ಒತ್ತೆಕೋಲದ ಮಧ್ಯೆ ಯಕ್ಷಗಾನ ; ಜಮದಗ್ನಿಯಾದ ಬಿಜೆಪಿ ನಾಯಕ ! ಯಕ್ಷಗಾನ ಅರ್ಧಕ್ಕೆ ಸ್ಥಗಿತ !

22-03-21 05:59 pm       Mangalore Correspondent   ನ್ಯೂಸ್ View

ಮಾವಿನಕಟ್ಟೆ ಎಂಬಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲೇ ನಿಲ್ಲಿಸಿ, ಸಂಘ ಪರಿವಾರದ ನಾಯಕರು ತಮ್ಮ ಪ್ರಚ್ಛನ್ನ ಕಾರುಬಾರು ತೋರಿಸಿದ್ದಾರೆ.

ಪುತ್ತೂರು, ಮಾ.22: ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಅಂತಾರಲ್ಲ. ಈ ಗಾದೆ ಮಾತುಗಳು ಕೆಲವೊಮ್ಮೆ ನಮ್ಮ ಸಂಘ ಪರಿವಾರದ ಲೀಡರುಗಳಿಗೆ ಸರಿಯಾಗೇ ಹೊಂದಿಕೆಯಾಗತ್ತೆ. ಯಕ್ಷಗಾನ ಗಂಡುಕಲೆ, ಕರಾವಳಿಗರ ಸಾಂಪ್ರದಾಯಿಕ ಕಲೆ. ಅದಕ್ಕೆ ಅವಿಚ್ಛಿನ್ನ ಪರಂಪರೆ ಇದೆಯೆಂದು ಹೇಳಿಕೊಂಡು ಬಂದವರೇ ಯಕ್ಷಗಾನ ಕಲೆಗೆ ಅಪಮಾನ ಮಾಡಿದ್ದಾರೆ. 

ಹೌದು... ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ಮಾವಿನಕಟ್ಟೆ ಎಂಬಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲೇ ನಿಲ್ಲಿಸಿ, ಸಂಘ ಪರಿವಾರದ ನಾಯಕರು ತಮ್ಮ ಪ್ರಚ್ಛನ್ನ ಕಾರುಬಾರು ತೋರಿಸಿದ್ದಾರೆ. ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂಬ ಗುರುತರ ಜವಾಬ್ದಾರಿ ಹೊತ್ತಿರುವ, ಸುಳ್ಯ ತಾಲೂಕಿನ ಮಟ್ಟಿಗೆ ಪರಮೋಚ್ಛ ನಾಯಕನಂತೆ ಪೋಸು ಕೊಡುತ್ತಿರುವ ಎ.ವಿ. ತೀರ್ಥರಾಮ ಎಂಬವರು ಈ ಘನಕಾರ್ಯ ಮಾಡಿದವರು ಎನ್ನುವ ಆಕ್ಷೇಪದ ಮಾತನ್ನು ಅಲ್ಲಿನ ಸ್ಥಳೀಯರು ಆಡುತ್ತಿದ್ದಾರೆ.

ಮಾವಿನಕಟ್ಟೆಯಲ್ಲಿ ಮಾ.19ರಂದು ರಾತ್ರಿ ಒತ್ತೆಕೋಲ ಇತ್ತು. ಪ್ರತಿ ಬಾರಿಯೂ ಒತ್ತೆಕೋಲ ನಡೆಯುವುದಕ್ಕಿಂತಲೂ ಮೊದಲು ರಾತ್ರಿ ಕಳೆಯಲು ಯಕ್ಷಗಾನವೋ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಈ ಬಾರಿ ಮಕ್ಕಳ ಯಕ್ಷಗಾನ ಆಯೋಜಿಸಲಾಗಿತ್ತು. ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಹಾಗೂ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ, ಪಂಜ ಇದರ ವಿದ್ಯಾರ್ಥಿಗಳಿಂದ ಭಾರ್ಗವ ರಾಮ ಎನ್ನುವ ಪ್ರಸಂಗದ ಯಕ್ಷಗಾನ ಏರ್ಪಡಿಸಲಾಗಿತ್ತು.

ರಾತ್ರಿ ಎಂಟು ಗಂಟೆಯಿಂದ ಯಕ್ಷಗಾನ ಎಂದಿದ್ದರೂ, ನಡುವೆ ನಿಲ್ಲಿಸಿ ಸಭಾ ಕಾರ್ಯಕ್ರಮ ನಡೆಸಲಾಗಿತ್ತು. ಒಂದು ಗಂಟೆ ಕಾಲ ಸಭೆಗೆಂದು ಯಕ್ಷಗಾನ ನಿಲ್ಲಿಸಿ, ಆನಂತರ ಮುಂದುವರಿಸಲಾಗಿತ್ತು. ಆದರೆ, 11 ಗಂಟೆ ವೇಳೆಗೆ ಯಕ್ಷಗಾನ ನಿಲ್ಲಿಸಲು ಸೂಚನೆ ಬಂದಿದೆ. ಆದರೆ, ಮಕ್ಕಳ ಯಕ್ಷಗಾನ ಅಲ್ವೇ ಅಂತ ತುಸು ಬಿಟ್ಟಿದ್ದಾರೆ. ಅಷ್ಟರಲ್ಲೇ ಜಮದಗ್ನಿಯಂತೆ ಸಿಟ್ಟುಗೊಂಡ ಒತ್ತೆಕೋಲ ಕಮಿಟಿಯ ಅಧ್ಯಕ್ಷನೂ ಆಗಿರುವ, ಬಿಜೆಪಿಯ ರಾಜ್ಯ ನಾಯಕ ಎ.ವಿ.ತೀರ್ಥರಾಮ, ಸ್ಟೇಜಿಗೆ ಬಂದು ಲೈಟ್ ಆಫ್ ಮಾಡಿದ್ದಾರೆ. ಮೈಕ್ ಕಿತ್ತೆಸೆದು ಸಾಕು ಯಕ್ಷಗಾನ ನಿಲ್ಲಿಸಿ ಎಂದು ಗಟ್ಟಿ ಸ್ವರದಲ್ಲಿ ಆವಾಜ್ ಹಾಕಿದ್ದಾರೆ. ಕಲಾವಿದರು ಮತ್ತು ಹಿಮ್ಮೇಳವೂ ಮಕ್ಕಳೇ ಆಗಿದ್ದರಿಂದ ಮರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲಿದ್ದ ಪ್ರೇಕ್ಷಕರು ಮತ್ತು ಇತರ ಸದಸ್ಯರ ಮೂಕ ಪ್ರೇಕ್ಷಕರಾಗುವಂತಾಗಿತ್ತು ಎನ್ನುವ ಮಾತು ಕೇಳಿಬಂದಿದೆ.

ಒತ್ತೆಕೋಲಕ್ಕೆ ನಡುರಾತ್ರಿಯಲ್ಲಿ 12 ಗಂಟೆ ವೇಳೆಗೆ ಭಂಡಾರ ಬರುವುದು ಮತ್ತು ಕುಳಿಚಾಟ ಎನ್ನುವ ಧಾರ್ಮಿಕ ವಿಧಿಗಳು ಇರುತ್ತವೆ. ಈ ವೇಳೆ, ಯಕ್ಷಗಾನ ಮಾಡಬಾರದೆಂದು ತೀರ್ಥರಾಮ ಆವಾಜ್ ಹಾಕಿದ್ದಿರಬೇಕು. ಆದರೆ, ಮಕ್ಕಳು ಯಕ್ಷಗಾನ ನಡೆಸುತ್ತಿದ್ದಾಗ ಆ ಸಂದರ್ಭದಲ್ಲಿ ಕೆಲಹೊತ್ತು ನಿಲ್ಲಿಸುವ ಔದಾರ್ಯ ತೋರಬಹುದಿತ್ತು. ಏಕಾಏಕಿ ಯಕ್ಷಗಾನವನ್ನೇ ನಿಲ್ಲಿಸುವ ಅಹಂಕಾರ ತೋರಬೇಕಿತ್ತೇ ಎನ್ನುವ ಪ್ರಶ್ನೆಯನ್ನು ಕಲಾವಿದರು, ಸ್ಥಳೀಯರು ಮುಂದಿಟ್ಟಿದ್ದಾರೆ.

ಯಕ್ಷಗಾನ ಆರಂಭಿಸುವಾಗ ಚೌಕಿ ಪೂಜೆ, ಮುಗಿಸುವಾಗ ಮಂಗಳಾರತಿ, ಮಂಗಳ ಹಾಡುವುದು ಸಂಪ್ರದಾಯ. ಇಂಥ ಸಂಪ್ರದಾಯ, ಪರಂಪರೆಯ ಬಗ್ಗೆ ಭಾಷಣ ಬಿಗಿಯುವ ಸಂಘ ಪರಿವಾರದ ನಾಯಕರು ತಾವೇ ಅಧ್ಯಕ್ಷರಾಗಿರುವ ಕಮಿಟಿಯಲ್ಲಿ ಯಕ್ಷಗಾನ ನಡೆಯುತ್ತಿದ್ದಾಗಲೇ, ಸಂಪ್ರದಾಯ, ಕಲಾ ಮರ್ಯಾದೆಯನ್ನು ಗಾಳಿಗೆ ತೂರಿದ್ದು ಎಷ್ಟು ಸರಿ ಅನ್ನುವ ಮಾತನ್ನು ಜನ ಕೇಳುತ್ತಿದ್ದಾರೆ. ಈ ನಡುವೆ, ಕಮಿಟಿಯ ಕಾರ್ಯದರ್ಶಿಯಾಗಿರುವ ರಾಧಾಕೃಷ್ಣ ಕೆ.ಆರ್ ಮತ್ತಿತರರು ಯಕ್ಷಗಾನ ನಡೆಯಲಿ ಬಿಡಿ, ಕುಳಿಚಾಟ ಬರುವಾಗ ನಿಲ್ಲಿಸಿದರೆ ಸಾಕು ಎಂದು ಹೇಳಿ ಹೋಗಿದ್ದರಂತೆ. ಈ ವಿಚಾರ ಸುಳ್ಯದಲ್ಲೀಗ ಭಾರೀ ಚರ್ಚೆಗೀಡಾಗಿದ್ದು ಪರ –ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.

ಕಳೆದ ಬಾರಿಯೂ ಅಡ್ಡಹಾಕಿದ್ದರಂತೆ !

ಕಳೆದ ಬಾರಿಯೂ ಈ ವ್ಯಕ್ತಿ ಇದೇ ನಡೆ ತೋರಿದ್ದರಂತೆ. ಕಾಸರಗೋಡಿನ ಮಲ್ಲ ಅನ್ನಪೂರ್ಣೇಶ್ವರಿ ದೇವಸ್ಥಾನದ ಮೇಳದಿಂದ ಯಕ್ಷಗಾನ ನಡೆಸುತ್ತಿದ್ದಾಗ ಆಟ ನಿಲ್ಲಿಸುವಂತೆ ತರಾತುರಿ ಮಾಡಿದ್ದರಂತೆ. ಕೊನೆಗೆ, ಕಲಾವಿದರು ಅರ್ಜೆಂಟಾಗಿ ಎರಡು-ಮೂರು ಪದ್ಯಗಳನ್ನು ಕಟ್ ಮಾಡಿ, ಮಂಗಳ ಹಾಡಿದ್ದಂತೆ. ಮೇಳದ ಕಲಾವಿದರು ಕೊನೆಗೆ ಇನ್ನು ಮುಂದೆ ಇಲ್ಲಿಗೆ ನಾವು ಆಟ ಆಡೋಕೆ ಬರಲ್ಲ ಎಂದು ಹೋಗಿದ್ದರಂತೆ. ಸಂಘ ಪರಿವಾರದ ನಾಯಕರಿಗೆ ಕೆಲವೊಮ್ಮೆ ರಾಜ್ಯ ನಾಯಕನ ಪಟ್ಟ ಸಿಕ್ಕಿದೊಡನೆ ಅಹಂಕಾರ ತಲೆಗೇರುತ್ತದೆ. ಯಾವ ಮೆಟ್ಟಿಲನ್ನು ತುಳಿದು ಮೇಲೆ ಏರಿರುತ್ತಾರೋ ಅದನ್ನೇ ತುಳಿದು ಕೆಂಗಣ್ಣು ಬೀರುತ್ತಾರೆ. ಸುಳ್ಯದಿಂದ ಈಗ ರಾಜ್ಯಕ್ಕೆ ಹೋದವರೆಲ್ಲ ಅದೇ ಹಾದಿ ತುಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

In BJP member of Puttur is now in controversy after he stopped the Yakshagana leader by children in Puttur.