Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸಭೆ ಆಗಬಾರದು, ಏನಾದ್ರೂ ಘೋಷಣೆ ಮಾಡಿದರೆ ಜೊತೆಗೆ ಅನುದಾನವನ್ನೂ ಕೊಡಿಸಿ ; ಸತೀಶ್ ಕುಂಪಲ

15-09-26 07:46 pm       HK News Staffer   ಕರಾವಳಿ

ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ಬರೀ ಕಾಟಾಚಾರಕ್ಕೆ ಸಂಪುಟ ಸಭೆ ಮಾಡಿದ ರೀತಿ ಆಗಬಾರದು. ಏನೋ ಘೋಷಣೆ ಮಾಡೋದು, ಯಾವುದೇ ಅನುದಾನ ಕೊಡದೇ ಪ್ರಚಾರಕ್ಕೆ ಸೀಮಿತ ಮಾಡೋದು ಬೇಡ. ಏನಾದ್ರೂ ಮಾಡಿದರೆ ಜೊತೆಗೆ ಅನುದಾನವನ್ನೂ ಘೋಷಿಸಿ ಜಿಲ್ಲೆಯ ಜನರಿಗೆ ಒಳಿತಾಗುವಂತೆ ಮಾಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಲಹೆ ಮಾಡಿದ್ದಾರೆ.

ಮಂಗಳೂರು, ಸೆ.15: ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ಬರೀ ಕಾಟಾಚಾರಕ್ಕೆ ಸಂಪುಟ ಸಭೆ ಮಾಡಿದ ರೀತಿ ಆಗಬಾರದು. ಏನೋ ಘೋಷಣೆ ಮಾಡೋದು, ಯಾವುದೇ ಅನುದಾನ ಕೊಡದೇ ಪ್ರಚಾರಕ್ಕೆ ಸೀಮಿತ ಮಾಡೋದು ಬೇಡ. ಏನಾದ್ರೂ ಮಾಡಿದರೆ ಜೊತೆಗೆ ಅನುದಾನವನ್ನೂ ಘೋಷಿಸಿ ಜಿಲ್ಲೆಯ ಜನರಿಗೆ ಒಳಿತಾಗುವಂತೆ ಮಾಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಲಹೆ ಮಾಡಿದ್ದಾರೆ.

ಸೆ.18ರಂದು ಮಂಗಳೂರಿನಲ್ಲಿ ನಡೆಯುವ ಸಂಪುಟ ಸಭೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಸಿಎಂ ಡಿಕೆಶಿ ಅವರನ್ನು ಭೇಟಿಯಾಗಿ ಅಭಿವೃದ್ಧಿ ಕುರಿತಾಗಿ ಬಿಜೆಪಿ ಕಡೆಯಿಂದ ಹಲವು ಯೋಜನೆಗಳ ಬಗ್ಗೆ ಮನವಿ ನೀಡಿದ್ದಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಅವರು, ನಾವು ಕೂಡ ಸಂಪುಟ ಸಭೆ ಮಾಡುತ್ತಿರುವುದನ್ನು ಕೇಳಿ ಆನಂದಗೊಂಡಿದ್ದೇವೆ. ಅದರಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಬೇಕು. ಕಳೆದ ಬಾರಿ ನಾರಾಯಣ ಗುರು ಅಭಿವೃದ್ಧಿ ನಿಗಮ, ಬಂಟ ಅಭಿವೃದ್ಧಿ ನಿಗಮ ಇತ್ಯಾದಿ ಘೋಷಣೆಯಾಗಿತ್ತು. ಮೂರು ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದರೂ ಅದಕ್ಕೆ ಅನುದಾನ ಘೋಷಣೆ ಮಾಡಿಲ್ಲ.

ಯುವಜನರ ಉದ್ಯೋಗಕ್ಕಾಗಿ ಐಟಿ ಪಾರ್ಕ್, ಕೈಗಾರಿಕೆಗಳ ಉತ್ತೇಜನಕ್ಕಾಗಿ ಪ್ಯಾಕೇಜ್ ಘೋಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸಬೇಕೆಂದು ಕೇಳಿಕೊಂಡಿದ್ದೇವೆ. ತುಳು ಭಾಷೆಯನ್ನು ರಾಜ್ಯದಲ್ಲಿ ದ್ವಿತೀಯ ಭಾಷೆಯಾಗಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮೋಹನ ಆಳ್ವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸಲಾಗಿತ್ತು. ಅದಕ್ಕೆ ಬೇಕಾದ ಅಗತ್ಯತೆಗಳನ್ನು ಬಿಜೆಪಿ ಅವಧಿಯಲ್ಲೇ ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಸಂಪುಟದಲ್ಲಿ ಪರಿಗಣಿಸಲು ಸಾಧ್ಯವಾಗಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಲ್ಲದೆ, ಸುಳ್ಯ, ಪುತ್ತೂರಿನಲ್ಲಿ ಆನೆಗಳ ಹಾವಳಿಯಿದ್ದು ಸೂಕ್ತ ಕಾರ್ಯಪಡೆ ಸರ್ಕಾರದಿಂದ ಆಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಿಸುವಂತೆ ಮನವಿ ಮಾಡಿದ್ದೇವೆ. ನಾವು ಹೊರಗೆ ಎಲ್ಲೇ ಹೋದರೂ ಮಂಗಳೂರಿನವರು ಅಂತ ಹೇಳುತ್ತೇವೆ ವಿನಾ ದಕ್ಷಿಣ ಕನ್ನಡ ಎಂದು ಹೇಳುವುದಿಲ್ಲ. ಇಡೀ ಜಿಲ್ಲೆಗೆ ಮಂಗಳೂರು ಎಂದು ಹೆಸರಿಸಿದರೆ ಅದರಿಂದ ಒಳಿತಾಗುತ್ತದೆ ವಿನಾ ಕೇಡಾಗುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿಗಳಾದ ಕಿಶೋರ್ ಕುಮಾರ್, ಧನಂಜಯ ಸರ್ಜಿ, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಸಂಜಯ ಪ್ರಭು, ವಸಂತ ಪೂಜಾರಿ, ಅರುಣ್ ಶೇಟ್ ಇದ್ದರು.

BJP Dakshina Kannada district president Satish Kumpala has welcomed the State Cabinet meeting being held in Mangaluru for the first time, but urged the government to ensure that the meeting does not become a mere formality or publicity exercise.