ಬ್ಲೂ ಫ್ಲ್ಯಾಗ್ ಬೀಚ್ ; ನಿಮ್ಮ ಮನೆಯ ಒಳಹೊಕ್ಕಲು ನೀವೇ ಟೋಲ್ ಕಟ್ಟಿ! ಕರಾವಳಿ ಅಭಿವೃದ್ಧಿ ಬಗ್ಗೆ ಬೆಂಗಳೂರಿನಲ್ಲಿ ಕುಳಿತವರು ನಿರ್ಧಾರ ಮಾಡುತ್ತಿದ್ದಾರೆ! 

17-01-26 03:06 pm       ರಾಜರಾಮ್ ತಲ್ಲೂರು   ಅಂಕಣಗಳು

ಮೂವತ್ತು ವರ್ಷಗಳ ಹಿಂದೆ ಮಂಗಳೂರಿನಿಂದ ಕಾರವಾರದ ತನಕ ಇಡಿಯ ಕರಾವಳಿಯಲ್ಲಿ ಸಮುದ್ರ ತೀರಕ್ಕೆ ಹೋಗುವುದಕ್ಕೆ, ಅಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವುದಕ್ಕೆ, ಅಥವಾ ವಿಹರಿಸುವುದಕ್ಕೆ, ವಸತಿ ನಿರ್ಮಾಣಕ್ಕೆ ಯಾರಾದರೂ ಅಡ್ಡಿ ಮಾಡಿದ್ದಿದೆಯೆ? 

ಮೂವತ್ತು ವರ್ಷಗಳ ಹಿಂದೆ ಮಂಗಳೂರಿನಿಂದ ಕಾರವಾರದ ತನಕ ಇಡಿಯ ಕರಾವಳಿಯಲ್ಲಿ ಸಮುದ್ರ ತೀರಕ್ಕೆ ಹೋಗುವುದಕ್ಕೆ, ಅಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವುದಕ್ಕೆ, ಅಥವಾ ವಿಹರಿಸುವುದಕ್ಕೆ, ವಸತಿ ನಿರ್ಮಾಣಕ್ಕೆ ಯಾರಾದರೂ ಅಡ್ಡಿ ಮಾಡಿದ್ದಿದೆಯೆ? 

ಈಗ ಕಾಲ ಬದಲಾಗಿದೆ. ಕರಾವಳಿಯ ಅಭಿವೃದ್ಧಿ ಹೇಗೆ, ಎಷ್ಟು ಎಂದು ಕರಾವಳಿಯವರಲ್ಲಿ ಕೇಳದೇ, ಬೆಂಗಳೂರಿನಲ್ಲಿ ಕುಳಿತವರು ನಿರ್ಧಾರ ಮಾಡುತ್ತಿದ್ದಾರೆ! ಕರಾವಳಿಯಲ್ಲಿ ಈಗಾಗಲೇ ಇರುವ ಪಡುಬಿದ್ರಿ ಮತ್ತು ಕಾಸರಕೋಡ ಬ್ಲೂ ಫ್ಲ್ಯಾಗ್ ಬೀಚ್‌ಗಳ ಜೊತೆ ಇನ್ನೂ 11 ಸಮುದ್ರ ತೀರಗಳನ್ನು ಬ್ಲೂಫ್ಲ್ಯಾಗ್ ಬೀಚ್ ಮಾಡಲು ಕರ್ನಾಟಕ ಸರ್ಕಾರ 142.06 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆಯಂತೆ. ದ.ಕ.ದ ಸೋಮೇಶ್ವರ, ಉಳ್ಳಾಲ, ಸಸಿಹಿತ್ಲು, ಉಡುಪಿಯ ಆಸರೆ, ಕೋಡಿ ಕನ್ಯಾಣ, ಪಡುಕರೆ, ಕೋಡಿ ಕುಂದಾಪುರ, ಶಿರೂರು, ಉ.ಕ. ಜಿಲ್ಲೆಯ ಬೈಲೂರು, ಅಪ್ಸರಕೊಂಡ, ಠಾಗೋರ್ ಬೀಚುಗಳು ಶೀಘ್ರವೇ ಪ್ರವಾಸೋದ್ಯಮ ಅಭಿವೄದ್ಧಿ ಹೆಸರಿನಲ್ಲಿ ಬ್ಲೂಫ್ಲ್ಯಾಗ್ ಎನ್ನುವ ಟೋಲ್ ಸಹಿತ ಬೀಚುಗಳಾಗಲಿವೆಯಂತೆ.  

 343km ಉದ್ದದ ಕರ್ನಾಟಕ ಕರಾವಳಿಯಲ್ಲಿ ಗಮನಾರ್ಹ ಪಾಲು ಈಗಾಗಲೇ ಬಂದರುಗಳ ಹೆಸರಿನಲ್ಲಿ, ಪ್ರವಾಸೋದ್ಯಮದ ಹೆಸರಿನಲ್ಲಿ, ಡಿಫೆನ್ಸು, ಕೈಗಾರಿಕೆ ಹೆಸರಿನಲ್ಲಿ, ಖಾಸಗಿ ಹೋಮ್ ಸ್ಟೇ, ಬೀಚ್‌ಹೌಸ್ ಹೆಸರಲ್ಲಿ... ಹೀಗೆ ಏನೇನೋ ಕಾರಣಗಳಿಗೆ ಆನಿಗಳ ಬೀಡಾಗಲು ಸನ್ನದ್ಧವಾಗಿದೆ. ಒಮ್ಮೆ ಅಲ್ಲಿ ಆನಿ ಲಾಯ ಕಟ್ಟಿದರೆಂದರೆ ಮುಗಿಯಿತು. ಮತ್ತೆ ನಮಗೆ ಆ ಜಾಗದಲ್ಲಿ ಪ್ರವೇಶ ಇಲ್ಲ. ಮೀನುಗಾರಿಕೆಯನ್ನು ಲಾಭದಾಯಕ ಉದ್ಯಮ ಮಾಡಿ, ಸೂಟುಬೂಟಿನ ಮೀನುಗಾರರನ್ನು ಸ್ಥಾಪಿಸಿ, ಸಾಂಪ್ರದಾಯಿಕ ಮೀನುಗಾರರಿಗೆ ಬೇರೆ ಕೌಶಲ ಕಲಿಸಿಕೊಡುವ, ಅವರನ್ನು ಕಡಲ ತಡಿಯಿಂದ ಒಕ್ಕಲೆಬ್ಬಿಸುವ ವ್ಯವಸ್ಥೆ ಶುರು ಆದ ಬಳಿಕ ,ನಿಧಾನಕ್ಕೆ ಈ ಆಟ ವೇಗ ಪಡೆದುಕೊಂಡಿದೆ. 343 ಕಿಮೀ ಉದ್ದದ ಕರಾವಳಿಯಲ್ಲಿ ನಿಜ ಹೇಳಬೇಕೆಂದರೆ ಈಗ 60-65% ಸಮುದ್ರ ತೀರ ಇಲ್ಲಿನ ನಿವಾಸಿಗಳ ಕೈಯಿಂದ ಇಂಚಿಂಚಾಗಿ ಇಂತಹ ಯೋಜನೆಗಳಿಗೆ, ಪ್ರವಾಸೋದ್ಯಮಕ್ಕೆ, ಕಡಲ ಕೊರೆತಕ್ಕೆ ಕಲ್ಲುಗೋಡೆ ಇತ್ಯಾದಿಗಳಿಗೆ ಪರಾಭಾರೆ ಆಗಿ ಆಗಿದೆ. 

ಈ ರೀತಿ ಸಮುದ್ರಕ್ಕೇ ಬೇಲಿ ಹಾಕಿದ ಬಳಿಕ, ಜನರಿಗೆ ಸಮುದ್ರ ಇಲ್ಲ ಎಂದು ಬೇಸರ ಆಗಬಾರದಲ್ಲ! ಹಾಗಾಗಿ ಈಗಾಗಲೇ ಇರುವ ಎರಡು ಬ್ಲೂ ಫ್ಲ್ಯಾಗ್ ಬೀಚ್ ಗಳಿಗೆ ಇನ್ನು ಹನ್ನೊಂದು ಬ್ಲೂ ಫ್ಲಾಗ್ ಬೀಚ್‌ಗಳನ್ನು ಸರ್ಕಾರ ಕಷ್ಟ ಪಟ್ಟು ನಿರ್ಮಿಸಿ ಕೊಡಲಿದೆ. ಅಲ್ಲಿ ಯಾರೋ ಖಾಸಗಿಯವರು PPP ಎಂದು ಹೇಳಿ, ಸಮುದ್ರ ಪ್ರವೇಶಕ್ಕೆ ಫೀಸು ವಸೂಲಿ ಮಾಡುವ ಗುತ್ತಿಗೆ ಹಿಡಿಯಲಿದ್ದಾರೆ. ನಾವು-ನೀವು, ಸಮುದ್ರಕ್ಕೆ  ಹಾಕಲಾಗುತ್ತಿರುವ ಉದ್ದಾನುದ್ದ ಬೇಲಿಯ ನಡುವೆ ತೆರೆದಿರುವ ಆ ಬ್ಲೂ ಫ್ಲ್ಯಾಗ್ ಬಾಗಿಲಿನ ಮೂಲಕ ಮಾತ್ರ ಗಂಟೆಗಿಷ್ಟು ಎಂದು ಸುಂಕ ತೆತ್ತು ಒಳಹೋಗಿ, ಸಮುದ್ರವನ್ನು ನೋಡಿ, ಅದು ಅಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಆನಂದಿಸಿ, ಮೂತ್ರ ಬಂದರೆ ಅವರು ಕಟ್ಟಿರುವ ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಿ, ಆಹಾ ಎಷ್ಟ್ ಕ್ಲೀನಾಗಿಟ್ಟುಕೊಂಡಿದ್ದಾರೆ ಎಂದು ಫಿನಾಯ್ಲ್ ಪರಿಮಳವನ್ನು ಆಘ್ರಾಣಿಸಿ ಬಂದರೆ ನಿಮಗೂ ನಿಮ್ಮ ಸಮುದ್ರಕ್ಕೂ ಇರುವ ಸಂಬಂಧ ತೀರಿತು.

ಈ ಪ್ರವೇಶಾವಕಾಶ ಇರುವ ಸಮುದ್ರ ತೀರ ಅಂತಾರಾಷ್ಟ್ರೀಯ ಸ್ಟಾಂಡರ್ಡಿನಲ್ಲಿ ಇಂಪ್ರೂವ್ ಆಗುತ್ತಿದೆ, ಪ್ರವಾಸಿ ಸೌಕರ್ಯಗಳಿವೆ, ಶುಚಿಯಾಗಿದೆ, ಸುರಕ್ಷತೆ ಇದೆ ಎಂಬಿತ್ಯಾದಿ ಪರಿಸರಕ್ಕೆ ಸಂಬಂಧಿಸಿದ 33 ಮಾನದಂಡಗಳ ಕ್ರೈಟೀರಿಯಾಗಳನ್ನೆಲ್ಲ ನೋಡಿ, ಡೆನ್ಮಾರ್ಕಿನಲ್ಲಿರುವ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಡ್ಯುಕೇಷನ್ (FEE) ಸಂಸ್ಥೆಯು ಕನ್ನಡದ "ಫೀ" ವಸೂಲಿ ಮಾಡಿಕೊಂಡು “ಇದು ಬ್ಲೂಫ್ಲ್ಯಾಗ್ ಬೀಚ್” ಎಂದು ಸರ್ಟಿಫಿಕೇಟು ಕೊಡುತ್ತದೆ; ಅವರ ಬ್ರ್ಯಾಂಡ್ ಫ್ಲ್ಯಾಗ್ ಹಾರಿಸಲು ಅವಕಾಶ ಕೊಡುತ್ತದೆ, ಕಾಲ ಕಾಲಕ್ಕೆ ಎಲ್ಲ ಸಮರ್ಪಕವಾಗಿದೆ ಎಂದು ಆಡಿಟ್ ಮಾಡಿ, ತನ್ನ ಪಾಲಿನ ದುಡ್ಡು ತಗೊಂಡು ಹೋಗ್ತದೆ.

ಕರಾವಳಿಯ ಜನರಲ್ಲಿ ನನ್ನ ಪ್ರಾರ್ಥನೆ ಇಷ್ಟೇ. ಈ ರೀತಿಯ ಯೋಜನೆಗಳನ್ನು ಸರ್ಕಾರ ಇಲ್ಲಿನ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಅಲ್ಲೊಂದು ಇಲ್ಲೊಂದು ಚುಕ್ಕೆ ಹಾಕಿ ಜನರನ್ನು ಖುಷಿ ಪಡಿಸುವ ಬದಲು ಇಡೀ ರಂಗೋಲಿ ಚಿತ್ರ ತೋರಿಸಿ, ಅಂತಿಮವಾಗಿ ಈ ರಂಗೋಲಿ ಹೀಗೆ ಕಾಣಲಿದೆ ಎಂದು ಹೇಳಬೇಕು. ಈಗಾಗಲೇ ಕರಾವಳಿ ಪರಿಸರ ಮಲಿನವಾಗಿದೆ. ಪ್ರವಾಸೋದ್ಯಮ ಇಲ್ಲಿಗೆ ಹೇಳಿಸಿದ ವಾಣಿಜ್ಯೋದ್ಯಮ ಹೌದು. ಆದರೆ, ಎಷ್ಟು? ಏನು? ಎಂಬುದೆಲ್ಲ ಚಿತ್ರ ಕೊಡದೇ ಡೇವಲಪ್‌ಮೇಂಟ್ ನಡೆಸಿದರೆ ಕಡೆಗೆ ಅನುಭವಿಸಬೇಕಾದವರು ಇಲ್ಲಿನ ಜನರೇ ಹೊರತು ಬೆಂಗಳೂರಿನಲ್ಲಿ ಕುಳಿತು ಯೋಜನೆ ಮಾಡುವವರಲ್ಲ. ಈ ರೀತಿಯ ಅಭಿವೃದ್ಧಿಗೆ ಕಾಂಗ್ರೆಸ್ಸು-ಬಿಜೆಪಿ ಅಂತಿಲ್ಲ- ಎಲ್ಲರೂ ಒಂದೇ; ಎಲ್ಲರೂ “ಆನಿ ಪರ.” ನಮ್ಮ ತಲೆಯ ಮೇಲೆ ನಮ್ಮ ಕೈ ಎಂಬುದನ್ನು ಕರಾವಳಿ ಮರೆಯಬಾರದು. 

ಇನ್ನು 30 ವರ್ಷಗಳಲ್ಲಿ ಇಲ್ಲಿನ ಚಿತ್ರಣ ಏನಾಗಲಿದೆ ಎಂಬ ಸ್ಪಷ್ಟ ಕಲ್ಪನೆ ನಮಗೆ ಇಲ್ಲದಿದ್ದರೆ, ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ಕರಾವಳಿಯನ್ನು ಕೊಟ್ಟುಹೋಗುವ ಅವಕಾಶ ನಮಗೆ ಇರುವುದಿಲ್ಲ. ಎಚ್ಚರ. ಎಚ್ಚರ. ಎಚ್ಚರ.

(ಬರಹ - ರಾಜರಾಮ್ ತಲ್ಲೂರು, ಹಿರಿಯ ಪತ್ರಕರ್ತರು)

Senior journalist Rajaram Talluru raises concern over the Blue Flag beach project on Karnataka’s coast, questioning paid access, privatization, and decisions taken without consulting local communities. He warns that unchecked tourism-driven “development” could alienate coastal residents from their own shores and irreversibly damage the fragile coastal ecosystem.