ಧರ್ಮಸ್ಥಳ ಸ್ನಾನಘಟ್ಟದ ಬಳಿ ತಲೆಬುರುಡೆ ; ತನಿಖೆ ಯಾರು ಮಾಡಬೇಕು? ಪೊಲೀಸರಲ್ಲೇ ಗೊಂದಲ

13-11-26 10:18 pm       HK News Staffer   ಕರಾವಳಿ

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿರುವ ಮಾನವ ತಲೆಬುರುಡೆಯನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದು, ತಲೆಬುರುಡೆಗಳ ತನಿಖೆ ನಡೆಸುತ್ತಿರುವ ಎಸ್ಐಟಿಗೆ ನೀಡಲಿದ್ದಾರೆಂಬ ಮಾಹಿತಿ ಇದೆ.

ಬೆಳ್ತಂಗಡಿ, ನ.13: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿರುವ ಮಾನವ ತಲೆಬುರುಡೆಯನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದು, ತಲೆಬುರುಡೆಗಳ ತನಿಖೆ ನಡೆಸುತ್ತಿರುವ ಎಸ್ಐಟಿಗೆ ನೀಡಲಿದ್ದಾರೆಂಬ ಮಾಹಿತಿ ಇದೆ.

ಆದರೆ ಈಗಾಗಲೇ ಬುರುಡೆಗಳ ತನಿಖೆಯನ್ನು ಮುಗಿಸಿ ಕೋರ್ಟಿಗೆ ವರದಿ ಸಲ್ಲಿಸಿರುವ ಎಸ್ಐಟಿ ತಂಡವು ಈ ಬುರುಡೆಯನ್ನು ಪಡೆಯುವುದಕ್ಕೆ ಮುಂದಾಗಿಲ್ಲ ಎನ್ನಲಾಗುತ್ತಿದೆ. ಇದರ ಬಗ್ಗೆ ಸರಕಾರ ಆದೇಶ ಮಾಡಿದರೆ ಮಾತ್ರ ನಾವು ಬುರುಡೆ ಬಗ್ಗೆ ತನಿಖೆ ಮಾಡುವುದಾಗಿ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಧರ್ಮಸ್ಥಳ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಕಳೆದ ವರ್ಷ ಎಸ್ಐಟಿ ಅಧಿಕಾರಿಗಳು ಸ್ಥಳ ಶೋಧ ನಡೆಸಿದ್ದರು. ಆ ಸಂದರ್ಭದಲ್ಲಿ ಹಲವಾರು ಮಾನವ ತಲೆಬುರುಡೆಗಳು ಮತ್ತು ಅಸ್ಥಿ ಪಂಜರಗಳು ಸಿಕ್ಕಿದ್ದವು ಎಂದು ಹೇಳಲಾಗಿತ್ತು. ಅದರ ಬಗ್ಗೆ ಪೂರ್ತಿ ತನಿಖೆ ನಡೆದಿಲ್ಲವಾದರೂ, ಒಟ್ಟು ಪ್ರಕರಣದ ಬಗ್ಗೆ ಎಸ್ಐಟಿ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈಗ ಅದೇ ಪರಿಸರದಲ್ಲಿ ಮತ್ತೊಂದು ತಲೆಬುರುಡೆ ರಸ್ತೆ ಬದಿಯಲ್ಲೇ ಕಾಣಿಸಿಕೊಂಡಿರುವುದರಿಂದ ಮತ್ತೆ ಬುರುಡೆ ವಿಚಾರ ಸುದ್ದಿಗೆ ಗ್ರಾಸವಾಗಿದೆ. ಈಗ ಸಿಕ್ಕಿರುವ ಬುರುಡೆ ಯಾರದ್ದು, ಅದರ ಬಗ್ಗೆ ಯಾರು ತನಿಖೆ ನಡೆಸಬೇಕು ಎನ್ನುವ ಗೊಂದಲದಲ್ಲಿ ಪೊಲೀಸರಿದ್ದಾರೆ.