ನಿಮ್ಮದು ವಿಜಯಾ ಬ್ಯಾಂಕಾ..? ಅಧಿಕಾರಿಗಳ ಸೋಗಿನಲ್ಲಿ ಕರೆ ; ಕೆಲವೇ ಕ್ಷಣದಲ್ಲಿ ಹಣ ಖಾಲಿ !!   

18-11-20 07:47 pm       Mangaluru Correspondent   ಕರಾವಳಿ

ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುವ ಜಾಲ ಸಕ್ರಿಯವಾಗಿದ್ದು ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಒಂದೇ ದಿನ ಎರಡು ಪ್ರಕರಣ ದಾಖಲಾಗಿದೆ.

ಮಂಗಳೂರು, ನವೆಂಬರ್ 18: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುವ ಜಾಲ ಸಕ್ರಿಯವಾಗಿದ್ದು ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಒಂದೇ ದಿನ ಎರಡು ಪ್ರಕರಣ ದಾಖಲಾಗಿದೆ. ಎರಡು ಕೂಡ ಒಂದೇ ತೆರನಾಗಿದ್ದು , ಓಟಿಪಿ ಕೇಳಿ ಹಣ ಎಗರಿಸುವ ಖದೀಮರ ಜಾಲದ್ದು.  

ಪಾಂಡೇಶ್ವರದ ವ್ಯಕ್ತಿಯೊಬ್ಬರಿಗೆ ನಿನ್ನೆ ಸಂಜೆ 5.30ರ ಸುಮಾರಿಗೆ ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಅಂತ ಯಾರೋ ಕರೆ ಮಾಡಿದ್ದರು. ನಿಮ್ಮ ಕ್ರೆಡಿಟ್ ಕಾರ್ಡನ್ನು ರೀ ಆಕ್ಟಿವೇಟ್ ಮಾಡಬೇಕೆಂದು ತಿಳಿಸಿ, ನಿಮ್ಮ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಕೊಡುವಂತೆ ತಿಳಿಸಿದ್ದಾರೆ. ಅದರಂತೆ, ನಂಬರ್ ಕೊಟ್ಟಿದ್ದು, ಕೆಲಹೊತ್ತಿನಲ್ಲಿ ನಿಮ್ಮ ಮೊಬೈಲಿಗೆ ಒಟಿಪಿ ನಂಬರ್ ಬಂದಿದ್ದು ಅದನ್ನು ಹೇಳುವಂತೆ ತಿಳಿಸಿದ್ದಾರೆ. ನಂಬರ್ ಪಡೆದ ಕೆಲವೇ ಕ್ಷಣಗಳಲ್ಲಿ ಅದರಲ್ಲಿದ್ದ 80 ಸಾವಿರ ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹಣ ಹೋಗಿದ್ದು ಮೆಸೇಜ್ ಬಂದಾಗಲೇ ವ್ಯಕ್ತಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಇಂದು ಬೆಳಗ್ಗೆ ಸೈಬರ್ ಕ್ರೈಮ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ನಿಮ್ಮ ಅಕೌಂಟ್ ವಿಜಯಾ ಬ್ಯಾಂಕಿದ್ದಾ..?

ಇನ್ನೊಂದು ಮುಲ್ಕಿಯ ನಿವಾಸಿಯೊಬ್ಬರ ದೂರು. 7074158509 ಎಂಬ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿಯು ತಾನು ಬ್ಯಾಂಕ್ ಆಫ್ ಬರೋಡಾದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ನಿಮ್ಮ ಖಾತೆ ವಿಜಯಾ ಬ್ಯಾಂಕಿನಲ್ಲಿದ್ದು ಅದನ್ನು ಬರೋಡಾ ಬ್ಯಾಂಕಿಗೆ ವರ್ಗಾಯಿಸುತ್ತಿದ್ದೇವೆ. ಅದಕ್ಕಾಗಿ ತಮ್ಮ ಎಟಿಎಂ ಡೆಬಿಟ್ ಕಾರ್ಡಿನ ಮಾಹಿತಿ ನೀಡುವಂತೆ ಹೇಳಿದ್ದಾನೆ. ಅದನ್ನು ನಂಬಿದ ವ್ಯಕ್ತಿ, ಡೆಬಿಟ್ ಕಾರ್ಡ್ ನಂಬರ್ ಮತ್ತು ಸಿವಿವಿ ಸಂಖ್ಯೆಯನ್ನು ನೀಡಿದ್ದ. ಆದರೆ, ಕೆಲವೇ ಕ್ಷಣದಲ್ಲಿ ವಂಚಕ ಡೆಬಿಟ್ ಕಾರ್ಡ್ ಮಾಹಿತಿಯನ್ನು ಬಳಸ್ಕೊಂಡು ಹಂತ ಹಂತಗಳಲ್ಲಿ 73,182 ರೂಪಾಯಿ ಡ್ರಾ ಮಾಡಿದ್ದಾನೆ. ಈ ಪ್ರಕರಣ ನಿನ್ನೆ ಬೆಳಗ್ಗೆ 11 ಗಂಟೆಗೆ ನಡೆದಿರುವುದಾಗಿ ದೂರುದಾರ ಮಾಹಿತಿ ನೀಡಿದ್ದಾರೆ.

ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು ಓಟಿಪಿ ನಂಬರ್ ಪಡೆದು ಹಣ ಎಗರಿಸುವ ಪ್ರಕರಣಗಳು ದಿನನಿತ್ಯ ಬೆಳಕಿಗೆ ಬರುತ್ತಿದ್ದರೂ ಸಾರ್ವಜನಿಕರು ಮಾತ್ರ ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾರೆ. ನಿಮಗೆ ದೊಡ್ಡ ಮೊತ್ತದ ಬಹುಮಾನ ಬಂದಿದೆ ಅಥವಾ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಮೋಸ ಮಾಡುವ ಖದೀಮರ ಜಾಲ ಇದ್ದು, ಇದನ್ನು ಮಟ್ಟ ಹಾಕಲು ಸೈಬರ್ ಕ್ರೈಮ್ ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ. ಹೆಚ್ಚಿನ ಕರೆಗಳು ಉತ್ತರ ಭಾರತದ ಕಡೆಯಿಂದ ಬರುತ್ತಿದ್ದು, ಎಲ್ಲೋ ಕುಳಿತು ಕೇವಲ ಹೀಗೆ ಕರೆ ಮಾಡುತ್ತಲೇ ಹಣ ಎಗರಿಸುವುದನ್ನು ಫುಲ್ ಟೈಮ್ ಬಿಸಿನೆಸ್ ಮಾಡಿಕೊಂಡವರಿದ್ದಾರೆ. ಅದನ್ನು ಟ್ರೇಸ್ ಮಾಡುವುದು ಕಷ್ಟದ ಕೆಲಸ ಎನ್ನುತ್ತಾರೆ ಸೈಬರ್ ಕ್ರೈಮ್ ಅಧಿಕಾರಿಗಳು. ಹೀಗಾಗಿ ವಂಚಕರು ಇದೇ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ.

ಹೆಚ್ಚಿನವರು ಹಣ ಕಳಕೊಂಡವರು ಈ ಬಗ್ಗೆ ಪೊಲೀಸ್ ದೂರು ಕೊಡಲು ಮುಂದೆ ಬರುವುದಿಲ್ಲ. ಕೆಲವರು ದೂರು ಕೊಟ್ಟರೂ, ತಮ್ಮ ಹೆಸರು ಬರಬಾರದು ಎಂದು ಮೊದಲೇ ಪೊಲೀಸರಿಗೆ ತಾಕೀತು ಮಾಡುತ್ತಾರೆ. ಇದೇ ಕಾರಣದಿಂದ ವಂಚಕರ ಜಾಲ ಮತ್ತಷ್ಟು ಬೆಳೆಯುತ್ತಿದ್ದು, ಕರಾವಳಿಯಲ್ಲಿ ಬಹಳಷ್ಟು ಜನ ಮೋಸ ಹೋಗುತ್ತಲೇ ಇದ್ದಾರೆ. 

Unidentified cyber thieves have fraudulently withdrawn almost Rs 80 thousand from a person at Pandeshwar and 73 thousand from a person at Mulki bank account by accessing their one-time password (OTP). A case has been registered at the cybercrime police station in Mangalore.