21ರ ಕಾಲೇಜು ಕನ್ಯೆ ದೇಶದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ !

25-12-20 06:34 pm       Headline Karnataka News Network   ದೇಶ - ವಿದೇಶ

ದೇಶದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ ಆಗಿ ತಿರುವನಂತಪುರದ ಕಾಲೇಜು ಯುವತಿಯೊಬ್ಬಳು ಗೆಲುವು ಪಡೆದಿದ್ದಾರೆ.

ತಿರುವನಂತಪುರ, ಡಿ.25: ಎಲ್ಲವೂ ಅಂದ್ಕೊಂಡಂತೆ ಆದಲ್ಲಿ ದೇಶದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ ಆಗಿ ತಿರುವನಂತಪುರದ ಕಾಲೇಜು ಯುವತಿಯೊಬ್ಬಳು ಮೂಡಿಬರಲಿದ್ದಾಳೆ.

ಕೇರಳದ ತಿರುವನಂತಪುರದ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ ಡಿಎಫ್ ಬಹುಮತ ಪಡೆದಿದ್ದು, ಅಧಿಕಾರಕ್ಕೇರಲು ರೆಡಿಯಾಗಿದೆ. ಆದರೆ, ಮಹಾನಗರ ಪಾಲಿಕೆಯ ಗದ್ದುಗೆಯೇರಲು ಅತಿ ಕಿರಿಯ ವಯಸ್ಸಿನ 21 ವರ್ಷದ ಆರ್ಯಾ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಿದ್ದು, ಮೇಯರ್ ಸ್ಥಾನಕ್ಕೆ ಸಿಪಿಎಂ ಜಿಲ್ಲಾ ಘಟಕ ಶಿಫಾರಸು ಮಾಡಿದೆ.

ಆರ್ಯಾ ರಾಜೇಂದ್ರನ್ ಅಲ್ ಸೈಂಟ್ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದು, ಈ ಬಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮುದವನ್ ಮುಗಲ್ ಎಂಬ ಹೆಸರಿನ ವಾರ್ಡಿನಲ್ಲಿ ಆರ್ಯಾ ಸ್ಪರ್ಧಿಸಿ, ಗೆಲುವು ಪಡೆದಿದ್ದಾರೆ.

ಆರ್ಯಾ ಹೆಸರನ್ನು ಬಹುತೇಕ ಸಿಪಿಎಂ ರಾಜ್ಯ ಸಮಿತಿಯೂ ಅಂಗೀಕರಿಸಿದ್ದು, ಶನಿವಾರ ಈ ಬಗ್ಗೆ ಅಧಿಕೃವಾಗಿ ಪ್ರಕಟಿಸುವ ಸಾಧ್ಯತೆಯಿದೆ. ಆರ್ಯಾ ಮೇಯರ್ ಆಗಿ ಆಯ್ಕೆಯಾದರೆ ದೇಶದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.