ಸೌಜನ್ಯಾ ಪ್ರಕರಣ ಮುಂದಿಟ್ಟು ಕ್ಷೇತ್ರಕ್ಕೆ, ಧರ್ಮಸ್ಥಳ ಗ್ರಾಮಕ್ಕೆ ಕಳಂಕ ಹಚ್ಚುವ ಪ್ರಯತ್ನ ; 1510 ಅಸಹಜ ಸಾವುಗಳೆಂದು ಕೋರ್ಟ್, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಗ್ರಾಮಸ್ಥರ ಸುದ್ದಿಗೋಷ್ಟಿ

14-11-26 04:04 pm       HK News Staffer   ಕರಾವಳಿ

ಸೌಜನ್ಯ ಪ್ರಕರಣ ಮುಂದಿಟ್ಟು ಧರ್ಮಸ್ಥಳ ಗ್ರಾಮ ಮತ್ತು ಇಲ್ಲಿನ ಕ್ಷೇತ್ರಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ಸೌಜನ್ಯ ನ್ಯಾಯದ ಹೋರಾಟವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಸಹಜ ಸಾವುಗಳ ಲೆಕ್ಕವನ್ನು ಹೆಚ್ಚು ತೋರಿಸಿ, ಸರ್ಕಾರ ಮತ್ತು ಕೋರ್ಟುಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ಸುದ್ದಿಗೋಷ್ಟಿ ನಡೆಸಿದ ಪ್ರಮುಖರು ಆರೋಪಿಸಿದ್ದಾರೆ.

ಬೆಳ್ತಂಗಡಿ, ನ.15: ಸೌಜನ್ಯ ಪ್ರಕರಣ ಮುಂದಿಟ್ಟು ಧರ್ಮಸ್ಥಳ ಗ್ರಾಮ ಮತ್ತು ಇಲ್ಲಿನ ಕ್ಷೇತ್ರಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ಸೌಜನ್ಯ ನ್ಯಾಯದ ಹೋರಾಟವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಸಹಜ ಸಾವುಗಳ ಲೆಕ್ಕವನ್ನು ಹೆಚ್ಚು ತೋರಿಸಿ, ಸರ್ಕಾರ ಮತ್ತು ಕೋರ್ಟುಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ಸುದ್ದಿಗೋಷ್ಟಿ ನಡೆಸಿದ ಪ್ರಮುಖರು ಆರೋಪಿಸಿದ್ದಾರೆ. 

ಧರ್ಮಸ್ಥಳದಲ್ಲಿ ಗ್ರಾಮಸ್ಥರ  ವತಿಯಿಂದ ಸುದ್ದಿಗೋಷ್ಠಿ ನಡೆಸಲಾಗಿದ್ದು ಧರ್ಮಸ್ಥಳ ನಿವಾಸಿ ಶ್ರೀನಿವಾಸ್ ರಾವ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 2025 ರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ಮಟ್ಟಣ್ಣವರ್ ತಂಡ ಕಟ್ಟಿಕೊಂಡು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇದು ಹಣದ ಉದ್ದೇಶದ ಅರ್ಜಿಯೆಂದು ಹೇಳಿ ಪರಿಗಣಿಸಲು ನಿರಾಕರಣೆ ಮಾಡಿತ್ತು. ಆಗಲೂ ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾಮಸ್ಥರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದರು. 2000ರಿಂದ 2014ರ ವರೆಗೆ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳಾಗಿವೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 1,510 ಯುಡಿಆರ್ ದಾಖಲಾಗಿದೆ ಎಂಬ ಸುಳ್ಳು ಕತೆಯನ್ನ ಮಾಡುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಮಾಹಿತಿ ಹಕ್ಕಿನಡಿ ಕೊಟ್ಟ ಪ್ರಕಾರ, 374 ಅಸಹಜ ಸಾವು ಧರ್ಮಸ್ಥಳ ಗ್ರಾಮದಲ್ಲಿ ಆಗಿರುವುದಕ್ಕೆ ದಾಖಲೆಗಳಿವೆ. 

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರೂ ಸರಕಾರಕ್ಕೆ ತಪ್ಪು ಮಾಹಿತಿಯನ್ನ ಕೊಡುತ್ತಿದ್ದಾರೆ. 1510 ಸಾವುಗಳೆಂಬುದು ಕೇವಲ ಊಹಾಪೋಹದ ಸಂಖ್ಯೆ ಮಾತ್ರ. ಇದನ್ನು ಸರಕಾರ ಮತ್ತು  ಪರಿಶೀಲನೆ ಮಾಡಬೇಕು. ಸುಳ್ಳು ಸುದ್ದಿ ಹರಡುವವರಿಗೆ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಈ ಸುಳ್ಳು ಸುದ್ದಿಯಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಡೀ ರಾಜ್ಯ ಹಾಗೂ ದೇಶದ ಭಕ್ತರಲ್ಲಿ ಅಪನಂಬಿಕೆ ಮೂಡಿಸಲಾಗುತ್ತಿದೆ. ಸುಳ್ಳು ಸುದ್ದಿ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ‌

ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಬಗ್ಗೆ ಧರ್ಮಸ್ಥಳ ಗ್ರಾಮಸ್ಥರೇ ಮೊದಲು ದನಿ ಎತ್ತಿದ್ದೆವು. ಆಬಳಿಕ ಕುಸುಮಾವತಿ ಮುಂದಿಟ್ಟು ಕ್ಷೇತ್ರಕ್ಕೆ ಕಳಂಕ ಹೊರಿಸುವ ಕೆಲಸ ಮಾಡುತ್ತ ಬರಲಾಗಿದೆ. ಆದರೆ ಸೌಜನ್ಯಾ ಪ್ರಕರಣದ ಆಯಾಮವನ್ನು ಬೇರೆ ರೂಪಕ್ಕೆ ತಿರುಗಿಸುವ ಪ್ರಯತ್ನ ನಡೆದಿದೆ. ಈ ಹಿಂದೆ ಬ್ರೇನ್ ಮ್ಯಾಪಿಂಗ್ ತನಿಖೆಗೊಳಗಾಗಿ ಮುಕ್ತರಾಗಿದ್ದವರನ್ನು ಮತ್ತೆ ಆರೋಪಿಗಳನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಧರ್ಮಸ್ಥಳ ನಿವಾಸಿ ಶ್ರೀನಿವಾಸ್ ರಾವ್ ಹೇಳಿದರು. 

ಧರ್ಮಸ್ಥಳ ಸ್ನಾನಘಟ್ಟದ ಬಳಿ ಮಾನವ ತಲೆ ಬುರುಡೆ ಪತ್ತೆಯಾದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ವಿರೋಧಿಗಳೇ ಅಲ್ಲಿ ಬುರುಡೆ ತಂದು ಹಾಕಿರಬಹುದು ಎಂದು ಆರೋಪ ಮಾಡಿದರು. ಆದರೆ ತಲೆ ಬುರುಡೆ ಪತ್ತೆ ಬಗ್ಗೆ ಪೊಲೀಸ್ ಇಲಾಖೆಯೇ ಉತ್ತರ ನೀಡಬೇಕು. 'ನಾಟಕದ ಒಂದು ಪರದೆ ಬಿದ್ದಾಗ ಇನ್ನೊಂದು ಹೊಸ ನಾಟಕ ಶುರುವಾಗಬೇಕು' ಎನ್ನುವಂತೆ ಸುಳ್ಳು ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ‌. ದೇಶದ ಬೇರೆ ಬೇರೆ ಹೋರಾಟಗಳ ದಿಕ್ಕನ್ನು ಗಮನದಲ್ಲಿಟ್ಟು ಈ ಪ್ರಕರಣವೂ ದಿಕ್ಕು ತಪ್ಪದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಟಿ ಉದ್ದೇಶಕ್ಕಾಗಿ ಗ್ರಾಮಸ್ಥರ ಪರವಾಗಿ ನೂರಾರು ಜನರು ಸ್ಥಳದಲ್ಲಿ ಸೇರಿದ್ದರು.