ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಜಾಮೀನು ರದ್ದು, ಶಿಕ್ಷೆ ಅಮಾನತು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ, ಮತ್ತೆ ಶಾಸಕ ಸ್ಥಾನ ಕಳಕೊಂಡು ಜೈಲಿಗೆ !

25-11-26 02:10 pm       HK News Staffer   ಕರ್ನಾಟಕ

ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ನೀಡಿದ್ದ ಷರತ್ತುಬದ್ಧ ಜಾಮೀನು ಮತ್ತು ಶಿಕ್ಷೆ ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಕೂಡಲೇ ಪೊಲೀಸರಿಗೆ ಶರಣಾಗುವಂತೆ ಆದೇಶ ಮಾಡಿದೆ. ‌ಇದರೊಂದಿಗೆ ಶಾಸಕ ಸ್ಥಾನದಿಂದಲೂ ವಿನಯ್ ಕುಲಕರ್ಣಿ ಅನರ್ಹರಾಗಿದ್ದಾರೆ.

ಬೆಂಗಳೂರು, ನ.25: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ನೀಡಿದ್ದ ಷರತ್ತುಬದ್ಧ ಜಾಮೀನು ಮತ್ತು ಶಿಕ್ಷೆ ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಕೂಡಲೇ ಪೊಲೀಸರಿಗೆ ಶರಣಾಗುವಂತೆ ಆದೇಶ ಮಾಡಿದೆ. ‌ಇದರೊಂದಿಗೆ ಶಾಸಕ ಸ್ಥಾನದಿಂದಲೂ ವಿನಯ್ ಕುಲಕರ್ಣಿ ಅನರ್ಹರಾಗಿದ್ದಾರೆ.

ಅರ್ಜಿಗಳ ವಿಚಾರಣೆ ಬಳಿಕ ನ್ಯಾ.ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶ ನೀಡಿದ್ದು, ಎರಡು ವಾರದಲ್ಲಿ ಶರಣಾಗಲು ಸೂಚನೆ ನೀಡಿದೆ. ಇದರಂತೆ, ಅಪರಾಧಿಗಳು ನೀಡಿರುವ ಜಾಮೀನು ಬಾಂಡ್‌ಗಳು ರದ್ದಾಗಿದ್ದು, ಅವರು 2 ವಾರಗಳ ಒಳಗಾಗಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಶರಣಾಗಬೇಕು.” ಎಂದು ಸುಪ್ರೀಂ ಆದೇಶಿಸಿದೆ. 

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಚಾರಣೆ ನಡೆಸಿ ಸೆಷನ್ಸ್ ಕೋರ್ಟ್‌ ಆದೇಶಕ್ಕೆ ತಡೆ ನೀಡಿದ್ದಲ್ಲದೆ, ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ಯೋಗೀಶ್ ಗೌಡ ಸೋದರ ಗುರುನಾಥ್ ಗೌಡ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ಹೀಗಾಗಿ ಹೈಕೋರ್ಟ್ ರಿಲೀಫ್ ನೀಡಿದ್ದರಿಂದ ಶಾಸಕ ಸ್ಥಾನ ಪಡೆದು ಬೀಗಿದ್ದ ವಿನಯ ಕುಲಕರ್ಣಿಗೆ ತೀವ್ರ ಹಿನ್ನಡೆಯಾಗಿದೆ. 

ಈ ನಡುವೆ, ವಿನಯ್ ಕುಲಕರ್ಣಿಗೆ ಸದ್ಯಕ್ಕೆ ಸುಪ್ರೀಂ ಕೋರ್ಟ್ ಬಾಗಿಲು ಬಂದ್ ಆಗಿದ್ದರೂ, ಹೈಕೋರ್ಟ್​​ನಲ್ಲಿ ಮೇಲ್ಮನವಿ ವಿಚಾರಣೆ ಬಾಕಿಯಿದೆ. ಹೀಗಾಗಿ ತುರ್ತು ವಿಚಾರಣೆಗೆ ಅಲ್ಲೇ ಮನವಿ ಮಾಡಬಹುದು. ಹೈಕೋರ್ಟ್ ಶೀಘ್ರ ವಿಚಾರಣೆ ನಡೆಸಿ ತೀರ್ಪು ನೀಡಿ, ಖುಲಾಸೆಗೊಳಿಸಿದರೆ ವಿನಯ್ ಕುಲಕರ್ಣಿಗೆ ರಿಲೀಫ್ ಸಿಗಲಿದೆ. ಒಂದೊಮ್ಮೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಎತ್ತಿ ಹಿಡಿದರೆ ಜೀವಾವಧಿ ಶಿಕ್ಷೆ ಅನುಭವಿಸಲೇಬೇಕಾದ ಅನಿವಾರ್ಯತೆ ಸಿಲುಕಲಿದ್ದಾರೆ.