ಟಿ20 ವಿಶ್ವಕಪ್‌ಗೆ ಜಸ್‌ಪ್ರೀತ್‌ ಬುಮ್ರಾ ಲಭ್ಯತೆ ಬಗ್ಗೆ ಸೌರವ್ ಗಂಗೂಲಿ ಮಾಹಿತಿ!

01-10-22 01:37 pm       Source: Vijayakarnataka   ಕ್ರೀಡೆ

ಭಾರತ ತಂಡದ ಹಿರಿಯ ವೇಗಿ ಬೆನ್ನು ನೋವಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ.

ಹೊಸದಿಲ್ಲಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಇನ್ನೂ ಹೊರ ನಡೆದಿಲ್ಲವೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಜಸ್‌ಪ್ರೀತ್‌ ಬುಮ್ರಾ ಬೆನ್ನು ನೋವಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹರಿಣಗಳ ವಿರುದ್ಧದ ಚುಟುಕು ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರ ನಡೆದಿದ್ದರು. ಅವರ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ.

Jasprit Bumrah replaced by Mohammed Siraj for India vs South Africa T20I  series

ಅಂದಹಾಗೆ ತಿರುವನಂತಪುರಂನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ತಂಡ, ಬೌಲಿಂಗ್‌ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರುವ ಮೂಲಕ 8 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿತ್ತು.

ಮೊದಲನೇ ಟಿ20 ಪಂದ್ಯದ ಬಳಿಕ ಜಸ್‌ಪ್ರೀತ್‌ ಬುಮ್ರಾ, ಬೆಂಗಳೂರಿನಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಗೆ ತೆರಳಿದ್ದರು ಹಾಗೂ ಸ್ಕ್ಯಾನ್‌ಗೆ ಒಳಗಾಗಿದ್ದರು. ಇದೀಗ ಹಿರಿಯ ವೇಗಿಯನ್ನು ವೈದ್ಯಕೀಯ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

Jasprit Bumrah not ruled out of T20 World Cup 2022 yet: BCCI president  Sourav Ganguly - Sports News

ಈ ಬಗ್ಗೆ ಇತ್ತೀಚೆಗೆ ಕೋಲ್ಕತಾದಲ್ಲಿ ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ,"ಜಸ್‌ಪ್ರೀತ್‌ ಬುಮ್ರಾ ಇನ್ನೂ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿಲ್ಲ. ಮುಂದಿನ ಎರಡು ಅಥವಾ ಮೂರು ದಿನಗಳ ನಂತರ ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ಪ್ರವಾಸದಲ್ಲಿ ಟಿ20 ಸರಣಿ ಆಡಿದ ಬಳಿಕ ಜಸ್‌ಪ್ರೀತ್‌ ಬುಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ತವರು ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಮರಳಿದ್ದರು. ಈ ಸರಣಿಯಲ್ಲಿ ಆಡಿದ್ದ ಎರಡು ಪಂದ್ಯಗಳಲ್ಲಿ ಅವರು 12.16ರ ಎಕಾನಮಿ ರೇಟ್‌ನಲ್ಲಿ 73 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಅಕ್ಟೋಬರ್‌ 5 ರಂದು ಗುರುವಾರ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಆ ಮೂಲಕ ಟಿ20 ವಿಶ್ವಕಪ್‌ ಟೂರ್ನಿಗೆ ಪೂರ್ವ ತಯಾರಿ ಆರಂಭಿಸಲಿದೆ. ಟಿ20 ವಿಶ್ವಕಪ್‌ ಅಕ್ಟೋಬರ್‌ 16 ರಿಂದ ಆರಂಭವಾಗಲಿದೆ. ಆದರೆ, ಭಾರತ ತಂಡ ಅಕ್ಟೋಬರ್‌ 23 ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಪಾಕಿಸ್ತಾನ ವಿರುದ್ದ ಸೂಪರ್‌ 12 ರ ಪಂದ್ಯದಲ್ಲಿ ಸೆಣಸುವ ಮೂಲಕ ಮಹತ್ವದ ಟೂರ್ನಿಯನ್ನು ಆರಂಭಿಸಲಿದೆ.

Rohit Sharma-Led India to Leave For Australia on 6th October- Report

2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್‌ ಪಂತ್ (ವಿ.ಕೀ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ(ಅನುಮಾನ), ಭುವನೇಶ್ವರ್‌ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.

Jasprit Bumrah Hasnt Been Ruled Out Of The T20 World Cup 2022 Just Yet, Says Bcci President Sourav Ganguly.