ಕ್ಷಮೆಯಾಚಿಸಿ ವಿಡಿಯೋ ಡಿಲೀಟ್ ಮಾಡಿದ ರ‍್ಯಾಪರ್ ಚಂದನ್ ಶೆಟ್ಟಿ

26-08-20 01:25 am       Headline Karnataka News Network   ಸಿನಿಮಾ

ಬಿಗ್​​ಬಾಸ್​ ಖ್ಯಾತಿಯ ರ‍್ಯಾಪರ್​ ಚಂದನ್​ ಶೆಟ್ಟಿ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು ಈಗ ಹಾಡಿನ ವಿಡಿಯೋದಲ್ಲಿ ಶರಣೆ ಸಂಕಮ್ಮ ಅವರ ಪಾತ್ರವನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಬೆಂಗಳೂರು, ಆಗಸ್ಟ್ 25: ಬಿಗ್​​ಬಾಸ್​ ಖ್ಯಾತಿಯ ರ‍್ಯಾಪರ್​ ಚಂದನ್​ ಶೆಟ್ಟಿ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು, ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೆ ಕೋಲು ಮಂಡೆ ಜಂಗಮ ದೇವರು ಎಂಬ ರ‍್ಯಾಪ್​ ಸಾಂಗ್ ಅನ್ನು ಚಂದನ್​ ಶೆಟ್ಟಿ ಬಿಡುಗಡೆ ಮಾಡಿದ್ದರು. ಈ ಹಾಡಿನ ವಿಡಿಯೋದಲ್ಲಿ ಶರಣೆ ಸಂಕಮ್ಮ ಅವರ ಪಾತ್ರವನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಇದೇ ತಿಂಗಳ 22 ರಂದ ಯೂಟ್ಯೂಬ್‌ನಲ್ಲಿ ಕೋಲು ಮಂಡೆ ಹಾಡು ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಾಡು ಬಿಡುಗಡೆಯಾದ ಮೂರು ದಿನಗಳಲ್ಲಿ 30 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ಹೀಗಿರುವಾಗಲೇ, ಈ ಹಾಡು ಹಾಗೂ ಚಂದನ್​ ಶೆಟ್ಟಿ ವಿರುದ್ಧ ಮಲೆ ಮಹದೇಶ್ವರ ಭಕ್ತರು ಸಿಟ್ಟಾಗಿದ್ದಾರೆ. ಮಹದೇಶ್ವರನ ಭಕ್ತೆ ಶಿವಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಮತ್ತು ಜಾನಪದಗೀತೆಯನ್ನು ಮೂಲ ದಾಟಿಗೆ ವಿರುದ್ದವಾಗಿ ಹಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಗ್ರೂಪ್​  ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಂದನ್​ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶರಣೆ ಸಂಕಮ್ಮಳನ್ನು ಕೆಟ್ಟ ರೀತಿಯಲ್ಲಿ ಚಿತ್ರೀಕರಿಸಿರುವ ಈ ಹಾಡನ್ನು ಯುಟ್ಯೂಬ್ ನಿಂದ ಕೂಡಲೇ ಡಿಲೀಟ್​ ಮಾಡಬೇಕು ಹಾಗೂ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಚಂದನ್​ ಶೆಟ್ಟಿ ಪ್ರತಿಕ್ರಿಯೆ ಈ ವಿವಾದದ ಕುರಿತಾಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿರುವ ಚಂದನ್​ ಶೆಟ್ಟಿ, ಮಲೆ ಮಹದೇಶ್ವರ ಭಕ್ತರಿಗೆ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಹಾಡನ್ನು ಯೂಟ್ಯೂಬ್​ನಿಂದ ಡಿಲೀಟ್ ಮಾಡಿಸಿದ್ದಾರೆ.  ತಮ್ಮಿಂದ ತಪ್ಪಾಗಿದೆ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ ಗಾಯಕ.

ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡುವ ಮೂಲಕ ಚಂದನ್ ಶೆಟ್ಡಿ ವಿವಾದಕ್ಕೀಡಾಗಿದ್ದರು.  ಯುವ ದಸರಾ ವೇದಿಕೆಯನ್ನು ಚಂದನ್​ ಶೆಟ್ಟಿ ವೈಯಕ್ತಿಕ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡರು ಎಂದೂ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.