'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲಯ ಲೋಕಾರ್ಪಣೆ ; ಆರ್ಯಭಟ, ವರಾಹಮಿಹಿರ ತಂತ್ರಜ್ಞಾನ ಇಲ್ಲದೆ ಖಗೋಳ ವಿಸ್ಮಯ ಭೇದಿಸಿದ್ದಾರೆ, ಪ್ರಧಾನಿ ಮೋದಿ ಸ್ಮರಣೆ

13-11-26 10:13 pm       HK News Staffer   ಕರ್ನಾಟಕ

ಭಾರತದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಂದಕ್ಕೊಂದು ಪೂರಕವಾಗಿದ್ದು, ಒಟ್ಟಿಗೆ ಸಾಗುತ್ತವೆ. ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ. ಆರ್ಯಭಟ, ವರಾಹಮಿಹಿರ ಯಾವುದೇ ತಂತ್ರಜ್ಞಾನ ಇಲ್ಲದಿದ್ದರೂ ಖಗೋಳ ವಿಸ್ಮಯಗಳನ್ನು ಭೇದಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೈಸೂರು, ನ.13: ಭಾರತದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಂದಕ್ಕೊಂದು ಪೂರಕವಾಗಿದ್ದು, ಒಟ್ಟಿಗೆ ಸಾಗುತ್ತವೆ. ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ. ಆರ್ಯಭಟ, ವರಾಹಮಿಹಿರ ಯಾವುದೇ ತಂತ್ರಜ್ಞಾನ ಇಲ್ಲದಿದ್ದರೂ ಖಗೋಳ ವಿಸ್ಮಯಗಳನ್ನು ಭೇದಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾದ, ಅತ್ಯಾಧುನಿಕ ತಂತ್ರಜ್ಞಾನವುಳ್ಳ 'ಎಲ್‌ಇಡಿ ಡೋಮ್' (LED Dome) ಉಳ್ಳ 'ಕಾಸ್ಮೋಸ್ ಮೈಸೂರು' ತಾರಾಲಯವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. 

"ಆಧುನಿಕ ಉಪಕರಣಗಳ ಕೊರತೆಯಿದ್ದರೂ, ನಮ್ಮ ಪೂರ್ವಜರು ವಿಶ್ವವನ್ನು ಮತ್ತು ಗ್ರಹಗಳ ಚಲನೆಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ನಮ್ಮ ಪ್ರಾಚೀನ ಖಗೋಳಶಾಸ್ತ್ರಜ್ಞರು ವಿಶ್ವವನ್ನು ಅಧ್ಯಯನ ಮಾಡಲು ಸಂಕೀರ್ಣ ಗಣಿತದ ಲೆಕ್ಕಾಚಾರಗಳನ್ನು ಕೈಗೊಂಡಿದ್ದರು ಎಂದು ಅವರು ಸ್ಮರಿಸಿದರು. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಅನೇಕ ಶ್ರೇಷ್ಠ ಖಗೋಳಶಾಸ್ತ್ರಜ್ಞರಿಗೆ ಭಾರತ ತವರುಮನೆಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರಿಗೆ ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಸ್ಥಾಪಿಸುವ ದೀರ್ಘಕಾಲದ ಪರಂಪರೆಯಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲೇ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಬೆಂಗಳೂರಿನಲ್ಲಿರುವ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್' (ಭಾರತೀಯ ವಿಜ್ಞಾನ ಸಂಸ್ಥೆ) ಅಡಿಪಾಯ ಹಾಕುವಲ್ಲಿಯೂ ಒಡೆಯರ್ ಕುಟುಂಬವು ಪ್ರಮುಖ ಪಾತ್ರ ವಹಿಸಿತು. ಇಂತಹ ಸಂಸ್ಥೆಗಳು ಅಸಂಖ್ಯಾತ ತಲೆಮಾರುಗಳ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಮುನ್ನಡೆಯಲು ಅವಕಾಶಗಳನ್ನು ಒದಗಿಸಿವೆ ಎಂದು ಹೇಳಿದರು. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನಿರ್ಮಿಸಿರುವ ಈ 'ಕಾಸ್ಮೋಸ್-ಮೈಸೂರು' ಭಾರತದ ಮೊದಲ ಎಲ್‌ಇಡಿ (LED) ಡೋಮ್ ತಾರಾಲಯವಾಗಿದೆ. ಖಗೋಳಶಾಸ್ತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರವಾಗಿ ರೂಪಿಸಲಾಗಿರುವ ಈ ಕೇಂದ್ರವು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿದೆ. 

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪಿಂಕ್ ಲೈನ್ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ ನಂತರ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೋದಲ್ಲಿ ಬಿಳೇಕಹಳ್ಳಿ- ಐಐಎಂಬಿ ಮೆಟ್ರೋ ನಿಲ್ದಾಣದ ವರೆಗೆ ಪ್ರಯಾಣಿಸಿದರು.