ಪ್ರಚಾರ ಮುಗಿಯುತ್ತಲೇ ಪಾಸಿಟಿವ್ ; ಚುನಾವಣೆ ನೆಪದಲ್ಲಿ ಹಳ್ಳಿ ಹಳ್ಳಿಗೆ ಕೊರೊನಾ ಬಿತ್ತಿದ ರಾಜಕಾರಣಿಗಳು ?!

17-04-21 04:58 pm       Headline Karnataka News Network   ನ್ಯೂಸ್ View

ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಿದ್ದ ಸೋಂಕನ್ನು ರಾಜಕಾರಣಿಗಳು ಸೇರಿ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗೆ ಹರಡಿಸಿದ್ದಾರೋ ಅನ್ನುವ ಆತಂಕ ಶುರುವಾಗಿದೆ.

ಬೆಂಗಳೂರು, ಎ.17: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ದಾಂಗುಡಿಯಿಟ್ಟಿದ್ದರೆ, ಕಳೆದ ಒಂದು ವಾರದಲ್ಲಿ ಉಪ ಚುನಾವಣೆಯ ಕಾವು ಜೋರಾಗಿತ್ತು. ಅತ್ತ ಚುನಾವಣೆ ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ಸ್ವತಃ ಪರೀಕ್ಷೆ ಮಾಡಿಕೊಂಡ ಬಹುತೇಕ ರಾಜಕಾರಣಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಿದ್ದ ಸೋಂಕನ್ನು ರಾಜಕಾರಣಿಗಳು ಸೇರಿ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗೆ ಹರಡಿಸಿದ್ದಾರೋ ಅನ್ನುವ ಆತಂಕ ಶುರುವಾಗಿದೆ.

ಕೋವಿಡ್ ಮಾರ್ಗಸೂಚಿ, ಮಾಸ್ಕ್, ಸಾಮಾಜಿಕ ಅಂತರ ಹೀಗೆ ಹಲವು ಸೂಚನೆಗಳನ್ನು ಸರಕಾರದಿಂದ ನೀಡಲಾಗಿದ್ದರೂ, ಇವ್ಯಾವುದನ್ನೂ ಚುನಾವಣೆ ಪ್ರಚಾರದ ವೇಳೆ ಯಾವುದೇ ಪಕ್ಷಗಳ ನಾಯಕರು ಪಾಲನೆ ಮಾಡಿರಲಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರೂ ಪಕ್ಷಗಳ ನಾಯಕರಲ್ಲಿ ಅನೇಕರಿಗೆ ಪ್ರಚಾರ ಕಾರ್ಯ ಮುಗಿಸಿ ಮರಳುತ್ತಿದ್ದಂತೆ ಸೋಂಕು ದೃಢಪಟ್ಟಿದೆ. ತಮಗೆ ಸೋಂಕು ದೃಢಪಡುತ್ತಿದ್ದಂತೆ ತನ್ನ ಜೊತೆಗೆ ಸಂಪರ್ಕದಲ್ಲಿದ್ದವರೆಲ್ಲ ಪರೀಕ್ಷೆಗೆ ಒಳಗಾಗುವಂತೆ ಉಚಿತ ಸಲಹೆಯನ್ನೂ ಇವರು ಕೊಟ್ಟಿದ್ದಾರೆ.

ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಡಿಸಿಎಂ ಗೋವಿಂದ ಕಾರಜೋಳ, ಸವದತ್ತಿ ಶಾಸಕ ಆನಂದ ಮಾಮನಿ, ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್, ಸುರಪುರ ಶಾಸಕ ರಾಜು ಗೌಡ, ಬೀದರ್ ಶಾಸಕ ಈಶ್ವರ್ ಖಂಡ್ರೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೀಗೆ ಮೊದಲ ದಿನವೇ ಸೋಂಕಿತರಾದ ಪ್ರಮುಖ ರಾಜಕಾರಣಿಗಳ ಪಟ್ಟಿಯೇ ದೊಡ್ಡದಿದೆ. ಇಷ್ಟಾದ ಮೇಲೆ ಇವರ ಜೊತೆಗಿದ್ದವರಿಗೆ ಸೋಂಕು ಇದ್ದಿರಲಿಕ್ಕಿಲ್ಲವೇ ?

ಆರೋಗ್ಯ ಇಲಾಖೆಯ ನಿಯಮದ ಪ್ರಕಾರ, ಸೋಂಕು ದೃಢಪಟ್ಟ ಕೂಡಲೇ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡಬೇಕು. ರಾಜಕಾರಣಿಗಳು ಕಳೆದ ಎರಡು- ಮೂರು ದಿನಗಳಲ್ಲಿ ಓಡಾಡಿದ ಪ್ರದೇಶಗಳು, ಭೇಟಿ ಮಾಡಿದ ಜನರನ್ನು ಪತ್ತೆ ಮಾಡಲು ಸಾಧ್ಯವೇ ? ಸಾಮಾನ್ಯ ಜನರಿಂದ ಹಿಡಿದು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಸಾಕಷ್ಟು ಮಂದಿ ಅಧಿಕಾರಿ ವರ್ಗ, ಪೊಲೀಸರು, ಆಯಾ ಭಾಗದ ರಾಜಕಾರಣಿಗಳೆಲ್ಲ ಪ್ರಾಥಮಿಕ ಸಂಪರ್ಕಿತರಾಗಿದ್ದು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಿಎಂ ಜೊತೆಗೆ ಪೊಲೀಸ್ ಅಧಿಕಾರಿಗಳು, ಆಯಾ ಭಾಗದ ಶಾಸಕರು, ಪ್ರಮುಖರು ಜೊತೆ ಜೊತೆಯಾಗಿ ಇರುವುದರಿಂದ ಅವರೆಲ್ಲರಿಗೂ ಈಗ ಸೋಂಕಿನ ಭೀತಿ ಆವರಿಸಿದೆ.

ಅಲ್ಲದೆ, ಕಾಂಗ್ರೆಸ್, ಬಿಜೆಪಿ ಪ್ರಮುಖರೆಲ್ಲ ಸೇರಿ ಬೆಳಗಾವಿ ಮತ್ತು ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳ ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಆಯಾ ಭಾಗದಲ್ಲಿ ರಾಜಕೀಯ ರ್ಯಾಲಿ ನಡೆಸಿದ ವೇಳೆ ಯಾವುದೇ ಕಡೆಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಡ್ಡಾಯ ಮಾಸ್ಕ್ ಧರಿಸಬೇಕೆಂಬ ನಿಯಮವನ್ನೂ ಪಾಲನೆ ಮಾಡಿಲ್ಲ. ಇದೇ ಕಾರಣಕ್ಕೋ ಏನೋ ಪ್ರಚಾರ ಕಾರ್ಯ ಮುಗಿದ ಕೂಡಲೇ ಪ್ರಮುಖ ರಾಜಕಾರಣಿಗಳು ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಇವರೆಲ್ಲ ಸೇರಿ ಬೆಂಗಳೂರಿನ ಮಾರಿಯನ್ನು ಹಳ್ಳಿ ಹಳ್ಳಿಗೆ ಹರಡಿದಂತಾಗಿಲ್ಲವೇ ಎಂಬ ಪ್ರಶ್ನೆಗೆ ಇವರು ಉತ್ತರಿಸಬಲ್ಲರೇ ?

ಪ್ರಧಾನಿ ಮೋದಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು. ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಹಾಗೆಂದು, ಈ ಸೋಂಕನ್ನು ಹಳ್ಳಿಗಳ ಕಡೆಗೆ ಸೋಕಲು ಬಿಡದಿರಿ ಎಂದು ಸೂಚನೆಗಳನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಪಂಚ ರಾಜ್ಯಗಳ ಚುನಾವಣೆ ನೆಪದಲ್ಲಿ ಮೋದಿಯಿಂದ ಹಿಡಿದು ಎಲ್ಲ ರಾಷ್ಟ್ರೀಯ ನಾಯಕರು ಕೂಡ ಕೋವಿಡ್ ನಿಯಮ, ಜಾಗೃತಿಯನ್ನೇ ಗಾಳಿಗೆ ತೂರಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಅತಿ ಹೆಚ್ಚು ಸೋಂಕು ಕಂಡುಬರುತ್ತಿದ್ದರೆ, ಅದಕ್ಕೆ ಕಾರಣ ಚುನಾವಣೆ ಮತ್ತು ಅದರ ಪ್ರಚಾರ ಕಾರ್ಯದಲ್ಲಿ ಕೋವಿಡ್ ನೀತಿ ಅನುಸರಣೆ ಮಾಡದಿರುವುದು ಕೂಡ ಆಗಿದೆ. ಇದಕ್ಕೆ ನಿದರ್ಶನ ಎನ್ನುವಂತೆ, ಈಗಾಗ್ಲೇ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಮೂರು ಕಡೆ ಮಾತ್ರ ಚುನಾವಣೆ ಇದ್ದಿದ್ದು. ಆದರೆ, ಬೆಂಗಳೂರಿನಲ್ಲಿ ಬೀಡು ಬಿಟ್ಟಿರುತ್ತಿದ್ದ ರಾಜಕಾರಣಿಗಳ ದಂಡು ಮಾತ್ರ ಈ ಸಲದ ಕೋವಿಡ್ ಉತ್ತುಂಗದ ಕಾಲದಲ್ಲಿ ಪ್ರಚಾರ ಕಾರ್ಯದ ನೆಪದಲ್ಲಿ ಚುನಾವಣೆ ನಡೆಯೋ ಜಾಗದಲ್ಲೆಲ್ಲ ಸುತ್ತಾಡಿದ್ದರು. ಬಗಲಲ್ಲಿ ಕೊರೊನಾ ಕಟ್ಟಿಕೊಂಡಿದ್ದೇವೆಂಬ ಪರಿವೇ ಇಲ್ಲದೆ ಓಡಾಡಿದ್ದರು. ಈಗ ರಾಜಕಾರಣಿಗಳು ಟೆಸ್ಟ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿ ಸೋಂಕು ಅಂಟಿಸಿಕೊಂಡ ಸಾಮಾನ್ಯ ಜನರ ಪಾಲಿಗೆ ಯಾರಿದ್ದಾರೆ. ಯಾರೆಲ್ಲ ಸೋಂಕಿತರಿದ್ದಾರೆ ಎಂದು ಹುಡುಕಿಕೊಂಡು ಹೋಗಿ ಪರೀಕ್ಷೆ ಮಾಡಿಸುವ ಕಾಳಜಿ ನಮ್ಮ ಸರಕಾರಕ್ಕಿದೆಯೇ ? ಸಾಮಾನ್ಯ ಜನ ಸತ್ತರೆ ನಾಯಿ ಸತ್ತ ಹಾಗೆ ಎಂದುಕೊಳ್ಳುವ ರಾಜಕಾರಣಿಗಳು ಈ ಬಾರಿ ಕೊರೊನಾ ಸ್ಪ್ರೆಡರ್ ಆಗಿದ್ದಾರೆ ಎನ್ನುವುದಕ್ಕೆ ಯಾವ ಅಂಜಿಕೆಯೂ ಬೇಕಿಲ್ಲ.