ಪುತ್ತೂರು ; ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮವಿತ್ತ ತಾಯಿ !

12-02-21 01:18 pm       Mangalore Correspondent   ಕರಾವಳಿ

ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಉಪ್ಪಿನಂಗಡಿ, ಫೆ.12: ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಸಂಗ ಕಡಬದಲ್ಲಿ ನಡೆದಿದೆ.

ಕಡಬದ ಕುಟ್ರುಪ್ಪಾಡಿ ಗ್ರಾಮದ ಅಲಾರ್ಮೆ ನಿವಾಸಿ ಲಲಿತಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಶುಕ್ರವಾರ ಬೆಳಗ್ಗೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ಅವಧಿಗಿಂತ ಮೊದಲೇ ನೋವು ಕಾಣಿಸಿದ್ದರಿಂದ ಲಲಿತಾರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯಾಧಿಕಾರಿ ಸೂಚಿಸಿದ್ದರು. ಅದರಂತೆ ಕಡಬದ 108 ಆ್ಯಂಬುಲೆನ್ಸ್ ನಲ್ಲಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗು ಆರೋಗ್ಯದಿಂದಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ನರ್ಸ್ ನವ್ಯಾ ಹಾಗೂ ಆಂಬುಲೆನ್ಸ್ ಸಿಬಂದಿ ರಾಜೇಶ್ ಸಹಕರಿಸಿದರು.