ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ಅಧಿಕಾರಿಗಳು, ಕುಸುಮಾವತಿ ರಕ್ತದ ಮಾದರಿ ಸಂಗ್ರಹ, ಡಿಎನ್ಎ ಪರೀಕ್ಷೆ ಸಾಧ್ಯತೆ 

23-10-26 05:48 pm       HK News Desk   ಕರಾವಳಿ

 ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ- ಕೊಲೆ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳು, ಸೌಜನ್ಯಾ ತಾಯಿ ಕುಸುಮಾವತಿಯವರ ರಕ್ತದ ಸ್ಯಾಂಪಲ್ ಪಡೆದಿದ್ದಾರೆ. 

ಮಂಗಳೂರು, ಅ.23 ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ- ಕೊಲೆ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳು, ಸೌಜನ್ಯಾ ತಾಯಿ ಕುಸುಮಾವತಿಯವರ ರಕ್ತದ ಸ್ಯಾಂಪಲ್ ಪಡೆದಿದ್ದಾರೆ. 

ಸೌಜನ್ಯಾ ಮರು ತನಿಖಾ ತಂಡದಲ್ಲಿ ತನಿಖಾಧಿಕಾರಿ ಆಗಿರುವ ಎಸ್ಪಿ ಲೋಕೇಶ್ ಪಿ.ಜಗಲಾಸರ್ ಮತ್ತು ಸಹಾಯಕ ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ತಂಡವು ಪ್ರಿಂಟರ್, ಲ್ಯಾಪ್ ಟಾಪ್ ಸಹಿತ ಬೆಳ್ತಂಗಡಿ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆಗಮಿಸಿತ್ತು.‌ ಇದೇ ವೇಳೆ, ಸೌಜನ್ಯಾ ತಾಯಿ ಕುಸುಮಾವತಿ ಅವರೂ ನ್ಯಾಯಾಲಯಕ್ಕೆ ಭೇಟಿ ನೀಡಿದ್ದು ಅವರ ರಕ್ತದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. 

ನ್ಯಾಯಾಧೀಶರ ಮುಂದೆ ಇಬ್ಬರು ಸರಕಾರಿ ಪಂಚರ ಸಮಕ್ಷಮದಲ್ಲಿ ಪೊಲೀಸರು ಕುಸುಮಾವತಿ ಅವರ ರಕ್ತದ ಮಾದರಿ ಪಡೆದಿದ್ದಾರೆ. ತನಿಖೆಯ ಭಾಗವಾಗಿ ಡಿಎನ್ಎ ಪರೀಕ್ಷೆ ನಡೆಸಲಿದ್ದು ಈ ಹಿನ್ನೆಲೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿಗಳಿವೆ. ರಕ್ತದ ಮಾದರಿಯನ್ನು ಸಂಗ್ರಹಿಸಿ ಎಸ್ಐಟಿ ಅಧಿಕಾರಿಗಳು ಎಫ್ಎಸ್ಎಲ್ ಗೆ ಕಳುಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸೌಜನ್ಯಾ ಮೃತದೇಹ ದೊರೆತ ಸ್ಥಳಕ್ಕೂ ತಂಡ ಭೇಟಿ ನೀಡಲಿದೆ ಎನ್ನಲಾಗುತ್ತಿದೆ.