"ದೆಹಲಿ ಟು ಲಂಡನ್ " ಬಸ್‌ ವ್ಯವಸ್ಥೆ ; 18 ದೇಶ ಸುತ್ತುವ ಪ್ರವಾಸಕ್ಕೆ ಸಜ್ಜು 

23-08-20 03:32 pm       Headline Karnataka News Network   ಸ್ಪೆಷಲ್ ಕೆಫೆ

ಸಾಹಸಿಗಳಿಬ್ಬರು ದೆಹಲಿಯಿಂದ ನೇರವಾಗಿ ಲಂಡನ್ನಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ ! ದೆಹಲಿ ಟು ಲಂಡನ್ ಬಸ್ ವ್ಯವಸ್ಥೆ ಮೂಲಕ ದೆಹಲಿಯಿಂದ 70 ದಿನಗಳಲ್ಲಿ ಲಂಡನ್ ತಲುಪಬಹುದೆಂದು ಯೋಜನೆ ಹಾಕಲಾಗಿದೆ. 

ನವದೆಹಲಿ, ಆಗಸ್ಟ್ 23: ಸ್ವಾತಂತ್ರ್ಯಕ್ಕೂ ಮುನ್ನ ಕೊಲ್ಕತ್ತಾದಿಂದ ಲಂಡನಿಗೆ ಬಸ್ ವ್ಯವಸ್ಥೆ ಇತ್ತು ಎಂಬ ಸುದ್ದಿಯನ್ನು ಓದಿರಬಹುದು. ಆದರೆ, ಈಗ ಬಸ್ ವ್ಯವಸ್ಥೆ ಇದೆ ಎಂದರೆ ನಂಬಲಿಕ್ಕಿಲ್ಲ. ಝುಮ್ಮೆಂದು ವಿಮಾನದಲ್ಲಿ ಹೋಗುವ ಸೌಲಭ್ಯ ಇರುವಾಗ ಬಸ್ ಯಾಕೆ ಎನ್ನಬಹುದು. ಆದರೆ, ವಿಚಿತ್ರ ಎನ್ನಿಸಿದರೂ ಸಾಹಸಿಗಳಿಬ್ಬರು ದೆಹಲಿಯಿಂದ ನೇರವಾಗಿ ಲಂಡನ್ನಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ !  

ಗುರುಗ್ರಾಮ್‌ನ ಪ್ರವಾಸಿ ಕಂಪನಿಯೊಂದು ಈ ಬಸ್ ವ್ಯವಸ್ಥೆ ಮಾಡಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ದ ದೆಹಲಿ ಟು ಲಂಡನ್ ಬಸ್ ವ್ಯವಸ್ಥೆ ಮೂಲಕ ದೆಹಲಿಯಿಂದ 70 ದಿನಗಳಲ್ಲಿ ಲಂಡನ್ ತಲುಪಬಹುದೆಂದು ಯೋಜನೆ ಹಾಕಲಾಗಿದೆ. 

ದೆಹಲಿಯಿಂದ ಹೊರಡುವ ಬಸ್, ಲಾವೋಸ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ 18 ದೇಶಗಳ ಮೂಲಕ ಹಾದು ಹೋಗುತ್ತದೆ.

ಇಷ್ಟಕ್ಕೂ ಈ ಬಸ್ ವ್ಯವಸ್ಥೆ ಯಾಕೆ ಬೇಕು ಎನ್ನಬಹುದು. ವಿಷ್ಯ ಏನಪ್ಪಾಂದ್ರೆ, ದೆಹಲಿ ನಿವಾಸಿಗಳಾದ ತುಷಾರ್ ಮತ್ತು ಸಂಜಯ್ ಮದನ್ ಎಂಬ ಇಬ್ಬರು ದೆಹಲಿಯಿಂದ ರಸ್ತೆ ಮೂಲಕ ಲಂಡನ್‌ಗೆ ಹೋಗಿದ್ದಾರೆ. ಇವರಿಬ್ಬರು 2017, 2018 ಮತ್ತು 2019ರ ಸತತ ಮೂರು ವರ್ಷಗಳಲ್ಲಿ ಇದೇ ರಸ್ತೆಯಲ್ಲಿ ಕಾರಿನ ಮೂಲಕ ಪ್ರಯಾಣಿಸಿದ್ದರು. ಅದೇ ಮಾರ್ಗದಲ್ಲಿ ಈ ಬಾರಿ 20 ಜನರೊಂದಿಗೆ ಬಸ್‌ನಲ್ಲಿ ತೆರಳಲು ನಿರ್ಧರಿಸಿದ್ದಾರೆ. 

ಬಸ್ಸಿನಲ್ಲಿ ತೆರಳಬೇಕಿದ್ದರೆ 15 ಲಕ್ಷ ಖರ್ಚು ! 

ಬಸ್ ಟು ಲಂಡನ್' ಪ್ರಯಾಣಕ್ಕಾಗಿ ಸದ್ಯಕ್ಕೆ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಯಾರಾದರೂ ಕಡಿಮೆ ಸಮಯದಲ್ಲಿ ತೆರಳಬೇಕಿದ್ದರೆ, ಅವರಿಗ ಮತ್ತು ಅವರು ಇತರ ದೇಶಗಳಿಗೆ ಪ್ರಯಾಣಿಸಲು ಬಯಸಿದರೆ, ಅವರು ಇನ್ನೊಂದು ವರ್ಗವನ್ನು ಆಯ್ಕೆ ಮಾಡಬಹುದು. ಪ್ರತಿ ವರ್ಗಕ್ಕೂ ನೀವು ವಿಭಿನ್ನ ಬೆಲೆಗಳನ್ನು ಪಾವತಿಸಬೇಕಾಗುತ್ತದೆ. ದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸಲು ನೀವು 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಪ್ರವಾಸಕ್ಕಾಗಿ ನಿಮಗೆ ಇಎಂಐ ಆಯ್ಕೆಯನ್ನು ಸಹ ನೀಡಲಾಗುವುದು.

ಸಾಹಸ ಓವರ್‌ಲ್ಯಾಂಡ್ ಟ್ರಾವೆಲರ್ ಕಂಪನಿಯ ಸ್ಥಾಪಕ ತುಷಾರ್ ಅಗರ್ವಾಲ್, ತನ್ನ ಸ್ನೇಹಿತ ಸಂಜಯ್ ಮದನ್ ಜೊತೆಗೆ ದೆಹಲಿಯಿಂದ ಲಂಡನ್‌ಗೆ 2017, 2018 ಮತ್ತು 2019 ರಲ್ಲಿ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ನಾವು ಇತರೇ ಸ್ನೇಹಿತರ ಜೊತೆ ಪ್ರತಿವರ್ಷ ಇಂತಹ ಪ್ರವಾಸ ಆಯೋಜಿಸುತ್ತೇವೆ ಎಂದು ತುಷಾರ್ ತಿಳಿಸಿದ್ದಾರೆ.

ಮೇ 2021ರಂದು ಪ್ರಯಾಣಕ್ಕೆ ಯೋಜನೆ

ಅನೇಕ ಜನರು ಈ ಯೋಜನೆಯಲ್ಲಿ ದೇಶ ಸುತ್ತುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.   ಆಗಸ್ಟ್ 15 ರಂದು ಪ್ರವಾಸ ಆರಂಭಿಸಬೇಕಿತ್ತು. ಕೊರೊನಾ ಕಾರಣದಿಂದ ಪ್ರಯಾಣದ ನೋಂದಣಿ ಆರಂಭಿಸಿಲ್ಲ. ಭಾರತದ ಜೊತೆಗೆ ಇತರ ದೇಶಗಳ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ಪ್ರವಾಸ ಆರಂಭಿಸಲಾಗುವುದು. 2021ರ ಮೇ ತಿಂಗಳಲ್ಲಿ ‌‌ಪ್ರವಾಸ ವ್ಯವಸ್ಥೆ ಮಾಡುತ್ತೇವೆ ಎಂದವರು ಮಾಹಿತಿ ನೀಡಿದ್ದಾರೆ.

ಸ್ಟಾರ್ ಹೋಟೆಲ್‌ಗಳಲ್ಲಿ ಉಳಿಯುವ ವ್ಯವಸ್ಥೆ  

70 ದಿನಗಳ ಪ್ರವಾಸದಲ್ಲಿ ನಾವು ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತೇವೆ. ವಾಸ್ತವ್ಯಕ್ಕೆ 4 ಸ್ಟಾರ್ ಅಥವಾ 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡುತ್ತವೆ. ಪ್ರಯಾಣಿಕರು ಇತರ ದೇಶಗಳಲ್ಲಿ ಭಾರತೀಯ ಆಹಾರವನ್ನು ಆನಂದಿಸಲು ಬಯಸಿದರೆ ಅವರಿಗೆ ಭಾರತೀಯ ಆಹಾರ ನೀಡಲಾಗುತ್ತದೆ ಎಂದು ತುಷಾರ್ ಅಗರ್ವಾಲ್ ತಿಳಿಸಿದ್ದಾರೆ.