ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಶವ ಪರೀಕ್ಷೆ!!

16-10-20 09:41 am       Headline Karnataka News Network   ಕರ್ನಾಟಕ

ಗುಜರಾತ್ ನಲ್ಲಿ ಕೊರೋನಾದಿಂದ ಸತ್ತ ವ್ಯಕ್ತಿಯೊಬ್ಬರ ಶವ ಪರೀಕ್ಷೆ ನಡೆದಿದ್ದು, ಇದೀಗ ಎರಡನೇ ಪ್ರಯತ್ನ ಕರ್ನಾಟಕದ ಬೆಂಗಳೂರಿನ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ನಡೆಸಿದ್ದಾರೆ.

ಬೆಂಗಳೂರು, ಅಕ್ಟೋಬರ್. 16: ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕೋವಿಡ್‌-19 ನಿಂದ  ಮೃತಪಟ್ಟ  ವ್ಯಕ್ತಿಯೊಬ್ಬರ ಶವ ಪರೀಕ್ಷೆಯನ್ನು ಖ್ಯಾತ ವಿಧಿ ವಿಜ್ಞಾನ ತಜ್ಞ ದಿನೇಶ್‌ ರಾವ್‌ ನಡೆಸಿದ್ದಾರೆ. ಅಲ್ಲದೆ  ಪರೀಕ್ಷೆಯ ಫಲಿತಾಂಶ ಅಕ್ಟೋಬರ್‌ 22ರಂದು ಪ್ರಕಟಿಸುವುದಾಗಿ  ತಿಳಿಸಿದ್ದಾರೆ.  

ಸಾಕಷ್ಟು ತಿಂಗಳುಗಳಿಂದ ಕೊರೋನಾ ಸೋಂಕಿತನ ಶವವೊಂದನ್ನು ಕೊಡಿ, ಪೋಸ್ಟ್ ಮಾರ್ಟಂ ನಡೆಸಬೇಕು ಎಂದು ಡಾ. ದಿನೇಶ್ ಸರ್ಕಾರದ ಬಳಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅದು ಹೇಗೋ ದಾನಿಯೊಬ್ಬರು ನೀಡಿದ ಶವವನ್ನು ಇದೀಗ ಪೋಸ್ಟ್ ಮಾರ್ಟಂ ಮಾಡಲಾಗಿದೆ.

ಮಧುಮೇಹ, ಹೈಪರ್‌ ಟೆನ್ಷನ್‌ನಂತಹ ಪೂರ್ವ ಕಾಯಿಲೆಗಳಿದ್ದು, ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದ 65 ವರ್ಷದ ಗಂಡು ಶವದ ಪರೀಕ್ಷೆಯನ್ನು ನಡೆಸಲಾಗಿದೆ.

ಈಗ ಕೋವಿಡ್‌ನಿಂದಾಗಿ ದೇಹದ ಅಂಗಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿವರವಾಗಿ ಮಾಹಿತಿ ಪಡೆಯುತ್ತಿದ್ದೇವೆ. ಅಚ್ಚರಿ ಎನಿಸುವ ಅನೇಕ ಅಂಶಗಳು ಈಗಾಗಲೇ ತಿಳಿದುಬಂದಿವೆ. ಆದರೆ ಪೋಸ್ಟ್‌ ಮಾರ್ಟಂನ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡ ಬಳಿಕವೇ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ದಿನೇಶ್‌ ರಾವ್‌ ಹೇಳಿದ್ದಾರೆ.