ಸ.ರಘುನಾಥ್ ಅಂಕಣ: ಬಂದ ಬಂದ ಬೊಮ್ಮನಹಳ್ಳಿಯ ಕಿಂದರಿ ಜೋಗಿ

23-03-21 03:15 pm       By Sa. Raghunatha   ನ್ಯೂಸ್ View

ಸುನಂದ ಹಾಸಿಗೆಯ ಮೇಲೆ ಕುಳಿತು ಮಾವನ ಕಪಾಟಿನಿಂದ ತಂದ ಕೊಂಡಪಲ್ಲಿ ಕೋಟೇಶ್ವರಮ್ಮನವರ ಆತ್ಮಕಥೆ 'ಒಂಟಿ ಸೇತುವೆ'ಯನ್ನು ಓದುತ್ತಿದ್ದಳು.

ಸುನಂದ ಹಾಸಿಗೆಯ ಮೇಲೆ ಕುಳಿತು ಮಾವನ ಕಪಾಟಿನಿಂದ ತಂದ ಕೊಂಡಪಲ್ಲಿ ಕೋಟೇಶ್ವರಮ್ಮನವರ ಆತ್ಮಕಥೆ 'ಒಂಟಿ ಸೇತುವೆ'ಯನ್ನು ಓದುತ್ತಿದ್ದಳು. ಆಕೆ ತವರಿನ ದಿನಗಳ ಬಗ್ಗೆ ನಿರೂಪಿಸಿದ ಘಟ್ಟದಲ್ಲಿದ್ದಾಗ ನರಸಿಂಗರಾಯ ಬಂದು, ಮಾತನಾಡಿಸದೆ ಅವಳನ್ನು ನೋಡುತ್ತ ಕುಳಿತ. ಸ್ವಲ್ಪ ಸಮಯ ಹಾಗೆಯೆ ಇದ್ದು, ಮೆಲ್ಲಗೆ ಅವಳ ತೊಡೆಯ ಮೇಲೆ ತಲೆಯಿಟ್ಟ. ಸುನಂದ ಅವನ ತಲೆಯಲ್ಲಿ ಬೆರಳಾಡಿಸುತ್ತ ಓದು ಮುಂದುವರೆಸಿದಳು.

ಆ ಅಧ್ಯಾಯ ಮುಗಿಸಿ ಪುಸ್ತಕವನ್ನು ಪಕ್ಕಕಿಟ್ಟಾಗ, ತುಂಬಾ ಒಳ್ಳೆಯ ಪುಸ್ತಕ. ನೋವು, ಅವಮಾನಗಳನ್ನು ನುಂಗುತ್ತ ಸಂಘಟನೆ, ಹೋರಾಟಗಳನ್ನು ನಡೆಸಿದ ಕಠಿಣ ದುರಂತದ ಆತ್ಮಕಥೆ ಅದು. ನೀನು ಓದುವುದು ಒಳ್ಳೆಯದು. ಅನುವಾದವೂ ಉತ್ತಮವಾಗಿದೆ ಎಂದ. ಅದಕ್ಕೆ, ಹೌದು. ಪ್ರಾರಂಭದಲ್ಲಿಯೇ ಅದು ತಿಳಿಯುತ್ತದೆ ಅಂದಳು. ಅನುವಾದಕ ಯಾರಂತಿ? ಎಂಟರಿಂದ ಹತ್ತರವರೆಗೆ ನನ್ನ ಪಕ್ಕದಲ್ಲೆ ಕುಳಿತು ಓದಿದ ಗೆಳೆಯ. ಕನ್ನಡದಲ್ಲಿಯೂ ಬರೆದು ಒಳ್ಳೆಯ ಹೆಸರು ಮಾಡಿದ್ದಾನೆ.

ಕಾಲ ಕೂಡಿಬಂದರೆ ಒಂದು ದಿನ ಇಲ್ಲಿಗೂ ಬಂದಾನು ಎಂದು ಅವನ ಹಲವು ಕೃತಿಗಳ ಹೆಸರು ಹೇಳಿದ. ಕರೆಸಬೇಕು ಅಂದವಳು, ಏನಿದು ಇವತ್ತು ಬಹಳ ದಿನಗಳ ನಂತರ ತೊಡೆಯ ಮೇಲೆ ತಲೆಯಿಟ್ಟದ್ದು ಅಂದಳು. ಶಕ್ತಿಗಾಗಿ ಶಕ್ತಿಯ ಮಡಿಲಿಲ್ಲಿ ತಲೆ ಇರಿಸಿದೆ ಅಂದ. ಸುನಂದ ಅವನ ಹಣೆಗೆ ಮುತ್ತುಕೊಟ್ಟಳು. ಮಲಗೋಣ ಅಂದಳು. ಅದಕ್ಕೂ ಮುಂಚೆ ಮನಸ್ಸಿಗೆ ಬಂದ ಒಂದು ಮಾತಿದೆ ಅಂದ. ಅವಳ ಬಲಗೈ ಬೆರಳುಗಳು ಅವನ ನೀಳ ಕೂದಲಿನಲ್ಲಿ ಆಡುತ್ತಿದ್ದವು.

ಮಕ್ಕಳು, ಹಿರಿಯರ ಕಣ್ಣ ಮುಂದೆ ಒಂದು ರಮ್ಯ ಸುಂದರ ಲೋಕವನ್ನು ತೋರಿದುವುದಕ್ಕೆ ಕಾಲ ಪಕ್ವವಾಗಿದೆ ಅನ್ನಿಸುತ್ತಿದೆ. ಹಾಗೆಯೇ ದೊಡ್ಡದೊಂದು ಸಂದೇಶವನ್ನು ಬಾಯಲ್ಲಿ ಹೇಳದೆ ದೃಶ್ಯದ ಮೂಲಕ ಕೊಡುವುದು ಸೂಕ್ತ ಅನ್ನಿಸುತ್ತಿದೆ ಎಂದ. ಹೇಗೆಂಬ ಪ್ರಶ್ನೆಯನ್ನು ಮೂಖಭಾವದಿಂದಲೆ ಅವನ ಮನಸ್ಸಿಗೆ ತಂದಳು. ಮೊದಲು ಬೊಮ್ಮನಹಳ್ಳಿಯ ಕಿಂದರಿ ಜೋಗಿ ಕವಿತೆಯನ್ನು ರಂಗಕ್ಕೆ ತರುವುದು. ಅದಾದ ಕೆಲವು ದಿನಗಳಿಗೆ ಗೋವಿನ ಹಾಡನ್ನು ತೆಗೆದುಕೊಳ್ಳುವುದು. ಏನಂತಿ? ಅಂದ. ಈಗಿರುವ ಕೆಲಸಗಳ ಒತ್ತಡದಲ್ಲಿ ಇದು ಬೇಕೆ? ಅಂದಳು. ಅನಿವಾರ್ಯ. ಮನಸ್ಸುಗಳು ಆಲೋಚನೆಗಳಿಗೆ ತೆರೆದುಕೊಳ್ಳುತ್ತಿವೆ. ಅಲ್ಲಿ ಖಾಲಿತನ ಕಾಣಬಾರದು.

ಇಂಥ ಏನಾದರೂ ಇರಬೇಕು. ಆಗಲೇ ಗಟ್ಟಿತನಕ್ಕೆ ಅವಕಾಶ ಎಂದ. ಸುನಂದ 'ಪ್ರಭುಗಳ ಅಪ್ಪಣೆ' ಎಂದು ತೊಡೆಯ ಮೇಲಿದ್ದ ಅವನ ತಲೆಯನ್ನು ಎತ್ತಿ ದಿಂಬಿನ ಮೇಲೆ ಇರಿಸಿದಳು. ನರಸಿಂಗರಾಯನ ಪ್ರಸ್ತಾಪನೆಗೆ ಏತ ತುಳಿದು ತುಳಿದು ಹಿರಿಯರು ಓಪ್ಪಿಗೆ ಕೊಟ್ಟರು. ದುಗ್ಗಪ್ಪ ಗೌಡ, ಉಳಿದ ಹಿರಿಯರು ಊರಿನ ಸಮಸ್ತರು. ಗಜೇಂದ್ರರಾಜು ಮೇಷ್ಟ್ರು ಸಿದ್ಧೋಜೈಗಳು, ಮುನೆಕ್ಕ, ಸಾದಮ್ಮ, ಅಮ್ಮಯ್ಯ, ಈರಮ್ಮ ಮುಂತಾದವರು ತಾಯಂದಿರು.

ಶಾಲಾ ಮಕ್ಕಳಲ್ಲಿ ಹಿರಿಯರು ನಾಯಿ, ಬೆಕ್ಕು, ಇಲಿಗಳು, ಪುಟ್ಟಮಕ್ಕಳು ಕಿಂದರಿ ಜೋಗಿಯ ಹಿಂದೆ ಸಾಗುವ ಮಕ್ಕಳು. ಕುಂಟನ ಪಾತ್ರ ಲಚ್ಮಕ್ಕಳದು. ಕೆಂಪರಾಜ ಕಿಂದರಿ ಜೋಗಿ. ರಂಗ, ಪಿಲ್ಲಣ್ಣ, ಬೋಡೆಪ್ಪ, ಮುನಿಕೃಷ್ಣಪ್ಪ, ಕುಳ್ಳಪ್ಪ, ಹಾಗು ಕೆಲವರು ಹೆಣ್ಣು ಮಕ್ಕಳು ಜೋಗಿಯ ಲೋಕದ ಮರಗಿಡಬಳ್ಳಿಗಳು, ಅಪ್ಪಯ್ಯ ಭಟ್ಟಾಶಾಸ್ತ್ರಿ ವೇಷ, ಕಿಂದರಿ ಜೋಗಿಗೆ, ಇಲಿಗಳಿಗೆ, ಗಿಡಮರಗಳ ಪಾತ್ರಧಾರಿಗಳಿಗಷ್ಟೇ ಮೇಕಪ್ಪು. ಉಳಿದವರಿಗೆ ಅವರವರ ದಿನನಿತ್ಯದ ಪೋಷಾಕೇ ಸಾಕು ಎಂದಾತಿತು. ನರಸಿಂಗನು ನಮ್ಮನ ಏನೇನೋ ಮಾಡಿಬಿಡಂಗವನೆ ಎಂದ ಬೀರಣ್ಣ. ಸುನಂದ ಹಾಗೂ ನರಸಿಂಗರಾಯ ಗಾಯಕರು.

ಸಂಗೀತಕ್ಕೆ ಮೂಟಪ್ಪನ ತಬಲ, ಅಪ್ಪಯ್ಯನ ಹಾರ್ಮೋನಿಯಂ ಸಾಕು. ರಂಗಕ್ಕೆ ಬೇಕಾದ ಪರದೆ ಸಿದ್ದಪಡಿಸಲು ಟೈಲರ್ ಕಿಟ್ಟನ್ನ ಮತ್ತು ಮಕ್ಕಳು ಸಾಕು ದೊಡ್ಡದಾಗಿ ಖರ್ಚು ಬರದು ಎಂದ ನರಸಿಂಗರಾಯ. ಈ ತೀರ್ಮಾನವಾದ ಎರಡನೆಯ ದಿನ ಏಳನೇ ತರಗತಿಯ ರಂಗಲಕ್ಷ್ಮಿ ಮನೆಯಲ್ಲಿದ್ದ ದೊಡ್ಡ ತೆಂಗಿನ ಕಾಯಿ ಒಡೆದು, ಚಿಪ್ಪು ಮಾಡಿ, ಅಮ್ಮನಿಂದ ಮೊಟುಕಿಸಿಕೊಂಡು, ಮುನಿನಾರಾಯಣಿ ತಮಟೆಗಾಗಿ ಕತ್ತರಿಸಿದ್ದ ಚರ್ಮದ ತುಂಡನ್ನು ಪಡೆದು, ಅವನ ಮಗನ ನೆರವಿನೊಂದಿಗೆ ತೆಂಗಿನ ಚಿಪ್ಪಿಗೆ ತೂತು ಕೊರೆದು ಕಿಂದರಿ ಮಾಡಿ ತಂದಳು.

ನರಸಿಂಗರಾಯ ಅದನ್ನು ಮರೆತಿದ್ದ. ಕಿಂದರಿಯನ್ನು ನೋಡಿ ಆನಂದದಿಂದ ಅವಳನ್ನು ಎತ್ತಿ ಗಿರಗಿಟ್ಲೆ ಆಡಿಸಿದ. ಸುನಂದ ಅದು ಶ್ರುತಿಗೆ ಕೂರುವಂತೆ ಮಾಡಿ, ಬಣ್ಣ ಹಚ್ಚಿದರೆ ಚೆಂದ ಅಂದಳು. ನರಸಿಂಗರಾಯ ಬೇಡ, ಹಾಗೆಯೇ ಇದ್ದರೆ ರಂಗಲಕ್ಷ್ಮಿಯಂತೆ ಸಹಜ ಸುಂದರವಾಗಿರುತ್ತದೆ ಅಂದ. ತಿಂಗಳಲ್ಲಿ ಬೊಮ್ಮನಹಳ್ಳಿಯ ಕಿಂದರಿ ಜೋಗಿ ರಂಗವೇರಿದ. ಪ್ರಾರಂಭದಲ್ಲಿ ಗಜೇಂದ್ರರಾಜು ಮೇಷ್ಟ್ರು ಕುವೆಂಪು ಮತ್ತು ಅವರ ಕೃತಿಗಳನ್ನು ಪರಿಚಯಿಸಿ, ಅವರೇ ಬರೆದ ಪೋಸ್ಟರ್ ಆಕಾರದ ಕುವಂಪ ಭಾವಚಿತ್ರವನ್ನು ಪ್ರದರ್ಶಿಸಿದರು. ಪಠ್ಯ ಪುಸ್ತಕದ ಮೂಲಕ ಶಾಲಾ ಮಕ್ಕಳಿಗೆ ಪರಿಚಿತರಾಗಿದ್ದ ಕುವೆಂಪು ಊರಿಗೇ ಪರಿಚಿತರಾದರು.