ಇನ್ನು ವಿಮಾನದ ರೆಕ್ಕೆ ಮೇಲೆ ಕುಳಿತೇ ಹಾರಬಹುದು!

07-09-20 12:28 pm       Headline Karnataka News Network   ಸ್ಪೆಷಲ್ ಕೆಫೆ

ವಿಮಾನದ ರೆಕ್ಕೆಯಲ್ಲಿಯೇ ಕುಳಿತು ಹಾರಾಟ ನಡೆಸುವ ಕಾಲ ಬಂದಿದೆ! ಇದೇನು ಕನಸಾ ಎಂದು ಕೇಳಬೇಡಿ. ಏಕೆಂದರೆ ಇಂಥದ್ದೊಂದು ಹಾರಾಟವನ್ನು ಜರ್ಮನಿಯ ತಜ್ಞರು ಯಶಸ್ವಿಯಾಗಿ ನಡೆಸಿದ್ದಾರೆ.

ಜರ್ಮನಿ: ಇತ್ತೀಚಿಗೆ ಮಹಿಳೆಯೊಬ್ಬಳು ವಿಮಾನದ ಒಳಗೆ ಸೆಖೆ ಎಂದುಕೊಂಡು ತುರ್ತು ನಿರ್ಗಮನ ದ್ವಾರದಿಂದ ಹೊರಬಂದು ರೆಕ್ಕೆಯ ಮೇಲೆ ನಡೆದಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ಮಹಿಳೆ ಮಾಡಿದ ಎಡವಟ್ಟಿನಿಂದಾಗಿ ಸ್ವಲ್ಪ ಹೆಚ್ಚೂ ಕಡಿಮೆಯಾದರೂ ರೆಕ್ಕೆಗೆ ತೊಂದರೆಯುಂಟಾಗಿ ಅಪಾಯವಾಗುವ ಸಾಧ್ಯತೆ ಇತ್ತು. ಏಕೆಂದರೆ ವಿಮಾನದ ರೆಕ್ಕೆಗಳಿಗೆ ಸ್ವಲ್ಪ ತೊಂದರೆಯಾದರೆ ಅದು ಹಾರಾಟ ನಡೆಸುವುದು ಕಷ್ಟವಾಗುತ್ತದೆ.

ಆದರೆ ಕುತೂಹಲದ ಸಂಗತಿ ಎಂದರೆ, ಇದೀಗ ವಿಮಾನದ ರೆಕ್ಕೆಯಲ್ಲಿಯೇ ಕುಳಿತು ಹಾರಾಟ ನಡೆಸುವ ಕಾಲ ಬಂದಿದೆ! ಇದೇನು ಕನಸಾ ಎಂದು ಕೇಳಬೇಡಿ. ಏಕೆಂದರೆ ಇಂಥದ್ದೊಂದು ಹಾರಾಟವನ್ನು ಜರ್ಮನಿಯ ತಜ್ಞರು ಯಶಸ್ವಿಯಾಗಿ ನಡೆಸಿದ್ದಾರೆ.

‘ವಿ’ ಆಕೃತಿಯ ಮಾದರಿ ವಿಮಾನವನ್ನು ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ಹಾರಿಸಲಾಗಿದೆ. ಡಚ್ ಏರ್​ಲೈನ್ಸ್ ಕೆಎಲ್‍ಎಂ ಸಹಯೋಗದಲ್ಲಿ ನೆದರ್‍ಲೆಂಡ್‍ನ ಡೆಲ್ಫ್ ಯುನಿವರ್ಸಿಟಿಯ ತಂತ್ರಜ್ಞಾನ ವಿಭಾಗ ಇದರ ನಿರ್ಮಾಣ ಮಾಡಿದೆ.

ಹೌದು. ಇಂಧನ ಮಿತವ್ಯಯ ಹಾಗೂ ಸುಖಕರ ಪ್ರಯಾಣಕ್ಕೆ ಸೂಕ್ತ ಮಾದರಿ ಎಂದೇ ಬಿಂಬಿತವಾಗಿರುವ ಜರ್ಮನಿ ನಿರ್ಮಿತ ‘ಫ್ಲೈ-ವಿ’ ಹೆಸರಿನ ಮಾದರಿ ವಿಮಾನವೊಂದು ವಿಶಿಷ್ಟ ಎನಿಸುವ ಹಾರಾಟ ನಡೆಸಿದೆ. ಈ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ. ಗಾಳಿಯಲ್ಲಿ ಸುಲಭವಾಗಿ ತೇಲುವ ಈ ವಿಮಾನ ಇಂಧನ ಉಳಿತಾಯ ದೃಷ್ಟಿಯಿಂದ ಸೂಕ್ತ ಮಾದರಿ ಎಂದು ಹೇಳಲಾಗುತ್ತಿದೆ.

ಇಂಗ್ಲಿಷ್ ಭಾಷೆಯ ‘ವಿ’ ಆಕಾರದಲ್ಲಿ ಇರುವ ಈ ವಿಮಾನ ತನ್ನ ರೆಕ್ಕೆಯ ಮುಂದಿನ ಭಾಗದಲ್ಲಿ ಪ್ರಯಾಣಿಕರನ್ನು ಇಟ್ಟುಕೊಂಡು ಹಾರಲಿದೆ. ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್ ಕೂಡ ಇದರ ರೆಕ್ಕೆಯಲ್ಲಿ ಇರುವ ಹಿನ್ನೆಲೆಯಲ್ಲಿ ಶೇ.20ರಷ್ಟು ಇಂಧನ ಮಿತವ್ಯಯ ಸಾಧ್ಯವಾಗಲಿದೆ ಎಂದಿದ್ದಾರೆ ತಜ್ಞರು.

ಮೊದಲ ಯಶಸ್ವಿ ಹಾರಾಟದ ಬಳಿಕ ಮಾತನಾಡಿದ ಸಂಶೋಧನಾ ತಂಡದ ಜವಾಬ್ದಾರಿ ಹೊರತ್ತಿರುವ ಡೆಲ್ಫ್ ವಿಶ್ವವಿದ್ಯಾಲಯದ ವೋಸ್ ವಿಮಾನದ ಹಾರಾಟದಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ಆದರೆ ತಿರುಗುವ ಹಂತದಲ್ಲಿ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಲ್ಯಾಂಡಿಂಗ್ ಸಂದರ್ಭ ದೊಡ್ಡ ಸಮಸ್ಯೆ ಇದೆ. ಗಡುಸಾಗಿ ರನ್‍ವೇ ಸ್ಪರ್ಶಿಸುವುದರಿಂದ ಪ್ರಯಾಣಿಕರಲ್ಲಿ ದಿಗಿಲು ಮೂಡಿಸುತ್ತದೆ. ರೆಕ್ಕೆಗಳೇ ಅದರ ದೇಹಾಕೃತಿಯಾಗಿರುವುದರಿಂದ ಭೂ ಸ್ಪರ್ಶ ಮಾಡುವಾಗ ತುಂಬ ಸಮನಾಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇದು ಕಷ್ಟದ ಕೆಲಸ. ಮುಂದಿನ ಹಂತದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದು’ ಎಂದಿದ್ದಾರೆ