"ದೃಶ್ಯಂ" ಸಿನಿಮಾದ ಜನಪ್ರಿಯ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನ

17-08-20 07:21 pm       Headline Karnataka News Network   ಸಿನಿಮಾ

 ಹಿಂದಿ, ಮರಾಠಿ ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ನಟ ನಿಶಿಕಾಂತ್ ಕಾಮತ್ (50ವರ್ಷ) ಸೋಮವಾರ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನವದೆಹಲಿ: ಹಿಂದಿ, ಮರಾಠಿ ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ನಟ ನಿಶಿಕಾಂತ್ ಕಾಮತ್ (50ವರ್ಷ) ಸೋಮವಾರ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿಶಿಕಾಂತ್ ಕಾಮತ್ ಹೈದರಾಬಾದ್ ನ ಗಚ್ಚಿಬೊಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 12ರಂದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಸೋಮವಾರ ಬೆಳಗ್ಗೆಯೇ ನಿಧನರಾಗಿದ್ದಾರೆಂಬ ಸುದ್ದಿ ಹಬ್ಬಿದ್ದರಿಂದ ಎಐಜಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ, ನಿಶಿಕಾಂತ್ ಅವರು ವೆಂಟಿಲೇಟರ್ ನಲ್ಲಿ ಇದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿತ್ತು.

2008ರ ‘ಮುಂಬೈ ಮೇರಿ ಜಾನ್’ ಸಿನಿಮಾದ ಮೂಲಕ ನಟ - ನಿರ್ದೇಶಕನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ’ದೊಂಬಿವಾಲಿ ಫಾಸ್ಟ್‌’, ‘ಮುಂಬೈ ಮೇರಿ ಜಾನ್‌’, ‘ರಾಕಿ ಹ್ಯಾಂಡ್‌ಸಮ್‌’, ‘ಫೋರ್ಸ್‌’, ‘ಮದಾರಿ’, ‘ದೃಶ್ಯಂ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಡ್ಯಾಡಿ’, ‘ರಾಕಿ ಹ್ಯಾಂಡ್‌ಸಮ್‌’, ‘ಜ್ಯೂಲಿ 2‘ ಹಾಗೂ ‘ಭಾವೇಶ್ ಜೋಶಿ’ ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿದ್ದರು ನಿಶಿಕಾಂತ್. ಸಿನಿಮಾಗಳಿಗೆ ಮಾತ್ರ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದ ಇವರು ವೆಬ್‌ ಸರಣಿಗಳನ್ನು ನಿರ್ಮಾಣ ಮಾಡಿದ್ದರು.

ಗೆಳೆಯ ನಿಶಿಕಾಂತ್ ಕಾಮತ್ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ರಿತೇಶ್ ನಟಿಸಿ, ನಿರ್ಮಾಣ ಮಾಡಿದ್ದ “ಲಾಯಿ ಭಾರಿ ಮರಾಠಿ ಸಿನಿಮಾವನ್ನು ನಿಶಿಕಾಂತ್ ನಿರ್ದೇಶಿಸಿದ್ದರು. ಈ ಸಿನಿಮಾ ಮರಾಠಿಯಲ್ಲಿ ಸೂಪರ್ ಹಿಟ್ ಆಗಿತ್ತು.