ನೀರಜ್ ಹೆಸರಿದ್ದರೆ ಇಲ್ಲಿ ಬನ್ನಿ, ಭರ್ಜರಿ ಮೀನೂಟ ನೀಡ್ತಿದ್ದಾರೆ ಈ ಹೊಟೇಲ್ !

10-08-21 11:06 pm       Headline Karnataka News Network   ಸ್ಪೆಷಲ್ ಕೆಫೆ

ನೀರಜ್ ಚೋಪ್ರಾ ಸಾಧನೆ ಮಾಡಿದ್ದಕ್ಕಾಗಿ ನೀರಜ್ ಹೆಸರಿದ್ದವರೆಲ್ಲ ಅದರ ಲಾಭ ಪಡೆಯುತ್ತಿದ್ದಾರೆ. ಭಟ್ಕಳದಲ್ಲಿ ಒಂದು ಹೊಟೇಲಿನವರು ನೀರಜ್ ಹೆಸರಿದ್ದವರಿಗೆ ಉಚಿತವಾಗಿ ಹೊಟ್ಟೆ ತುಂಬಾ ಊಟದ ಕೊಡುಗೆಯನ್ನು ನೀಡಿದ್ದು, ಹುಬ್ಬೇರಿಸುವಂತೆ ಮಾಡಿದೆ.

ಕಾರವಾರ, ಆಗಸ್ಟ್ 10: ಅತ್ತ ಒಲಿಂಪಿಕ್ ನಲ್ಲಿ ನೀರಜ್ ಚೋಪ್ರಾ ಸಾಧನೆ ಮೆರೆಯುತ್ತಿದ್ದಂತೆ, ಇತ್ತ ನೀರಜ್ ಹೆಸರಿದ್ದವರಿಗೆಲ್ಲ ಡಿಮ್ಯಾಂಡ್ ಬಂದಿದೆ. ಎಷ್ಟರ ಮಟ್ಟಿಗೆ ಅಂದ್ರೆ, ನೀರಜ್ ಚೋಪ್ರಾ ಸಾಧನೆ ಮಾಡಿದ್ದಕ್ಕಾಗಿ ನೀರಜ್ ಹೆಸರಿದ್ದವರೆಲ್ಲ ಅದರ ಲಾಭ ಪಡೆಯುತ್ತಿದ್ದಾರೆ. ಭಟ್ಕಳದಲ್ಲಿ ಒಂದು ಹೊಟೇಲಿನವರು ನೀರಜ್ ಹೆಸರಿದ್ದವರಿಗೆ ಉಚಿತವಾಗಿ ಹೊಟ್ಟೆ ತುಂಬಾ ಊಟದ ಕೊಡುಗೆಯನ್ನು ನೀಡಿದ್ದು, ಹುಬ್ಬೇರಿಸುವಂತೆ ಮಾಡಿದೆ.

ಭಟ್ಕಳದ ಶಿರಾಲಿಯ ನೀರಕಂಠ ಜಂಕ್ಷನ್‌ನಲ್ಲಿ ಏಳು ತಿಂಗಳ ಹಿಂದೆ ಆರಂಭಗೊಂಡಿದ್ದ 'ತಾಮ್ರ' ಎನ್ನುವ ರೆಸ್ಟೋರೆಂಟ್‌ ಈ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಆಮೂಲಕ ಚಿನ್ನದ ವೀರ ನೀರಜ್ ಚೋಪ್ರಾಗೆ ಗೌರವ ಸಲ್ಲಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

'ತಾಮ್ರ' ರೆಸ್ಟೋರೆಂಟ್ ಮೀನಿನ ವಿಶೇಷ ಖಾದ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿದಿನ ನೂರಾರು ಜನರು ಫಿಶ್ ಖಾದ್ಯಕ್ಕಾಗಿಯೇ ಭೇಟಿ ನೀಡುತ್ತಾರೆ.‌ ಇಂಥಾ ಹೊಟೇಲಿನಲ್ಲಿ ಈಗ ನೀರಜ್ ಹೆಸರಿದ್ದವರಿಗೆ ಭರ್ಜರಿ ಊಟದ ಆಫರ್ ನೀಡಲಾಗಿದೆ. ನೀರಜ್ ಹೆಸರಿನವರಿಗೆ ಅನ್‌ ಲಿಮಿಟೆಡ್ ಊಟವನ್ನು ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ 15ರ ವರೆಗೆ ಇರಲಿದ್ದು, ಈ ಬಗ್ಗೆ ಈಗಾಗಲೇ ತಾಮ್ರ ಹೊಟೇಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಘೋಷಣೆ ಮಾಡಿಕೊಂಡಿದೆ. ಇನ್‌ಸ್ಟಾಗ್ರಾಂ ಪೋಸ್ಟ್ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವೈರಲ್ ಆಗಿದ್ದು, ಭರ್ಜರಿ ಊಟದ ಆಫರ್ ಭಾರೀ ಸದ್ದು ಮಾಡುತ್ತಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ 'ತಾಮ್ರ‌' ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್‌ನಲ್ಲಿ ಉಚಿತವಾಗಿ ಬೇಕಾದಷ್ಟು ಊಟ, ಖಾದ್ಯಗಳನ್ನು ನೀಡಲಾಗುತ್ತದೆ. ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಬೇಕು. ಕೇವಲ ನೀರಜ್ ಎಂದು ಹೆಸರಿದ್ದವರಿಗೆ ಮಾತ್ರ ಈ ಆಫರ್ ಸಿಗಲಿದೆ ಎಂದಿದ್ದಾರೆ.

ಫೈಟರ್ ಜೆಟ್ ವೀರ ವರ್ಧಮಾನ್ ಮಾದರಿ

ಕಳೆದ ಬಾರಿ ಪಾಕ್ ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಹೆಸರು ಮಾಡಿದ್ದ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ್ ಹೆಸರಲ್ಲಿ ಒಂದು ಹೊಟೇಲಿನವರು ಉಚಿತ ಊಟದ ಘೋಷಣೆ ಮಾಡಿದ್ದರು. ಯಾರು ವರ್ಧಮಾನ್ ಹೆಸರಿನಲ್ಲಿದ್ದಾರೆ, ಅವರಿಗೆ ಮಾತ್ರ ಉಚಿತ ಊಟ ಎಂದಿದ್ದರು. ಅದೇ ವಿಚಾರ ನೆನಪಿಗೆ ಬಂದು ಈಗ ನೀರಜ್ ಚೋಪ್ರಾ ಹೆಸರಲ್ಲಿ ಅವರ ಹೆಸರುಳ್ಳವರಿಗೆ ಊಟದ ಕೊಡುಗೆಯನ್ನು ನೀಡಿದ್ದೇವೆ ಎಂದರು ಆಶೀಶ್. 

Neeraj Chopra gold medal in Olympic Bhatkal restaurant Tamra offers free food to those whose name is Neeraj.