ಆಟವಾಡುತ್ತಿದ್ದ ವೇಳೆ ದುರಂತ ; ಬಿಸಿ ಕೆಮಿಕಲ್ ಬಕೆಟ್‌ ಗೆ ಬಿದ್ದು 2 ವರ್ಷದ ಮಗು ಸಾವು

14-11-26 09:24 pm       HK News Desk   ಕರ್ನಾಟಕ

ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ಕೆಮಿಕಲ್ ತುಂಬಿಟ್ಟಿದ್ದ ಬಕೆಟ್‌ನೊಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬೆಂಗಳೂರು, ನ 14: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ಕೆಮಿಕಲ್ ತುಂಬಿಟ್ಟಿದ್ದ ಬಕೆಟ್‌ನೊಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ನಗರದ ಶ್ರೀರಾಮಪುರದ ಎಲ್‌. ಎನ್. ಪುರದಲ್ಲಿ ನಡೆದಿದ್ದ ಘಟನೆಯಲ್ಲಿ 1 ವರ್ಷ 9 ತಿಂಗಳ ಹೆಣ್ಣು ಮಗು ಸುಬ್ರಮಣಿ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದೆ.

ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ಸಂಭವಿಸಿತ್ತು. ಮನೆ ಪಕ್ಕದಲ್ಲೇ ಇರುವ ಕಾಪರ್ ಮೇಕರ್ ಫ್ಯಾಕ್ಟರಿಯಲ್ಲಿ ಮಗು ಸುಬ್ರಮಣಿ ತನ್ನ 8 ವರ್ಷದ ಅಕ್ಕನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಫ್ಯಾಕ್ಟರಿಯಲ್ಲಿ ಬಿಸಿ ಕೆಮಿಕಲ್ ತುಂಬಿದ ಬಕೆಟ್‌ಗೆ ಮಗು ಬಿದ್ದಿದೆ. ಪರಿಣಾಮ ಮಗುವಿನ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು.

ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಳೆದ ಕೆಲ ದಿನಗಳಿಂದಲೂ ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದ್ದರು. ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಬ್ರಮಣಿ ತಡರಾತ್ರಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆಯ ಕುರಿತು ಶ್ರೀರಾಮಪುರ ಪೊಲೀಸ್​ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (UDR) ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.