Harish Poonja, Mangalore: 'ಕಾಂಗ್ರೆಸ್ ನಂತಹ ದರಿದ್ರ ಪಕ್ಷದ ಹಿಂದೆ ಯಾವತ್ತೂ ಹೋಗಬೇಡಿ..!' ಶಾಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕನ ದ್ವೇಷ ಭಾಷಣ !

15-11-26 02:34 pm       HK News Desk   ಕರಾವಳಿ

ಕಾಂಗ್ರೆಸ್ ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ದ್ವೇಷ ಭಾಷಣ ಮಾಡಿದ್ದು ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಬೆಳ್ತಂಗಡಿ, ನ.15: ಕಾಂಗ್ರೆಸ್ ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ದ್ವೇಷ ಭಾಷಣ ಮಾಡಿದ್ದು ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. 

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಸಕ ದ್ವೇಷ ಭಾಷಣ ಮಾಡಿದ್ದು ಶಾಲೆಯ ಸಭಾಭವನ ಉದ್ಘಾಟನೆ ಸಮಾರಂಭದ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಶಾಲೆಯ ನೂತನ ಸಭಾಭವನಕ್ಕೆ ನರೇಂದ್ರ ಮೋದಿಯ ಹೆಸರನ್ನು ಶಾಸಕ ಪೂಂಜ ನಾಮಕರಣ ಮಾಡಿಸಿದ್ದು ಇದಕ್ಕೆ ಸರಕಾರದ ಅನುಮತಿ ಪಡೆಯದ ಕಾರಣ ಶಿಕ್ಷಣ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿತ್ತು.‌ ಹೀಗಾಗಿ ಶಿಕ್ಷಣ ಇಲಾಖೆ ಸೂಚನೆಯಂತೆ ಕಾರ್ಯಕ್ರಮ ರದ್ದಾಗಿದ್ದು ಕೇವಲ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಇದರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಕಾಂಗ್ರೆಸ್ ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ.. ಇಂತಹ ದರಿದ್ರ ಕೆಟ್ಟ ಪಕ್ಷವನ್ನು ನೀವು ಯಾವತ್ತೂ ನೆಚ್ಚಿಕೊಂಡು ಹೋಗಬೇಡಿ. ಈ ದೇಶ ಇರೋದು ನರೇಂದ್ರ ಮೋದಿ ನಾಯಕತ್ವದಲ್ಲಿ.. ನಿಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ 

ಯಾರು ತೊಂದರೆ ಕೊಡುತ್ತಿದ್ದಾರೆ ಅವರ ಹಿಂದೆ ಹೋಗಬೇಡಿ.‌ ಎಲ್ಲಿಂದಾದರೂ ಕಾಡಿ ಬೇಡಿಯಾದರೂ ಅನುದಾನ ತಂದು ಶಾಲೆಯನ್ನ ಅಭಿವೃದ್ಧಿ ಮಾಡುತ್ತೇನೆ. ಮುಂದೊಂದು ದಿನ ಒಳ್ಳೆಯ ಕಾರ್ಯಕ್ರಮವನ್ನು ಸಂಘಟಿಸಿ ಎಲ್ಲರಿಗೂ ಉತ್ತರ ಕೊಡುವ ಕೆಲಸ ಮಾಡುತ್ತೇನೆ. 

'ನಾನು ಬಸವನಗುಡಿಯ ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ಕೊಡು ಎಂದು ಪ್ರಾರ್ಥನೆ ಮಾಡುತ್ತೇನೆ. ಶಾಲೆಯಲ್ಲಿ ರಾಜಕಾರಣ ಮಾಡಲು ಬರಬೇಡಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲು ಬರಬೇಡಿ. ಮಾಡಲು ಬಂದ್ರೆ ಆ ಬಸವೇಶ್ವರ ನಿಮ್ಮನ್ನ ಭಸ್ಮ ಮಾಡದೆ ಬಿಡನು.‌ ನಾವು ಯಾವತ್ತೂ ಮುಂಬಾಗಿಲಿನಿಂದ ಬರುವವರು. ಹಿಂಬಾಗಿಲಿನಿಂದ ಬರುವವರಲ್ಲ ಎಂದು ಹೇಳಿದ್ದಲ್ಲದೆ, ಶಾಲಾ ಮಕ್ಕಳಿಂದ ನರೇಂದ್ರ ಮೋದಿಗೆ ಜೈಕಾರ ಹಾಕಿಸಿದ್ದಾರೆ. ಇದರ ವಿಡಿಯೋಗೆ ಜಾಲತಾಣದಲ್ಲಿ ಪರ- ವಿರೋಧ ವ್ಯಕ್ತವಾಗಿದೆ.