಾಖಲೀಕರಣವನ್ನು ಪರಿಶೀಲಿಸಿದ ಬಳಿಕ, ಅವರು ನಿಖರವಾಗಿ ಎಷ್ಟು ಬಾರಿ ಮುಂಗೈಗಳನ್ನು ಮುಟ್ಟಿಸಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

ಕಾರ್ಯಕ್ರಮ ಉದ್ಘಾಟಿಸಿದ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಮಾತನಾಡಿ, ರಾಮಕುಂಜದ ವಿದ್ಯಾರ್ಥಿನಿಯೊಬ್ಬರು ವಿಶ್ವದಾಖಲೆ ನಿರ್ಮಿಸಿರುವುದು ವಿದ್ಯಾಸಂಸ್ಥೆಗಳಿಗೆ ಹೆಮ್ಮೆಯ ವಿಷಯ ಎಂದರು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ. ವಿದ್ಯಾರ್ಥಿಗಳ ಸಾಧನೆ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳಲಿ ಎಂದು ಆಶಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಅಪಾರ ಪ್ರತಿಭೆಗಳಿವೆ. ಕೆಲವೊಮ್ಮೆ ವ್ಯಕ್ತಿಯೊಳಗಿನ ಸಾಮರ್ಥ್ಯದ ಅರಿವು ಅವರಿಗೇ ಇರುವುದಿಲ್ಲ. ರಕ್ಷಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್. ರಾಧಾಕೃಷ್ಣ ಮಾತನಾಡಿ, ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ. ರಕ್ಷಾ ಅವರ ಸಾಧನೆಯಿಂದ ಸಂಸ್ಥೆಗೂ ಹೆಮ್ಮೆಯ ಗರಿ ಸಿಕ್ಕಿದೆ ಎಂದರು. ಮುಂದಿನ ದಿನಗಳಲ್ಲಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ರಕ್ಷಾ ಅವರನ್ನು ಸನ್ಮಾನಿಸುವುದಾಗಿ ತಿಳಿಸಿದರು.

ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಹಾಗೂ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಸೇರಿದಂತೆ ಹಲವು ಗಣ್ಯರು ರಕ್ಷಾ ಅವರಿಗೆ ಶುಭ ಹಾರೈಸಿದರು. ರಕ್ಷಾ ಹಾಗೂ ಅವರ ತಂದೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಧರ್ಣಪ್ಪ ಪೂಜಾರಿ ಮತ್ತು ತಾಯಿ ವನಿತಾ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 

ರಕ್ಷಾ ಅವರಿಗೆ ಇದು ಮೊದಲ ವಿಶ್ವದಾಖಲೆ ಅಲ್ಲ. ಈ ಹಿಂದೆ ಕೈಗಳನ್ನು ಸೊಂಟದಲ್ಲಿ ಹಿಡಿದುಕೊಂಡು ಮುಂಗೈಗಳನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಒಂದು ನಿಮಿಷದಲ್ಲಿ 172 ಬಾರಿ ಮುಟ್ಟಿಸುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲೆ ನಿರ್ಮಿಸಿದ್ದರು.

Raksha D., a first-year PU Science student of Sri Ramakunjeshwara Pre-University College, has entered the Golden Book of World Records by performing a unique feat of repeatedly touching her forearms back and forth while keeping her hands on her waist.