ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡ ಯೋಧನಿಗೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಅವಮಾನ ; ಹಣ ಕೊಡದೆ ಮುಂದೆ ಬಿಡಲ್ಲ ಎಂದು ಸಿಬಂದಿ ದರ್ಪ, ಎಡನೀರು ಮೂಲದ ಯೋಧನ ಕಣ್ಣೀರಿನ ವಿಡಿಯೋ ವೈರಲ್ ! 

27-01-26 06:46 am       HK News Desk   ಕರಾವಳಿ

ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡು ವೀಲ್ ಚೇರ್ ನಲ್ಲಿ ಓಡಾಡಿತ್ತಿರುವ ಯೋಧರೊಬ್ಬರಿಗೆ ಕುಂದಾಪುರದ ಸಾಸ್ತಾನ ಟೋಲ್ ಗೇಟ್ ಸಿಬಂದಿ ಅವಮಾನಿಸಿದ ಘಟನೆ ನಡೆದಿದ್ದು, ಯೋಧ ತನಗಾದ ಅವಮಾನದ ಘಟನೆಯ ಬಗ್ಗೆ ವಿಡಿಯೋ ಮಾಡಿ ನೋವನ್ನು ಹೇಳಿಕೊಂಡಿದ್ದಾರೆ. ವೀಡಿಯೋ ಈಗ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಉಡುಪಿ, ಜ.26: ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡು ವೀಲ್ ಚೇರ್ ನಲ್ಲಿ ಓಡಾಡಿತ್ತಿರುವ ಯೋಧರೊಬ್ಬರಿಗೆ ಕುಂದಾಪುರದ ಸಾಸ್ತಾನ ಟೋಲ್ ಗೇಟ್ ಸಿಬಂದಿ ಅವಮಾನಿಸಿದ ಘಟನೆ ನಡೆದಿದ್ದು, ಯೋಧ ತನಗಾದ ಅವಮಾನದ ಘಟನೆಯ ಬಗ್ಗೆ ವಿಡಿಯೋ ಮಾಡಿ ನೋವನ್ನು ಹೇಳಿಕೊಂಡಿದ್ದಾರೆ. ವೀಡಿಯೋ ಈಗ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

21 ಪ್ಯಾರಾ ಮಿಲಿಟರಿಯಲ್ಲಿ ಆರ್ಮಿ ಕಮಾಂಡೋ ಆಗಿ ಕೆಲಸ ಮಾಡಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಮೂಲದ ಶ್ಯಾಮರಾಜ್ ಎಂಬವರಿಗೆ ಸಾಸ್ತಾನದ ಟೋಲ್‌ ಗೇಟ್ ನಲ್ಲಿ ಟೋಲ್‌ ಶುಲ್ಕದಿಂದ ವಿನಾಯಿತಿ ಇದ್ದರೂ ಅಲ್ಲಿನ ಸಿಬ್ಬಂದಿ ಟೋಲ್ ಕಟ್ಟುವಂತೆ ಹೇಳಿ ಕಿರಿಕಿರಿ ಮಾಡಿ ಅವಮಾನಿಸಿದ್ದಾರೆ.

ಹಿಂದಿಯಲ್ಲಿ ಮಾತನಾಡಿರುವ ಅವರು, ನಾನು ಆರ್ಮಿ ಕಮಾಂಡೋ ಶ್ಯಾಮರಾಜ್, 21 ಪ್ಯಾರಾ ಮಿಲಿಟರಿಯಲ್ಲಿ ಕೆಲಸ ಮಾಡಿದ್ದೇನೆ. ಉಡುಪಿಯ ಬಳಿ ಇರುವ ಸಾಸ್ತಾನದ ಟೋಲ್‌ನಲ್ಲಿ ನನಗೆ ಟೋಲ್ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ. ಟೋಲ್ ವಿನಾಯಿತಿಗೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ‘ನಾನು ಅಪರೇಷನ್ ಪರಾಕ್ರಮ್‌’ ಯುದ್ಧ ಸಂತ್ರಸ್ತನಾಗಿದ್ದೇನೆ. ನನ್ನ ಪತ್ನಿಗೆ ಆರ್‌ಎಂಎ ಪ್ರಕಾರ ಪೋಸ್ಟಿಂಗ್ ಆಗಿದ್ದು, ಗಾಡಿಯೊಂದಿಗೆ ಹೋಗುತ್ತಿದ್ದೇನೆ. ಪ್ರತಿ ಟೋಲ್‌ನಲ್ಲಿ ನಾನು ಯಾವುದೇ ಶುಲ್ಕ ಪಾವತಿ ಮಾಡದೇ ಬಂದಿದ್ದೇನೆ. ಆದರೆ ಉಡುಪಿಯ ಸಾಸ್ತಾನದ ಟೋಲ್‌ನಲ್ಲಿ ಮಾತ್ರ ಅವರು ಹಣ ಕೊಡದೆ ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಇಲ್ಲಿ ಟೋಲ್ ಸಿಬ್ಬಂದಿಯಾದ ಶಿವರಾಮ್ ಹಾಗೂ ಸುರೇಶ್ ಎಂಬವರು ಹೇಳುತ್ತಿದ್ದಾರೆ. 

ನಾನು ಈ ವ್ಹೀಲ್‌ಚೇರ್‌ನಲ್ಲಿ ಏಕೆ ಕುಳಿತಿದ್ದೇನೆ ಎಂದು ನೀವೇ ಹೇಳಿ. ನಾನು ವ್ಹೀಲ್‌ಚೇರ್‌ನಲ್ಲಿ ಕುಳಿತಿರುವುದಕ್ಕೆ ಏನಾದರು ಅರ್ಥ ಇದೆಯೇ? ಒಬ್ಬರು ಯುದ್ಧ ಸಂತ್ರಸ್ತರನ್ನು ಆರ್ಮಿ ಕಾಯ್ದೆಯ ನಿಯಮಗಳಡಿ ಟ್ಯಾಕ್ಸ್ ಫ್ರೀ ಇದ್ದರೂ ಕೂಡ ಇಲ್ಲಿ ಟೋಲ್ ಕೇಳಲಾಗುತ್ತಿದೆ. ನಿತಿನ್ ಗಡ್ಕರಿಯವರೇ ನೀವೇ ಹೇಳಿ ಎಂದು ಆ ಯೋಧ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಾಸ್ತಾನ ಟೋಲ್ ಸಿಬ್ಬಂದಿ ನಮಗೆ ಗೊತ್ತಿರಲಿಲ್ಲ, ನಾವು ಮೇಲಿನವರ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಯೋಧರಿದ್ದರೆ ನಮ್ಮ ನೋವು ಏನು ಎಂದು ನಿಮಗೆ ಗೊತ್ತಾಗುತ್ತದೆ. ನಾವು ವ್ಹೀಲ್‌ಚೇರ್‌ನಲ್ಲಿ ಸುಮ್ಮನೇ ಕುಳಿತಿದ್ದು ಅಲ್ಲ ಅಣ್ಣ ಎಂದು ಯೋಧ ಶ್ಯಾಮರಾಜ್ ಹೇಳಿದ್ದಾರೆ. ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಟೋಲ್ ಸಿಬ್ಬಂದಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ ;

ವಿಡಿಯೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಟೋಲ್ ಸಿಬ್ಬಂದಿ, ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. "ಈ ಬಗ್ಗೆ  ಸರಿಯಾದ ಮಾಹಿತಿ ಇರಲಿಲ್ಲ. ದಾಖಲೆಗಳ ಬಗ್ಗೆ ಮೇಲಧಿಕಾರಿಗಳಿಗೆ ವಿವರ ಕಳುಹಿಸಿದ್ದೆವು. ಅವರು ಖಚಿತಪಡಿಸುವುದು ತಡವಾದ ಕಾರಣ ಗೊಂದಲ ಉಂಟಾಯಿತು. ಸ್ಥಳದಲ್ಲೂ ಕ್ಷಮೆ ಕೇಳಿದ್ದೆ, ಈಗ ಮತ್ತೊಮ್ಮೆ ಯೋಧರಲ್ಲಿ ಕ್ಷಮೆ ಯಾಚಿಸುತ್ತೇನೆ" ಎಂದು ಸಿಬ್ಬಂದಿ ತಿಳಿಸಿದ್ದಾನೆ.

An army veteran who lost both his legs while serving the nation was allegedly humiliated by toll staff at the Sasthan Toll Plaza near Kundapura in Udupi district. Despite being entitled to toll fee exemption, the staff reportedly refused to let him pass unless he paid the toll amount. A video recorded by the veteran narrating the incident has now gone viral on social media, triggering widespread public outrage.