Madhuban Farm: ಕೇಜಿ ತೂಗುವ ಸೋಲಾಪುರ್ ಸೀತಾಫಲ್ ಹಣ್ಣಿನ ಬಗ್ಗೆ ಕೇಳಿದ್ದೀರಾ.. ಇದು ಕಸ್ಪಾಟೆ ಯಶೋಗಾಥೆ !

24-04-21 09:26 pm       Headline Karnataka News Network   ಸ್ಪೆಷಲ್ ಕೆಫೆ

ಡಾ.ನವನಾಥ್ ಮಲ್ಹಾರಿ ಕಸ್ಪಾಟೆ, ಈ ಹೆಸರನ್ನು ಮಹಾರಾಷ್ಟ್ರದಲ್ಲಿ ಕೇಳದವರೇ ಇರಲಿಕ್ಕಿಲ್ಲ. ಸೀತಾಫಲ ಹಣ್ಣಿನ ಗಿಡಕ್ಕೆ ಕಸಿ ಮಾಡಿ ವಿಭಿನ್ನ ರೀತಿಯ ಹಣ್ಣುಗಳನ್ನು ಬೆಳೆಸಿ ಸಾಧನೆ ಮಾಡಿದವರು.

ಡಾ.ನವನಾಥ್ ಮಲ್ಹಾರಿ ಕಸ್ಪಾಟೆ, ಈ ಹೆಸರನ್ನು ಮಹಾರಾಷ್ಟ್ರದಲ್ಲಿ ಕೇಳದವರೇ ಇರಲಿಕ್ಕಿಲ್ಲ. ಸೀತಾಫಲ ಹಣ್ಣಿನ ಗಿಡಕ್ಕೆ ಕಸಿ ಮಾಡಿ ವಿಭಿನ್ನ ರೀತಿಯ ಹಣ್ಣುಗಳನ್ನು ಬೆಳೆಸಿ ಸಾಧನೆ ಮಾಡಿದವರು. ಕೇಜಿ ತೂಗುವ ಸೋಲಾಪುರ್ ಸೀತಾಫಲ್ ಎಂಬ ತಳಿಯನ್ನು ಬೆಳೆದು ದೇಶದಲ್ಲಿ ಅತ್ಯಂತ ವಿಶಿಷ್ಟ ಸಾಧನೆ ಮಾಡಿದವರು ಡಾ.ನವನಾಥ್ ಮಲ್ಹಾರಿ ಕಸ್ಪಾಟೆಯವರು.

ಸೀತಾಫಲ ಹಣ್ಣಿನಲ್ಲಿ ವಿಭಿನ್ನ ತಳಿಯನ್ನು ಬೆಳೆದಿದ್ದಲ್ಲದೆ ಅದನ್ನು ತನ್ನದೇ ಹೆಸರಲ್ಲಿ ಪೇಟೆಂಟ್ ಮಾಡಿಕೊಂಡವರು ಕಸ್ಪಾಟೆ. ಸೀತಾಫಲದ ಗೋಲ್ಡನ್ ವೆರೈಟಿ ಎಂದು ಕರೆಯಲ್ಪಡುವ ಈ ಹಣ್ಣಿಗೆ ನವನಾಥ್ ಮಲ್ಙಾರಿ ಕಸ್ಪಾಟೆ ಹೆಸರಲ್ಲೇ ಎನ್ಎಂಕೆ – 1 ಗೋಲ್ಡನ್ ವೆರೈಟಿ ಎಂದು 2019 ಸೆಪ್ಟಂಬರಲ್ಲಿ ಇವರು ಪೇಟೆಂಟ್ ಪಡೆದಿದ್ದಾರೆ. 2001ರ ಫಾರ್ಮರ್ಸ್ ರೈಟ್ಸ್ ಏಕ್ಟ್ ಪ್ರಕಾರ, ಈ ಪೇಟೆಂಟ್ ಮೂಲಕ ನವನಾಥ್ ಬಿಟ್ಟರೆ ಬೇರಾವುದೇ ವ್ಯಕ್ತಿ ಈ ರೀತಿಯ ಸೀತಾಫಲ ಹಣ್ಣನ್ನು ಬೆಳೆದು ಮಾರಾಟ ಮಾಡುವಂತಿಲ್ಲ. ನವನಾಥ್ ಅವರ ಗಮನಕ್ಕೆ ತರದೆ ಸೀತಾಫಲದ ಹಣ್ಣಿನ ನರ್ಸರಿಯನ್ನೂ ಮಾಡುವಂತಿಲ್ಲ.

ಎನ್ಎಂಕೆ – 1 ಗೋಲ್ಡನ್ ವೆರೈಟಿ ಸೀತಾಫಲದ ಹಣ್ಣು ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ದೇಹಕ್ಕೆ ಶಕ್ತಿವರ್ಧಕ, ವೀರ್ಯ ವರ್ಧಕ, ದೇಹಕ್ಕೆ ತಂಪು, ಬಾಯಿಗೆ ಸಿಹಿ, ರಕ್ತ ಹೆಚ್ಚಳಕ್ಕೆ ಪೂರಕ, ನೆನಪು ಶಕ್ತಿ ಹೆಚ್ಚಿಸಲು ಸಹಕಾರಿ ಮತ್ತು ಸುಲಭದಲ್ಲಿ ಜೀರ್ಣ ಆಗಬಲ್ಲ ಔಷಧೀಯ ಅಂಶವುಳ್ಳ ಹಣ್ಣು. ಸೀತಾಫಲದ ಹೈಬ್ರಿಡ್ ಹಣ್ಣನ್ನು ಬೆಳೆದಿದ್ದಕ್ಕಾಗಿ ಕಸ್ಪಾಟೆಯವರಿಗೆ 2019ರಲ್ಲೇ 18ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದವು.

ಇದೇ ಹಣ್ಣಿನ ಮೂಲಕ ಕಸ್ಪಾಟೆಯವರು ಐದು ಇದೇ ಜಾತಿಯ ಸೀತಾಫಲದ ಹಣ್ಣುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅನೋನ – 2, ಎನ್ಎಂಕೆ -1 (ಗೋಲ್ಡನ್) ಎನ್ಎಂಕೆ – 3 ಮತ್ತು ಫಿಂಗರ್ ಪ್ರಿಂಟ್ಸ್ ಹೆಸರಲ್ಲಿ ಅವನ್ನು ಬೆಳೆಸಿದ್ದಾರೆ. ಇವೆಲ್ಲಕ್ಕಿಂತಲೂ ಎನ್ಎಂಕೆ – 1 ಸೀತಾಫಲ ಮಾತ್ರ ಅತ್ಯಂತ ವಿಶಿಷ್ಟವಾದ್ದು. ಮಾಗಿದ ಹಣ್ಣುಗಳಂದ್ರೆ ಕಡಿಮೆ ಬೀಜವುಳ್ಳ ಮತ್ತು ಹೆಚ್ಚು ತಿರುಳನ್ನು ಹೊಂದಿರುತ್ತದೆ. ಇದರಲ್ಲಿನ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಅರ್ಧಕ್ಕೆ ಸಿಗಿದರೆ ಐಸ್ ಕ್ರೀಮ್ ರೀತಿಯ ದಪ್ಪಗಿನ ಪಲ್ಪ್ ಸಿಗುತ್ತದೆ. ಬಿಳಿ ಬಣ್ಣದ ದಪ್ಪಗಿನ ಪಲ್ಪ್ ಹೊಂದಿರುವುದು ಎನ್ ಎಂಕೆ – 1 ಗೋಲ್ಡನ್ ಹಣ್ಣಿನ ಪ್ರಮುಖ ಲಕ್ಷಣ.

ನವನಾಥ್ ಕಸ್ಪಾಟೆಯವರು ಸೋಲಾಪುರದಲ್ಲಿ ಮಧುಬನ್ ಫಾರ್ಮ್ ಮತ್ತು ನರ್ಸರಿ ಹೆಸರಲ್ಲಿ ಸೀತಾಫಲ ಕೃಷಿ ಮಾಡಿದ್ದಾರೆ. ಇವರು ತಮ್ಮ 35 ಎಕ್ರೆ ವ್ಯಾಪ್ತಿಯಲ್ಲಿ ಸೀತಾಫಲದ ನರ್ಸರಿ ಮಾಡಿದ್ದಾರೆ. ಎಕ್ರೆಯಲ್ಲಿ 340 ಗಿಡಗಳನ್ನು ನೆಟ್ಟರೆ, ಎರಡು ವರ್ಷದಲ್ಲಿ 2ರಿಂದ 5 ಲಕ್ಷ ರೂಪಾಯಿ ಆದಾಯ ಬರುತ್ತದೆ. ಒಂದು ಎಕ್ರೆಗೆ ಸುಮಾರು 80 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ, ಕಸ್ಪಾಟೆಯವರು. ನಾನು 35 ಎಕ್ರೆಯಲ್ಲಿ ನರ್ಸರಿ ಬೆಳೆದಿದ್ದು, ವರ್ಷದಲ್ಲಿ ಏನಿಲ್ಲಾಂದ್ರೂ ಒಂದು ಕೋಟಿ ಆದಾಯ ಬರುತ್ತದೆ. ನನ್ನ ನರ್ಸರಿಯಲ್ಲಿ ಸೀತಾಫಲದ ಹಣ್ಣಿನ ಗಿಡಗಳನ್ನೂ ಮಾಡಿ ಮಾರುತ್ತೇನೆ. ಗೋರ್ಮಾಲೆ ಗ್ರಾಮದಲ್ಲಿರುವ ನರ್ಸರಿ ನೋಡಿಕೊಳ್ಳಲು ಏಳು ಮಂದಿ ಮ್ಯಾನೇಜರ್ ಮತ್ತು 60 ಜನ ಕಾರ್ಮಿಕರು ಇದ್ದಾರೆ ಎಂದು ಹೇಳುತ್ತಾರೆ, ಕಸ್ಪಾಟೆ.

ಕೇವಲ ಹನ್ನೊಂದನೇ ಕ್ಲಾಸ್ ಕಲಿತರೂ, ಸೀತಾಫಲ ಹಣ್ಣನ್ನೇ ಕಸಿ ಮಾಡಿ, ಅದರಿಂದಲೇ ಕೋಟ್ಯಂತರ ರೂಪಾಯಿ ಗಳಿಸಿ ದೇಶದಲ್ಲೇ ಮಾದರಿ ಕೃಷಿಕನೆಂಬ ಹೆಗ್ಗಳಿಕೆ ಗಳಿಸಿರುವ ನವನಾಥ ಕಸ್ಪಾಟೆಯವರು ಮಹಾರಾಷ್ಟ್ರದಲ್ಲಿ ಐಕಾನ್ ಆಗಿ ಬೆಳೆದಿದ್ದಾರೆ. ಅಷ್ಟೇ ಅಲ್ಲಾ, ರಾಜ್ಯ ಮತ್ತು ದೇಶದ ವಿವಿಧೆಡೆಯಲ್ಲಿ ಕೃಷಿ ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಉಪನ್ಯಾಸಕ್ಕೆ ತೆರಳುತ್ತಾರೆ. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಹಾರ್ಟಿಕಲ್ಟರ್ ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳು ಅವರನ್ನು ಗೌರವಿಸಿದ್ದಲ್ಲದೆ ಅವರ ಸಾಧನೆಗಾಗಿ ಡಾಕ್ಟರೇಟ್ ಪದವಿಯನ್ನು ನೀಡಿದೆ. ಸೀತಾಫಲದ ಹಣ್ಣಿನಲ್ಲಿ ವೆರೈಟಿ ತಳಿಯನ್ನು ಬೆಳೆಸಿ, ಅದಕ್ಕೆಂದೇ ಪೇಟೆಂಟ್ ಮಾಡಿಕೊಂಡ ದೇಶದ ಏಕೈಕ ವ್ಯಕ್ತಿಯೂ ಡಾ.ನವನಾಥ ಕಸ್ಪಾಟೆ.

11ನೇ ಕ್ಲಾಸ್ ಕಲಿತಿದ್ದ ನವನಾಥ ಕಸ್ಪಾಟೆಯವರು ಮೊದಲು ತಮ್ಮ ಜಮೀನಿನಲ್ಲಿ ದ್ರಾಕ್ಷಿ ಮತ್ತು ಸೀತಾಫಲ ಬೆಳೆಯುತ್ತಿದ್ದರು. ಆದರೆ, ದ್ರಾಕ್ಷಿಗಿಂತ ಸೀತಾಫಲ ಬೆಳೆಯುವುದು ಕಡಿಮೆ ಖರ್ಚಿನದ್ದಾಗಿತ್ತು. ಇದೇ ವೇಳೆ, ಸೀತಾಫಲದ ಬೆಳೆಯಲ್ಲೇ ತಳಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಈಗ ತಮ್ಮದೇ 45 ಎಕ್ರೆ ಜಮೀನಲ್ಲಿ 40ಕ್ಕೂ ಅಧಿಕ ತಳಿಯನ್ನು ಬೆಳೆದಿದ್ದಾರೆ. ಕಸ್ಪಾಟೆಯವರ ಸಾಧನೆಯನ್ನು ಕಂಡು ಬೆರಗಾದ ಬೆಂಗಳೂರು ಯೂನಿವರ್ಸಿಟಿ 2018ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಸೋಲಾಪುರದ ಮಧುಬನ್ ನರ್ಸರಿಯಲ್ಲಿ ಬೆಳೆದ ಸೀತಾಫಲದ ಗೋಲ್ಡನ್ ವೆರೈಟಿಗೆ ಭಾರೀ ಬೇಡಿಕೆಯಿದ್ದು, ದೇಶಾದ್ಯಂತ ಮಾರುಕಟ್ಟೆಗಳಿಗೆ ಪೂರೈಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸೋಲಾಪುರ್ ಕಸ್ಟರ್ಡ್ ಏಪಲ್ ಅಂದ್ರೆ, ಅದು ಕಸ್ಪಾಟೆಯವರದ್ದೇ ಎನ್ನುವಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಸೀತಾಫಲದ ಉದ್ಯಮವನ್ನು ಈಗ ನವನಾಥ ಕಸ್ಪಾಟೆಯವರ ಜೊತೆಗೆ ಮಗ ಪ್ರವೀಣ್ ನಡೆಸುತ್ತಿದ್ದಾರೆ. ಈ ರೀತಿಯ ಹಣ್ಣುಗಳಿಗಾಗಿ ಅವರನ್ನೇ ಸಂಪರ್ಕಿಸಬಹುದು.

Contact: 9823357757 | 9881426974 or visit www.madhubanfarmnursery.com

Here is extraordinary Success story of Navanath Kaspate the holder of Madhuban Farm and Nursery the worlds biggest custard apple or Sitafal producer. Contact now for golden class fruits.