ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ಯಕೃತ್, ಮೂತ್ರಪಿಂಡ, ಶ್ವಾಸಕೋಶ ವಿವಿಧ ಆಸ್ಪತ್ರೆಗಳಿಗೆ ರವಾನೆ 

16-09-26 08:49 pm       HK News Desk   ಕರಾವಳಿ

ಕುತ್ತಾರು ಕೊರಗಜ್ಜನ ಆದಿಕ್ಷೇತ್ರದ ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಯುವಕನ ಅಂಗಾಂಗಗಳನ್ನು ದಾನಗೈದಿದ್ದು, ಬೆಂಗಳೂರಿನ ಕಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಝೀರೋ ಟ್ರಾಫಿಕಲ್ಲಿ ಅಂಗಾಂಗಳನ್ನು ರವಾನಿಸಲಾಗಿದೆ. 

ಉಳ್ಳಾಲ, ಸೆ.16 ಕುತ್ತಾರು ಕೊರಗಜ್ಜನ ಆದಿಕ್ಷೇತ್ರದ ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಯುವಕನ ಅಂಗಾಂಗಗಳನ್ನು ದಾನಗೈದಿದ್ದು, ಬೆಂಗಳೂರಿನ ಕಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಝೀರೋ ಟ್ರಾಫಿಕಲ್ಲಿ ಅಂಗಾಂಗಳನ್ನು ರವಾನಿಸಲಾಗಿದೆ. 

ಕುತ್ತಾರಿನ ಆಯೆರೆಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21)ಮೆದುಳು ನಿಷ್ಕ್ರಿಯಗೊಂಡ ಯುವಕ. ವರ್ಷಿತ್ ಸೋಮವಾರ ರಾತ್ರಿ 7.30ರ ಹೊತ್ತಿಗೆ
ಕುತ್ತಾರಿನಿಂದ ತನ್ನ ಮನೆಯ ಕಡೆ ತೆರಳುತ್ತಿದ್ದಾಗ ಕೊರಗಜ್ಜನ ಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಶಾಪ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಧಾವಿಸುತ್ತಿದ್ದ ಸ್ಕೂಟರ್ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬೈಕಿನಿಂದ ರಸ್ತೆಗೆಸೆಯಲ್ಪಟ್ಟು ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ವರ್ಷಿತ್ ನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನ ವರ್ಷಿತ್ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ವರ್ಷಿತ್ ಪೋಷಕರು ಮಗನ ಅಂಗಾಗ ದಾನ‌ ನಡೆಸಿದ್ದಾರೆ. 

 

ಯೆನೆಪೋಯ ಆಸ್ಪತ್ರೆಯಲ್ಲಿ ಬುಧವಾರ ವರ್ಷಿತ್ ಅವರ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು. ಬೆಂಗಳೂರಿನ ನುರಿತ ವೈದ್ಯರ ತಂಡವು ಯಕೃತ್, ಮೂತ್ರಪಿಂಡ, ಶ್ವಾಸಕೋಶ, ಕಣ್ಣಿನ ಪೊರೆಯನ್ನ ತೆಗೆದಿದ್ದು ಅಗತ್ಯ ಇರುವ ಆಸ್ಪತ್ರೆಗಳಿಗೆ ಕಳಿಸಿಕೊಟ್ಟಿದೆ. ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮೂತ್ರ ಪಿಂಡ, ಉಡುಪಿ ಮಣಿಪಾಲ ಆಸ್ಪತ್ರೆಗೆ ಯಕೃತ್, ಬೆಂಗಳೂರು ಕಿಮ್ಸ್ ಆಸ್ಪತ್ರೆಗೆ ಶ್ವಾಸಕೋಶವನ್ನು ಝೀರೋ ಟ್ರಾಫಿಕ್ ಮೂಲಕ ರವಾನಿಸಲಾಯಿತು.

ಸಾಮೂಹಿಕ ಅಂತಿಮ ನಮನ 

ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ವರ್ಷಿತ್ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಕುಟುಂಬಸ್ಥರು, ಪೋಷಕರು, ಬಂಧು ಮಿತ್ರರು, ಡಿವೈಎಫ್ ಐ ಸಂಘಟನೆಯ ನಾಯಕರು, ವೈದ್ಯರು, ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರು ಪಾರ್ಥಿವ ಶರೀರದ ದರ್ಶನಗೈದು, ಅಂತಿಮ ನಮನ ಸಲ್ಲಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಡಿವೈಎಫ್ ಐ ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಮಾತನಾಡಿ ವರ್ಷಿತ್ ಪರೋಪಕಾರಿಯಾಗಿದ್ದು, ಡಿವೈಎಫ್ ಐ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಆತನ ಅಗಲಿಕೆಯ ದುಃಖದ ಮಧ್ಯೆಯೂ ಕುಟಂಬಸ್ಥರು ಅಂಗಾಂಗಗಳನ್ನ ದಾನ ಮಾಡುವ ಮೂಲಕ ನಮಗೆಲ್ಲರಿಗೂ ಪ್ರೇರಣಾದಾಯಕ ಮಹತ್ಕಾರ್ಯ ನಡೆಸಿದ್ದಾರೆ. ವರ್ಷಿತ್ ನನ್ನು ಬದುಕಿಸಲು ಸಾಧ್ಯವಾಗದಿದ್ದರೂ ಅವರ ಅಂಗಾಂಗಗಳಿಂದ ಅನೇಕರ ಜೀವ ಉಳಿಸಲು ಸಾಧ್ಯವಾಗಿದೆ. ಅವನ ಅಂಗಾಂಗವು ಇನ್ನೂ ಅನೇಕ ವರುಷ ಜಗತ್ತಿನಲ್ಲಿ ಬದುಕಿರುತ್ತದೆ ಎಂಬುದೇ ಸಮಾಧಾನಕರ ವಿಚಾರವಾಗಿದೆಯೆಂದರು.

ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಹಬೀಬ್ ರಹಿಮಾನ್ ಮಾತನಾಡಿ‌ ವರ್ಷಿತನ್ನು ಬದುಕಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಆತನ ಮೆದುಳೇ ನಿಷ್ಕ್ರಿಯಗೊಂಡಿತ್ತು. ಕುಟುಂಬಸ್ಥರಲ್ಲಿ ನಾವು ಅಂಗಾಂಗ ದಾನದ ಬಗ್ಗೆ ತಿಳಿಸಿದಾಗ ಅವರು ಅತೀವ ಸಹನೆ, ತಾಳ್ಮೆಯಿಂದ‌ ಒಪ್ಪಿಗೆ ನೀಡಿದ್ದಾರೆ. ಪ್ರಕ್ರಿಯೆ ಪ್ರಕಾರ ತಜ್ಞ ವೈದ್ಯರು ಪರೀಕ್ಷೆ ಮಾಡಿ ಒಂದು ಸಲ ಮೆದುಳು ನಿಷ್ಕ್ರಿಯವೆಂದು ಘೋಷಿಸುತ್ತಾರೆ. ಎರಡನೇ ಬಾರಿ ಮೆದುಳು ನಿಷ್ಕ್ರಿಯತೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅಂಗಾಂಗ ದಾನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ವರ್ಷಿತ್ ಅಂಗಾಂಗಗಳಿಂದ ಇತರರಿಗೆ ಮರುಜೀವ ದೊರಕಿದ್ದು ಈ ಮಹತ್ಕಾರ್ಯ ನಡೆಸಿರುವ ಆತನ ಕುಟುಂಬಸ್ಥರಿಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ ಎಂದರು.

ವರ್ಷಿತ್ ಅವಿವಾಹಿತನಾಗಿದ್ದು, ಫ್ಯಾಬ್ರಿಕೇಷನ್ ಕೆಲಸ ನಿರ್ವಹಿಸುತ್ತಿದ್ದನಲ್ಲದೆ, ಡಿವೈಎಫ್ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ವರ್ಷಿತ್ ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಅಗಲಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.