ಭೂಗತ ಪಾತಕಿ ರವಿ ಪೂಜಾರಿ ಉಡುಪಿಗೆ ; ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ, ಬಿಗಿ ಭದ್ರತೆಯಲ್ಲಿ ಕರೆತಂದ ಪೊಲೀಸರು

14-11-26 12:50 pm       HK News Staffer   ಕರಾವಳಿ

ಮಾಜಿ ಭೂಗತ ಪಾತಕಿ, ಈಗ ಬೆಂಗಳೂರಿನ ಜೈಲಿನಲ್ಲಿರುವ ರವಿ ಪೂಜಾರಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯಲ್ಲಿ ಶನಿವಾರ ಮಲ್ಪೆಗೆ ಕರೆತಂದಿದ್ದಾರೆ.

ಉಡುಪಿ, ನ.14: ಮಾಜಿ ಭೂಗತ ಪಾತಕಿ, ಈಗ ಬೆಂಗಳೂರಿನ ಜೈಲಿನಲ್ಲಿರುವ ರವಿ ಪೂಜಾರಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯಲ್ಲಿ ಶನಿವಾರ ಮಲ್ಪೆಗೆ ಕರೆತಂದಿದ್ದಾರೆ. 

ರವಿ ಪೂಜಾರಿ ತಾಯಿ ಸುಶೀಲಾ ಪೂಜಾರ್ತಿ (86) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದರು. ಅವರಿಗೆ ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಪುತ್ರರಿದ್ದಾರೆ. 

ಶನಿವಾರ ಮಲ್ಪೆಯ ನೆರ್ಗಿಯಲ್ಲಿರುವ ಹಿರಿಯರ ಮನೆಯಲ್ಲಿ ಸುಶೀಲಾ ಪೂಜಾರ್ತಿಯವರ ಅಂತ್ಯಸಂಸ್ಕಾರ ನಡೆಯಲಿದೆ. ಜೈಲಿನಲ್ಲಿರುವ ರವಿ ಪೂಜಾರಿಗೆ ಪೆರೋಲ್ ಮೇಲೆ ನ್ಯಾಯಾಲಯದ ಅನುಮತಿ ನೀಡಿದ್ದು ಬೆಂಗಳೂರು ಪೊಲೀಸರ ಎಸ್ಕಾರ್ಟ್ ಭದ್ರತೆಯಲ್ಲಿ ಮಲ್ಪೆಗೆ ಕರೆತರಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲಾ ಪೊಲೀಸರಿಂದಲೂ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. 

ಹಲವಾರು ವರ್ಷಗಳ ಕಾಲ ವಿದೇಶದಲ್ಲಿದ್ದು ಉಡುಪಿ, ಮಂಗಳೂರಿನ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಮಾಡಿದ್ದು ಹಣ ಕೊಡಲು ನಿರಾಕರಿಸಿದ ಕೆಲವರನ್ನು ಕೊಲ್ಲಿಸಿದ ಆರೋಪ ರವಿ ಪೂಜಾರಿ ಮೇಲಿದೆ. ಎರಡು ವರ್ಷಗಳ ಹಿಂದೆ ಇಂಟರ್ ಪೋಲ್ ಸಹಾಯದಿಂದ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದರು.