ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲು ಓಡಿದ ಅಂಬಾರಿ ಹೊತ್ತ ಆನೆ ; ದೇವಿಯ ವಿಗ್ರಹವಿದ್ದ ಅಂಬಾರಿ ನೆಲಕ್ಕೆ ! ಬೆದರಿ ಓಡಿದ ಜನರು

21-10-26 10:31 pm       HK News Desk   ಕರ್ನಾಟಕ

ಶಿವಮೊಗ್ಗದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ನಡೆಯುತ್ತಿದ್ದಾಗ ಅಂಬಾರಿ ಹೊತ್ತಿದ್ದ ಆನೆ ಬೆದರಿ ಓಡಿದ ಪರಿಣಾಮ, ಅದರ ಬೆನ್ನ ಮೇಲಿದ್ದ ಬೆಳ್ಳಿಯ ಅಂಬಾರಿ ಕಳಚಿ ಕೆಳಗೆ ಬಿದ್ದ ಆತಂಕಕಾರಿ ಘಟನೆ ನಡೆದಿದೆ.

ಶಿವಮೊಗ್ಗ, ಅ.21: ಶಿವಮೊಗ್ಗದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ನಡೆಯುತ್ತಿದ್ದಾಗ ಅಂಬಾರಿ ಹೊತ್ತಿದ್ದ ಆನೆ ಬೆದರಿ ಓಡಿದ ಪರಿಣಾಮ, ಅದರ ಬೆನ್ನ ಮೇಲಿದ್ದ ಬೆಳ್ಳಿಯ ಅಂಬಾರಿ ಕಳಚಿ ಕೆಳಗೆ ಬಿದ್ದ ಆತಂಕಕಾರಿ ಘಟನೆ ನಡೆದಿದೆ. 

ಶಿವಮೊಗ್ಗದ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಶಾಸಕ ಚನ್ನಬಸಪ್ಪ ಶಿವಮೊಗ್ಗ ದಸರಾ ಅಂಬಾರಿಗೆ ಚಾಲನೆ ನೀಡಿದ್ದರು. ಮೆರವಣಿಗೆಯಲ್ಲಿ ಸ್ವಲ್ಪ ದೂರ ಸಾಗಿದ ಅಂಬಾರಿ ಹೊತ್ತ ಆನೆ ಸೋಮಣ್ಣ ಭಯಗೊಂಡಿದೆ. ಒಂದೆಡೆ ಬ್ಯಾಂಡ್ ವಾದ್ಯ, ಮತ್ತೊಂದೆಡೆ ಕಿಕ್ಕಿರಿದು ಸೇರಿದ ಜನರನ್ನು ನೋಡಿ ಆನೆ ಬೆದರಿ ದಿಕ್ಕಪಾಲಾಗಿ ಓಡಿದೆ. 

ಸತತವಾಗಿ ಅಂಬಾರಿ ಹೊರುತ್ತಿದ್ದ 'ಸಾಗರ್' ಆನೆಗೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ, ಕೊನೆಯ ಕ್ಷಣದಲ್ಲಿ ಸಕ್ರೆಬೈಲು ಬಿಡಾರದ 'ಸೋಮಣ್ಣ' ಆನೆಗೆ 650 ಕೆಜಿ ತೂಕದ ಬೆಳ್ಳಿ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿತ್ತು. ಮೊದಲ ಬಾರಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸೋಮಣ್ಣ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನೆರೆದಿದ್ದ ಅಪಾರ ಜನಸ್ತೋಮ ಹಾಗೂ ವಾದ್ಯಗಳ ಶಬ್ದಕ್ಕೆ ಬೆದರಿ ನಿಯಂತ್ರಣ ತಪ್ಪಿ ಓಡಿದ್ದಾನೆ. 

ಆನೆ ದಿಕ್ಕಾಪಾಲಾಗಿ ಓಡುವ ರಭಸಕ್ಕೆ ಅದರ ಬೆನ್ನ ಮೇಲಿದ್ದ ಬೆಳ್ಳಿ ಅಂಬಾರಿ ಹಾಗೂ ಅದರಲ್ಲಿದ್ದ ಚಾಮುಂಡೇಶ್ವರಿಯ ವಿಗ್ರಹ ಕೆಳಗೆ ಬಿದ್ದು ಹಾನಿಗೊಳಗಾಗಿದೆ. ಆನೆ ರಸ್ತೆಯಲ್ಲಿ ಓಡುವಾಗ ಸಾರ್ವಜನಿಕರು ಪ್ರಾಣ ಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಎರಡು ಕಾರುಗಳು ಹಾಗೂ ಮೂರು ಮೋಟಾರ್ ಸೈಕಲ್‌ಗಳು ಜಖಂಗೊಂಡಿವೆ.

ಆನೆ ಬೆದರುತ್ತಿದ್ದಂತೆ ಮೇಲಿದ್ದ ಮಾವುತ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರು ಆನೆಗೆ ಅರಿವಳಿಕೆ ನೀಡಿ ಹರಸಾಹಸಪಟ್ಟು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಸ್ತುತ ಆನೆ ಸೋಮಣ್ಣ ಸುರಕ್ಷಿತವಾಗಿದ್ದು, ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಅನಿರೀಕ್ಷಿತ ಅವಘಡದಿಂದಾಗಿ ಶಿವಮೊಗ್ಗದ ಜಂಬೂಸವಾರಿ ಮೆರವಣಿಗೆಯನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೂ ಕನಿಷ್ಠ 20 ರಿಂದ 30 ದಿನಗಳ ಕಾಲ ಕಡ್ಡಾಯ ತಾಲೀಮು ನೀಡಬೇಕು ಎಂದು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. 

ಶಿವಮೊಗ್ಗ ದಸರಾ ಅಂಬಾರಿ ನಾಲ್ಕನೇ ಬಾರಿ ಆನೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ.. 2019ರಲ್ಲಿ ಮೊದಲ ಬಾರಿಗೆ ಮೊಟಕಾಗಿತ್ತು. ಅಂಬಾರಿ ಹೊರಬೇಕಿದ್ದ ಸಾಗರ್ ಆನೆ ಅಸ್ವಸ್ಥಗೊಂಡಿತ್ತು. ಹಾಗಾಗಿ ಅಂಬಾರಿಯನ್ನು ಲಾರಿ ಮೇಲೆ ಮೆರವಣಿಗೆ ಮಾಡಲಾಗಿತ್ತು. ಇನ್ನು 2021ರಲ್ಲಿ ಕೋವಿಡ್ ಸೋಕಿನ ಕಾರಣ ಆನೆಗಳಿಗೆ ತಾಲೀಮು ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆನೆ ಅಂಬಾರಿ ಹೊತ್ತಿರಲಿಲ್ಲ. 2023ರ ವಿಜಯದಶಮಿ ಹಿಂದಿನ ದಿನ ಕುಮ್ಕಿ ಆನೆ ನೇತ್ರಾವತಿ ಮರಿ ಹಾಕಿದ ಕಾರಣ ಆನೆ ಅಂಬಾರಿ ಇರಲಿಲ್ಲ. ಇದೀಗ ಸೋಮಣ್ಣ ಆನೆ ಭಯಗೊಂಡು ಪರಿಣಾಮ ಅಂಬಾರಿ ಕಳಚಿ ಬಿದ್ದ ಘಟನೆ ನಡೆದಿದೆ.