ಲಿಟ್ ಫೆಸ್ಟ್ ; ಬದಲಾದ ಭಾರತದ ಸ್ಥಿತಿಗತಿಯ ಮಂಥನ, ಜನಪದಗಳ ದಾಖಲೀಕರಣಕ್ಕೆ ಆಶಯ

27-03-21 08:31 pm       Mangaluru correspondent   ಕರಾವಳಿ

ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಮಂಗಳೂರು ಲಿಟ್ ಫೆಸ್ಟ್ 3ನೇ ಆವರ್ತನ ನಗರದ ಓಶ್ಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಸೀಮಿತ ಪ್ರತಿನಿಧಿಗಳ ನಡುವೆ ಒಂದು ದಿನದ ವಿಚಾರ ಸಂಕಿರಣಕ್ಕೆ ಸೀಮಿತವಾಗಿ ನಡೆಯಿತು.

ಮಂಗಳೂರು, ಮಾ.27: ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಮಂಗಳೂರು ಲಿಟ್ ಫೆಸ್ಟ್ 3ನೇ ಆವರ್ತನ ನಗರದ ಓಶ್ಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಸೀಮಿತ ಪ್ರತಿನಿಧಿಗಳ ನಡುವೆ ಒಂದು ದಿನದ ವಿಚಾರ ಸಂಕಿರಣಕ್ಕೆ ಸೀಮಿತವಾಗಿ ನಡೆಯಿತು. ಪ್ರಧಾನ ಮಂತ್ರಿ ಕಚೇರಿಯ ನಿವೃತ್ತ ಮುಖ್ಯ ಕಾರ್ಯದರ್ಶಿ, ಮಾಜಿ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಣಿಪಾಲ ಮಾಹೆ ವಿದ್ಯಾಸಂಸ್ಥೆಯ ಡಾ.ನಂದಕಿಶೋರ್ ಎಂ., ಮೈಥಿಕ್ ಸೊಸೈಟಿ ಸದಸ್ಯ ಪ್ರಸನ್ನ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಆರ್ಗನೈಸಿಂಗ್ ಕಮಿಟಿಯ ಕ್ಯಾ.ಬೃಜೇಶ್ ಚೌಟ, ಸುನಿಲ್ ಕುಲಕರ್ಣಿ ಉಪಸ್ಥಿತರಿದ್ದರು. ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಶಕ್ತಿ ಸಿನ್ಹಾ ಬದಲಾಗುತ್ತಿರುವ ಭಾರತದ ಸ್ಥಿತಿಗತಿಯ ಬಗ್ಗೆ ವಿವರಣೆ ನೀಡಿದರು.

ಬದಲಾಗುತ್ತಿದೆ ಭಾರತ ; ಶಕ್ತಿ ಸಿನ್ಹಾ

ಭಾರತ ಬದಲಾಗುತ್ತಿದ್ದು, ಹಿಂದಿನ ರೀತಿ ವಿದೇಶಗಳಿಂದ ಪಡೆಯುವುದಕ್ಕಿಂತ ಇತರೇ ದೇಶಗಳಿಗೆ ಸಂಪನ್ಮೂಲ ಪೂರೈಸುವ ದೇಶವಾಗಿ ಬದಲಾಗುತ್ತಿದೆ. ಕೊರೊನೋತ್ತರದಲ್ಲಿ ಭಾರತ, ಚೀನಾಕ್ಕಿಂತ ಪ್ರಬಲವಾಗಿರುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಕೊರೊನಾ ಲಸಿಕೆಯನ್ನು ದೇಶೀಯವಾಗಿ ಉತ್ಪಾದಿಸಿದ್ದಲ್ಲದೆ, ವಿಶ್ವ ರಾಷ್ಟ್ರಗಳಿಗೆ ಪೂರೈಸಬಲ್ಲ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಗಡಿಯಲ್ಲಿ ತಂಟೆ ಮಾಡುತ್ತಿದ್ದ ಚೀನಾದ ಕೀಟಲೆ ಸೇರಿದಂತೆ ಕೊರೊನಾ ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಭಾರತಕ್ಕೆ ನೀಡಿದೆ ಎಂದು ಶಕ್ತಿ ಸಿನ್ಹಾ ಹೇಳಿದರು. ಮೊದಲ ಗೋಷ್ಠಿಯಲ್ಲಿ ವಿಕ್ರಮ್ ಸೂದ್, ಯುನೆಸ್ಕೋ ಪ್ರತಿನಿಧಿ ಪ್ರೊ.ಮಾಧವ ನಲಪತ್, ಪ್ರೊ.ದತ್ತೇಶ್ ಪ್ರಭು ಉಪಸ್ಥಿತರಿದ್ದರು.

ಜನಪದಗಳ ದಾಖಲೀಕರಣ ಯಾಕೆ ಆಗಲ್ಲ ?

ಎರಡನೇ ಗೋಷ್ಠಿಯಲ್ಲಿ ನೆಲದ ಭಾಷೆ- ದೇಸಿ ಸೊಗಡು ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ ಏಶ್ಯಾನೆಟ್ ಸುವರ್ಣ ವಾಹಿನಿಯ ಕ್ರಿಯೇಟಿವ್ ಹೆಡ್ ಸತ್ಯಬೋಧ ಜೋಷಿ, ಈಗಿನ ಆಧುನಿಕ ತಾಂತ್ರಿಕತೆಯಲ್ಲಿ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಜನಪದಗಳನ್ನು ದಾಖಲಿಸಿಡಲು ಸಾಧ್ಯವಿದೆ. ಯಾವುದನ್ನು ಮಹಾಕಾವ್ಯಗಳಲ್ಲಿ ಗುರುತಿಸಲಾಗಿಲ್ಲವೋ ಅವನ್ನು ಜನಪದರು ಗುರುತಿಸಿದ್ದಾರೆ. ಜನಪದ ಆಚರಣೆಗಳು, ಕರಾವಳಿಯ ದೈವಾರಾಧನೆ, ವಿಶಿಷ್ಟ ಸಂಪ್ರದಾಯಗಳು, ಕೊಡಮಣಿತ್ತಾಯ, ಪಂಜುರ್ಲಿ ಪಾಡ್ದನಗಳಲ್ಲಿರುವ ಸೊಗಡು, ರಾಜ್ಯದ ಮೂಲೆ ಮೂಲೆಯ ಸಾಂಪ್ರದಾಯಿಕ ಕುಣಿತಗಳನ್ನು ದಾಖಲೀಕರಣ ಮಾಡಬೇಕು. ಕನ್ನಡದಲ್ಲಿ ಹತ್ತರಿಂದ ಹನ್ನೊಂದು ಎಂಬಂತೆ ವಾಹಿನಿಗಳನ್ನು ತೆರೆದು ಅಷ್ಟೇ ವೇಗದಲ್ಲಿ ಮುಚ್ಚುತ್ತಾರೆ ವಿನಾ ಈ ರೀತಿಯ ಕೆಲಸಗಳನ್ನು ಮಾಡಲ್ಲ. ಬಿಬಿಸಿಯಲ್ಲಿ ನಮ್ಮ ಕಲೆ, ಜನಪದಗಳು ಬರುತ್ತವೆ, ನಮ್ಮಲ್ಲಿ ಯಾಕೆ ಬರಲ್ಲ ಎನ್ನೋದ್ರ ಬಗ್ಗೆ ಚಿಂತನೆ ನಡೆಯಲ್ಲ ಎಂದು ಹೇಳಿದರು.

ಹಾವೇರಿ ಜನಪದ ವಿವಿಯ ಡಾ.ಆನಂದಪ್ಪ ಜೋಗಿ ಮಾತನಾಡಿ, ನಮ್ಮಲ್ಲಿ ಹಂಚಿ ಉಣ್ಣುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ದೇಸೀ ಎಂಬುದು ನಿಸರ್ಗ, ಇಲ್ಲಿನ ಜೀವಿಗಳನ್ನು ಸೂಚಿಸುತ್ತದೆ. ಹಂಚಿ ತಿನ್ನುವುದು ನಿಸರ್ಗದ ಪಾಠ. ಆದರೆ, ಈ ಪಾಠವನ್ನು ಇಂದಿನ ಜನಾಂಗ ಮರೆಯುತ್ತಿದೆ. ಜನಪದರ ವೈವಿಧ್ಯ ಮರೆಯಾಗುತ್ತಿದೆ. ಜನಪದರ ಸಂಸ್ಕೃತಿ, ವೈವಿಧ್ಯವನ್ನು ತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.

ಜನಪದ ಕಲಾವಿದೆ ಮಂಗಳಾ ಸಿದ್ಧಿ ವಿಚಾರ ಮಂಡಿಸಿ, ಸಿದ್ಧಿ ಜನಾಂಗ ಆಧುನಿಕತೆಯತ್ತ ಹೊರಳುತ್ತಿರುವುದನ್ನು ಸೂಚ್ಯವಾಗಿ ತಿಳಿಸಿದರು. ಹಿಂದೆಲ್ಲಾ ಸಿದ್ಧಿಗಳಲ್ಲಿ ಮದುವೆಯಂದ್ರೆ ಐದು ದಿನಗಳ ಹಬ್ಬ. ಈಗಿನ ಜಮಾನದಲ್ಲಿ ಐದೇ ನಿಮಿಷದಲ್ಲಿ ಮದುವೆ ಮುಗಿಯುತ್ತಿದೆ. ಅರಣ್ಯದಿಂದ ಹೊರತಾಗಿ ಸಿದ್ಧಿಗಳ ಜೀವನ ಇರಲಿಲ್ಲ. ಊಟ, ತಿಂಡಿ, ಮನರಂಜನೆ ಎಲ್ಲವೂ ಅರಣ್ಯಗಳೇ ಆಗಿದ್ದವು. ಈಗೀಗ ಎಲ್ಲವೂ ಹೊಸತರತ್ತ ಹೊರಳುತ್ತಿದೆ ಎಂದರು. ರೋಹಿಣಾಕ್ಷ ಶಿರ್ಲಾಲು ಗೋಷ್ಠಿ ನಿರ್ವಹಿಸಿದರು.

Reimaging the Indian Way' at the third edition of Mangaluru Lit Fest 2021 held at Ocean Pearl here on Saturday, March 27.