suresh kumar, ut khadar, urdhu habba: ವಿಧಾನಸೌಧ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜನೆ ; ಸಚಿವ ಖಾದರ್ ಹೇಳಿಕೆಗೆ ಬಿಜೆಪಿ ಆಕ್ರೋಶ, ಕನ್ನಡಿಗರ ಅನನ್ಯತೆಯ ಸಂಕೇತ ಮತಬ್ಯಾಂಕ್ ಓಲೈಕೆಗೆ ಬಳಕೆ, ಸುರೇಶ್ ಕುಮಾರ್ ಹತ್ತು ಪ್ರಶ್ನೆಗಳು

30-09-26 09:41 pm       HK News Staffer   ಕರಾವಳಿ

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ವಿಧಾನಸೌಧ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬೆಂಗಳೂರು, ಸೆ.30: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ವಿಧಾನಸೌಧ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಖಾದರ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕನ್ನಡಿಗರ ಅನನ್ಯತೆಯ ಸಂಕೇತವಾಗಿರುವ ವಿಧಾನಸೌಧವನ್ನು ನಿರ್ದಿಷ್ಟ ಸಮುದಾಯದ ಮತಬ್ಯಾಂಕ್ ಓಲೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

“ಇಲ್ಲಿ ಪ್ರಶ್ನೆ ಉರ್ದು ಭಾಷೆಯದ್ದಲ್ಲ, ಬದಲಿಗೆ ಸರ್ಕಾರದ ಆದ್ಯತೆಯದ್ದಾಗಿದೆ. ಕನ್ನಡದ ನೆಲದಲ್ಲಿ, ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂತಹ ವೈಭವದ ವೇದಿಕೆ ಎಷ್ಟು ಬಾರಿ ಲಭಿಸಿದೆ? ಕನ್ನಡದ ಶ್ರೀಮಂತ ಉಪ ಭಾಷೆಗಳಿಗೆ ಸಿಗದ ಇಂತಹ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಉರ್ದು ಭಾಷೆಗೆ ನೀಡುತ್ತಿರುವುದು ಏಕೆ?” ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಫೇಸ್ ಬುಕ್ ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸುರೇಶ್ ಕುಮಾರ್, ಕರ್ನಾಟಕ ಬಹುಭಾಷೆ, ಬಹುಸಂಸ್ಕೃತಿ ಮತ್ತು ವೈವಿಧ್ಯತೆಯ ನಾಡು. ಕನ್ನಡದ ಜೊತೆಗೆ ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಕೊಂಕಣಿ ಸೇರಿದಂತೆ ಅನೇಕ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ಬದುಕುತ್ತಿದ್ದಾರೆ. ಅವರ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದರಲ್ಲಿ ಯಾರಿಗೂ ತಕರಾರು ಇರಬೇಕಾಗಿಲ್ಲ. ಆದರೆ ಒಂದು ಭಾಷೆಯನ್ನು ಗೌರವಿಸುವುದು ಬೇರೆ; ಆ ಭಾಷೆಯ ಹಬ್ಬವನ್ನು ಸರ್ಕಾರವೇ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಸುವುದು ಬೇರೆ. ಇದೇ ಈ ಇಡೀ ವಿವಾದದ ಮೂಲ ಪ್ರಶ್ನೆ.

ಉರ್ದು ಭಾಷೆಗೆ ಶ್ರೀಮಂತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆ ಇದೆ. ಅದನ್ನು ಆಚರಿಸಲಿ. ಸರ್ಕಾರ ಪ್ರೋತ್ಸಾಹಿಸಲಿ. ಉರ್ದು ಸಾಹಿತ್ಯ ಸಮ್ಮೇಳನ ನಡೆಸಲಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ನೀಡಲಿ. ಅದಕ್ಕೆ ಯಾರ ವಿರೋಧವೂ ಇರಬೇಕಿಲ್ಲ. ಆದರೆ ಕರ್ನಾಟಕದ ಆಡಳಿತ ಶಕ್ತಿಕೇಂದ್ರವಾದ ವಿಧಾನಸೌಧದ ಮೆಟ್ಟಿಲುಗಳೇ ಏಕೆ? ವಿಧಾನಸೌಧವೇ ಏಕೆ?

ರಾಜ್ಯದ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಲ್ಲಿ ನೂರಾರು ವೇದಿಕೆಗಳಿರುವಾಗ, ಒಂದು ನಿರ್ದಿಷ್ಟ ಭಾಷೆಯ ಹಬ್ಬಕ್ಕೆ ವಿಧಾನಸೌಧದ ಮೆಟ್ಟಿಲುಗಳನ್ನೇ ಆಯ್ಕೆ ಮಾಡಿರುವುದರ ಹಿಂದಿನ ತರ್ಕವೇನು? ಇದು ಕೇವಲ ಕಾರ್ಯಕ್ರಮದ ಸ್ಥಳದ ಪ್ರಶ್ನೆಯಲ್ಲ. ಇದು ಸರ್ಕಾರ ಯಾರಿಗೆ ಯಾವ ಸಂದೇಶ ನೀಡುತ್ತಿದೆ ಎಂಬ ಪ್ರಶ್ನೆ.

ವಿಧಾನಸೌಧ ಯಾವುದರ ಸಂಕೇತ?

ವಿಧಾನಸೌಧ ಒಂದು ಸಾಮಾನ್ಯ ಸಭಾಂಗಣವಲ್ಲ. ಅದು ಕರ್ನಾಟಕದ ಆಡಳಿತದ ಸಂಕೇತ. ಅದು ಕರ್ನಾಟಕದ ಪ್ರಜಾಪ್ರಭುತ್ವದ ಸಂಕೇತ. ಅದು ಜನರ ತೆರಿಗೆ ಹಣದಿಂದ ನಡೆಯುವ ರಾಜ್ಯದ ಆಡಳಿತದ ಶಕ್ತಿ ಕೇಂದ್ರ. ಹಾಗಿದ್ದಾಗ, ಒಂದು ನಿರ್ದಿಷ್ಟ ಭಾಷೆಯ ಸಾಂಸ್ಕೃತಿಕ ಹಬ್ಬಕ್ಕೆ ಅದರ ಮೆಟ್ಟಿಲುಗಳನ್ನು ವೇದಿಕೆಯನ್ನಾಗಿ ಮಾಡುವ ಸರ್ಕಾರ, ಸಹಜವಾಗಿಯೇ ಈ ಪ್ರಶ್ನೆಗೆ ಉತ್ತರಿಸಬೇಕು:

ಈ ಅವಕಾಶ ಎಲ್ಲ ಭಾಷೆಗಳಿಗೂ ಇದೆಯೇ? ಇದೆಯೆಂದಾದರೆ, ನಾಳೆ ತಮಿಳು ಭಾಷಾ ಹಬ್ಬ, ತೆಲುಗು ಭಾಷಾ ಹಬ್ಬ, ಮಲಯಾಳಂ ಭಾಷಾ ಹಬ್ಬ, ಮರಾಠಿ ಭಾಷಾ ಹಬ್ಬ, ಹಿಂದಿ ಭಾಷಾ ಹಬ್ಬ, ಕೊಂಕಣಿ ಭಾಷಾ ಹಬ್ಬ, ತುಳು ಭಾಷಾ ಹಬ್ಬ — ಹೀಗೆ ಪ್ರತಿಯೊಂದು ಭಾಷಾ ಸಮುದಾಯವೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ತಮ್ಮ ಭಾಷಾ ಹಬ್ಬ ಆಚರಿಸಲು ಕೇಳಿದರೆ ಸರ್ಕಾರ ಏನು ಮಾಡಲಿದೆ?

ಎಲ್ಲರಿಗೂ ಅವಕಾಶ ನೀಡುತ್ತೀರಾ? ನೀಡುತ್ತೀರಾದರೆ, ವಿಧಾನಸೌಧವು ಕರ್ನಾಟಕದ ಆಡಳಿತದ ಶಕ್ತಿ ಕೇಂದ್ರವಾಗಿರುತ್ತದೆಯೇ, ಅಥವಾ ಭಾಷಾವಾರು ಸಾಂಸ್ಕೃತಿಕ ಹಬ್ಬಗಳ ಶಾಶ್ವತ ವೇದಿಕೆಯಾಗುತ್ತದೆಯೇ?  ಎಲ್ಲರಿಗೂ ಅವಕಾಶ ನೀಡುವುದಿಲ್ಲವೆಂದರೆ ಯಾವ ಮಾನದಂಡದ ಆಧಾರದ ಮೇಲೆ ಉರ್ದುವಿಗೆ ಈ ವಿಶೇಷ ಅವಕಾಶ? ಸರ್ಕಾರ ಇದಕ್ಕೆ ನೇರ ಉತ್ತರ ನೀಡಬೇಕು.

ಇದು ಯಾವ ರೀತಿಯ ಭಾಷಾ ನೀತಿ?

ಹಿಂದಿಯ ವಿಚಾರದಲ್ಲಿ ಒಂದು ಪ್ರಶ್ನೆ - ಉರ್ದುವಿನ ವಿಚಾರದಲ್ಲಿ ಮತ್ತೊಂದು ನೀತಿ ಏಕೆ? ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಭಾಷಾ ನೀತಿ ಕುರಿತು ಹಿಂದಿಯ ವಿಚಾರದಲ್ಲಿಯೂ ಚರ್ಚೆ ನಡೆದಿದೆ. SSLC ಮಕ್ಕಳಿಗೆ ಹಿಂದಿಯಲ್ಲಿನ ಅಂಕ ತೇರ್ಗಡೆಗೆ ಪರಿಗಣಿಸದೇ ಹಿಂದಿ ವಿರೋಧಿ ನಿಲುವು ತಳೆದ ಸರ್ಕಾರ, ಇದೇ ಸಂದರ್ಭದಲ್ಲಿ ಉರ್ದು ಭಾಷೆಯ ಕಾರ್ಯಕ್ರಮಕ್ಕೆ ತೋರಿಸುತ್ತಿರುವ ವಿಶೇಷ ಆಸಕ್ತಿ ಸಾರ್ವಜನಿಕ ಪ್ರಶ್ನೆಗಳಿಗೆ ಕಾರಣವಾಗುವುದು ಸಹಜ.

ಮತಬ್ಯಾಂಕ್ ರಾಜಕಾರಣದ ವಾಸನೆ ಬರುತ್ತಿಲ್ಲವೇ?

ಸರ್ಕಾರದ ಇಂತಹ ಕ್ರಮಗಳು ಜನರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುವ ರಾಜಕೀಯದ ಅನುಮಾನ ಮೂಡಿಸುವುದಿಲ್ಲವೇ? ಮುಸ್ಲಿಂ ಸಮುದಾಯದ ಭಾಷೆಯಾಗಿ ಗುರುತಿಸಲ್ಪಡುವ ಉರ್ದುವಿನ ಹೆಸರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರವೇ ಹಬ್ಬ ಆಯೋಜಿಸಿದಾಗ, ಇದನ್ನು ಕೇವಲ ಭಾಷಾ ಪ್ರೋತ್ಸಾಹವೆಂದು ಮಾತ್ರ ನೋಡಬೇಕೇ? ಅಥವಾ ಇದು ಒಂದು ನಿರ್ದಿಷ್ಟ ಮತಬ್ಯಾಂಕ್ ಸಮುದಾಯಕ್ಕೆ ರಾಜಕೀಯವಾಗಿ ಒಂದು ಸಂದೇಶ ಕಳುಹಿಸುವ ಪ್ರಯತ್ನವೇ ಎಂಬ ಅನುಮಾನ ಮೂಡುವುದಿಲ್ಲವೇ? ಸರ್ಕಾರ ಇದನ್ನು ರಾಜಕೀಯ ಉದ್ದೇಶದಿಂದ ಮಾಡಿಲ್ಲವೆಂದಾದರೆ, ಅತ್ಯಂತ ಸರಳವಾದ ಕೆಲಸ ಮಾಡಲಿ: ಎಲ್ಲ ಭಾಷೆಗಳಿಗೂ ಅನ್ವಯವಾಗುವ ಒಂದೇ ನೀತಿಯನ್ನು ಘೋಷಿಸಲಿ. ಆಗ ಯಾರಿಗೂ ಪ್ರಶ್ನೆ ಇರುವುದಿಲ್ಲ.

ಆದರೆ ಒಂದು ಭಾಷೆಗೆ ವಿಶೇಷ ವೇದಿಕೆ ಕೊಟ್ಟು, ಉಳಿದ ಭಾಷೆಗಳ ವಿಚಾರದಲ್ಲಿ ಮೌನವಾಗಿದ್ದರೆ, ಅನುಮಾನಗಳಿಗೆ ಸರ್ಕಾರವೇ ಕಾರಣವಾಗುತ್ತದೆ ಎಂದು ಸುರೇಶ್ ಕುಮಾರ್ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಸರ್ಕಾರವನ್ನು ಕೇಳಿದ್ದಾರೆ.

The Karnataka government is preparing to organise an ‘Urdu Habba’ (Urdu Festival) on the grand steps of Vidhana Soudha on November 9 as part of Urdu Day celebrations, prompting objections from BJP MLA S. Suresh Kumar.