ನವೀನ್ ಡಿಸೋಜ ವಾರ್ಡಿನಿಂದ ರವೂಫ್ ವಾರ್ಡಿಗೆ ಓಪನ್ ಡ್ರೈನೇಜ್ ; ಡೆಂಗ್ಯು, ಮಲೇರಿಯಾ ಫ್ರೀ..!

20-04-21 05:55 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಡ್ರೈನೇಜ್ ನೀರನ್ನು ಪೈಪ್ ಲೈನಲ್ಲಿ ಸಾಗಿಸದೇ ಅಲ್ಲಲ್ಲಿ ಚರಂಡಿ ಸ್ಲಾಬ್ ಗಳಿಗೆ ಬಿಟ್ಟು ಕೈತೊಳೆದುಕೊಳ್ಳುವ ಪ್ರಕರಣ ನಡೆದುಬಂದಿದೆ.

ಮಂಗಳೂರು, ಎ.20: ಡ್ರೈನೇಜ್ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡುವಂತಿಲ್ಲ. ವಸತಿ ಸಂಕೀರ್ಣ, ವಾಣಿಜ್ಯ ಕಟ್ಟಡಗಳಿಂದ ಹೊರಬರುವ ಡ್ರೈನೇಜ್ ನೀರನ್ನು ಸರಬರಾಜು ಮಾಡಲು ಪ್ರತ್ಯೇಕ ಪೈಪ್ ಲೈನ್ ಮಾಡಬೇಕು. ಅದನ್ನು ನೇರವಾಗಿ ನದಿ ಅಥವಾ ಸಮುದ್ರಕ್ಕೆ ಹರಿಯ ಬಿಡುವಂತೆಯೂ ಇಲ್ಲ. ಡ್ರೈನೇಜ್ ನೀರನ್ನು ಸ್ವಚ್ಛಗೊಳಿಸಿ ಮರು ಬಳಕೆ ಮಾಡಬಹುದು. ಈ ಬಗ್ಗೆ ಪರಿಸರ ಇಲಾಖೆಯ ಮಾರ್ಗಸೂಚಿಯೇ ಇದೆ. ಆದರೆ, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಡ್ರೈನೇಜ್ ನೀರನ್ನು ಪೈಪ್ ಲೈನಲ್ಲಿ ಸಾಗಿಸದೇ ಅಲ್ಲಲ್ಲಿ ಚರಂಡಿ ಸ್ಲಾಬ್ ಗಳಿಗೆ ಬಿಟ್ಟು ಕೈತೊಳೆದುಕೊಳ್ಳುವ ಪ್ರಕರಣ ಹಿಂದಿನಿಂದಲೂ ನಡೆದುಬಂದಿದೆ.

ಕಂಕನಾಡಿ ಬಳಿಯ ಫಳ್ನೀರ್ ಹೈಲ್ಯಾಂಡ್ ಹಾಸ್ಪಿಟಲ್ ಬಳಿ ಇದಕ್ಕೆ ತಾಜಾ ನಿದರ್ಶನ ಆಗಬಲ್ಲ ಪ್ರಕರಣ ಕಂಡುಬಂದಿದೆ. ಡ್ರೈನೇಜ್ ನೀರನ್ನು ನೇರವಾಗಿ ರಸ್ತೆ ಬದಿಯ ಚರಂಡಿಗೆ ಹರಿಯಬಿಟ್ಟಿದ್ದಾರೆ. ಹೈಲ್ಯಾಂಡ್ ಹಾಸ್ಪಿಟಲ್ ನಿಂದ ರಸ್ತೆಯ ವಿರುದ್ಧ ಬದಿಯ ನಿರ್ಮಾಣ ಹಂತದ ಕಟ್ಟಡದ ಮುಂಭಾಗದಲ್ಲಿ ಡ್ರೈನೇಜ್ ಚೇಂಬರ್ ಮಾಡಲಾಗಿದ್ದು, ಅದರಿಂದಲೇ ಪೈಪ್ ಹಾಕಿ ಕೊಳಚೆ ನೀರನ್ನು ಹೊರಗೆ ಹರಿಯ ಬಿಟ್ಟಿದ್ದಾರೆ. ಈ ಕೊಳಚೆ ನೀರು ಹೈಲ್ಯಾಂಡ್ ಹಾಸ್ಪಿಟಲ್ ಹಿಂಭಾಗದ ಚರಂಡಿಯಲ್ಲಿ ಓಪನ್ನಾಗೇ ಹರಿದು ಹೋಗುತ್ತಿದೆ. ಹೈಲ್ಯಾಂಡ್ ಹಾಸ್ಪಿಟಲ್ ನಲ್ಲಿರುವ ರೋಗಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಡೆಂಗ್ಯು, ಮಲೇರಿಯಾ ರೋಗ ಬರುವುದಕ್ಕೆ ಬೇರಾವುದೇ ಕಾರಣ ಬೇಕಿಲ್ಲ.

ಈ ರೀತಿಯ ಅಪಸವ್ಯ ನಡೆಯುತ್ತಿರುವುದು, ಅಲ್ಲಿ ಡ್ರೈನೇಜ್ ನೀರನ್ನು ಚರಂಡಿಗೆ ಬಿಡುತ್ತಿರುವುದು ಸ್ಥಳೀಯ ಕಾರ್ಪೊರೇಟರುಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಮಹಾನಗರ ಪಾಲಿಕೆಯ ಲೋಫರ್ ಇಂಜಿನಿಯರುಗಳು, ಕಾರ್ಪೊರೇಟರುಗಳು ಸೇರಿಕೊಂಡು ಕೋಟಿ ಬಿಲ್ ಮಾಡಿ, ಮಹಾನಗರ ಪಾಲಿಕೆಯ ಬೊಕ್ಕಸ ಬರಿದು ಮಾಡುತ್ತಾರೆ, ವಿನಾ ಡ್ರೈನೇಜ್ ನೀರನ್ನು ಸರಿಯಾಗಿ ನಿರ್ವಹಿಸಲು ಈವರೆಗೂ ಆಗಿಲ್ಲ. ಒಳಚರಂಡಿ ಕಾಮಗಾರಿಗೆಂದು ಪ್ರತಿ ವರ್ಷ ಕೋಟಿಗಟ್ಟಲೆ ಬಿಲ್ ಮಾತ್ರ ಪಾಸ್ ಆಗುತ್ತಲೇ ಇರುತ್ತದೆ. ಇದು ಬಿಜೆಪಿ, ಕಾಂಗ್ರೆಸ್ ಯಾರದ್ದೇ ಆಡಳಿತ ಇದ್ದರೂ, ಮಂಗಳೂರಿನ ಮಂದಿಯ ದುರಂತ ಸ್ಥಿತಿ.

ಫಳ್ನೀರ್ ನಲ್ಲಿ ರಸ್ತೆಯ ಆಚೀಚೆಯ ಭಾಗಗಳು ಬೇರೆ ಬೇರೆ ಕಾರ್ಪೊರೇಟರ್ ವ್ಯಾಪ್ತಿಗೆ ಬರುತ್ತದೆ. ಬೆಂದೂರುವೆಲ್, ಕಂಕನಾಡಿ ಭಾಗ ನವೀನ್ ಡಿಸೋಜ ವ್ಯಾಪ್ತಿಗೆ ಬಂದರೆ, ಹೈಲ್ಯಾಂಡ್ ಹಾಸ್ಪಿಟಲ್ ಕಡೆಯ ಅತ್ತಾವರ ವಿಪಕ್ಷ ನಾಯಕ ಅಬ್ದುಲ್ ರವೂಫ್ ಗೆ ಬರುತ್ತದೆ. ಫಳ್ನೀರಿನ ಕಡೆಯ ಡ್ರೈನೇಜ್ ನೀರನ್ನು ನವೀನ್ ಡಿಸೋಜ ವಾರ್ಡಿನಿಂದ ಅಬ್ದುಲ್ ರವೂಫ್ ಕಡೆಯ ವಾರ್ಡಿಗೆ ಓಪನ್ನಾಗಿಯೇ ಹರಿದು ಬಿಡಲಾಗಿದೆ. ಈ ಬಗ್ಗೆ ಅಬ್ದುಲ್ ರವೂಫ್ ಬಳಿ ಕೇಳಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ರೀತಿಯ ದೂರುಗಳ ಬಗ್ಗೆ ಇಂಜಿನಿಯರುಗಳಿಗೆ ಎಷ್ಟು ಸಾರಿ ಹೇಳುವುದು, ಏನೂ ಆಗುತ್ತಿಲ್ಲ. ನಮ್ಮ ಮಾತೇ ಕೇಳುತ್ತಿಲ್ಲ. ನೀವೊಮ್ಮೆ ಫೋನ್ ಮಾಡಿ ನೋಡಿ, ನಂಬರ್ ಕಳಿಸ್ತೇನೆ ಎಂದಿದ್ದಾರೆ. ಅವರು ಕಳಿಸಿದ ನಂಬರಿಗೆ ಫೋನ್ ಮಾಡಿದರೆ, ಲೋಫರ್ ಇಂಜಿನಿಯರುಗಳು ಕರೆಯನ್ನೇ ರಿಸೀವ್ ಮಾಡಲ್ಲ.

ಇನ್ನು ನವೀನ್ ಡಿಸೋಜಗೆ ಈ ಬಗ್ಗೆ ಕೇಳಿದ್ರೆ, ವಾಯ್ಲೆಂಟ್ ಆಗಿ ಮಾತಾಡ್ತಾರೆ. ನಲ್ವತ್ತು ವರ್ಷಗಳಿಂದ ಹಳೆಯ ಪ್ರಕರಣ ಅದು. ಪೈಪ್ ಲೈನ್ ಸರಿಯಾಗಿ ಮಾಡದೇ ಉಳಿದುಬಿಟ್ಟಿತ್ತು. ಈಗ ಕಾಮಗಾರಿ ಆಗುತ್ತಿದ್ದು ನನ್ನ ವಾರ್ಡ್ ಅಲ್ಲಿಗೆ ಮುಗಿಯುತ್ತದೆ. ಮುಂದಿನ ವಾರ ಅತ್ತಾವರ ಕಡೆಯ ವಾರ್ಡಿನಲ್ಲಿ ಕೆಲಸ ಆಗುತ್ತದೆ. ಲೇಬರ್ ಪ್ರಾಬ್ಲಂನಿಂದಾಗಿ ಕೆಲಸ ಫಾಸ್ಟ್ ಆಗಿ ಆಗುತ್ತಿಲ್ಲ ಎಂದಿದ್ದಾರೆ. ನಲ್ವತ್ತು ವರ್ಷಗಳಿಂದ ನಿಮ್ಮ ವಾರ್ಡಿಗೆ ಹಣ ಬಂದಿಲ್ವೇ, 2006ರಲ್ಲಿ ಲೋಬೊ ಅಧಿಕಾರಿಯಾಗಿದ್ದಾಗ ಒಳಚರಂಡಿಗೆಂದು ಕುಡ್ಸೆಂಪ್ ಯೋಜನೆಯಡಿ 350 ಕೋಟಿ ಎಡಿಬಿ ಸಾಲದ ಹಣ ಹಾಕಿದ್ದರಲ್ಲಾ ಅದು ಎಲ್ಲಿ ಹೋಯ್ತು ಎಂದು ಕೇಳಿದ್ದಕ್ಕೆ, ಅದೇನು ಗೊತ್ತಿಲ್ಲ. ಈಗ ಭಾರೀ ಕಷ್ಟದಿಂದ ಅಲ್ಲಿ ವರೆಗೆ ಮಾಡಿದ್ದೇನೆ ಎಂದಿದ್ದಾರೆ ನವೀನ್ ಡಿಸೋಜ.

ಕಾರ್ಪೊರೇಟರುಗಳಂದ್ರೆ, ನಗರ ಭಾಗದಲ್ಲಿರುವ ತಳಮಟ್ಟದ ಜನಪ್ರತಿನಿಧಿಗಳು. ಜನರಿಗೆ ನೇರವಾಗಿ ಸಿಗುವ ಶಾಸಕರಿಗಿಂತ ಕಡಿಮೆಯಿಲ್ಲದ ರಾಜಕಾರಣಿಗಳು. ಐದು ವರ್ಷ ಶಾಸಕನಾಗೋದೂ, ಹತ್ತು ವರ್ಷ ಕಾರ್ಪೊರೇಟರ್ ಆಗೋದು ಎರಡೂ ಸಮ ಎನ್ನುತ್ತಾರೆ ಮಂಗಳೂರಿನ ಜನ. ಆತನಿಗೆ ಕಮಾಯಿ, ಪರ್ಸೆಂಟೇಜ್ ಎಲ್ಲವೂ ಅಷ್ಟೇ ಭರಪೂರ ಇರುತ್ತದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಡ್ರೈನೇಜ್ ನೀರನ್ನು ಸಪ್ಲೈ ಕೊಡಿಸಲು, ಈ ಬಗ್ಗೆ ಇಂಜಿನಿಯರುಗಳಿಗೆ ಹೇಳಿ ಕೆಲಸ ಮಾಡಿಸಲು ಇವರಿಂದ ಆಗಲ್ಲ. ಪಾಲಿಕೆ ಇಂಜಿನಿಯರುಗಳಂದ್ರೆ ಭ್ರಷ್ಟರು, ಲೋಫರ್ ಗಳು ಅನ್ನೋದು ಎಲ್ಲರಿಗೂ ಗೊತ್ತು. ಅವರಿಂದಲೂ ಕೆಲಸ ಮಾಡಿಸುವುದು ಜನಪ್ರತಿನಿಧಿಯ ಕರ್ತವ್ಯ ಅಷ್ಟೇ ಅಲ್ಲ, ಆತನ ತಾಕತ್ತು ಕೂಡ.

ಡ್ರೈನೇಜ್ ನೀರನ್ನು ಚರಂಡಿಗೆ ಬಿಟ್ಟು ಮಂಗಳೂರಿನ ಯಾವುದೇ ಕಡೆಯಲ್ಲೂ ಬಾವಿ ನೀರನ್ನು ಕುಡಿಯುವುದು ಬಿಡಿ, ಇತರ ಕೆಲಸಕ್ಕೂ ಬಳಸದ ಸ್ಥಿತಿಯಾಗಿದೆ. ಮಂಗಳೂರಿನಲ್ಲಿ ಇಂಥ ದರಿದ್ರ ಸ್ಥಿತಿ ಆಗಿರೋದಕ್ಕೆ ಇಲ್ಲಿನ ಕಾರ್ಪೊರೇಟರ್ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರಣ ಎನ್ನೋದಕ್ಕೆ ಯಾವುದೇ ಮುಲಾಜು ಬೇಕಿಲ್ಲ. ಫಳ್ನೀರ್ ನಲ್ಲಿ ಚರಂಡಿಗೆ ಬಿಟ್ಟ ನೀರು ಧಸ ಧಸ ಹರಿಯುತ್ತಾ ಅತ್ತಾವರದ ಭಾಗದ ಕಾಲುವೆಯಲ್ಲಿ ಮಂಗಳಾದೇವಿ ವಾರ್ಡ್ ನೇತ್ರಾವತಿ ನದಿ ಸೇರುತ್ತದೆ. ಅತ್ತ ನೇತ್ರಾವತಿಯೂ ಮಲಿನ. ಡ್ರೈನೇಜ್ ನೀರಿನಿಂದಾಗಿ ನಗರ ಭಾಗದ ಕೆರೆ, ಬಾವಿ ಎಲ್ಲವೂ ಮಲಿನ. ಈ ಬಗ್ಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. 

A drainage is seen open in Falnir, Mangalore causing trouble to public which can also effect people with diseases like Malaria and Dengue. Corporate Abdul Rauf and Naveen Dsouza don't care for the issue.