ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾರಾದ್ರೂ ಕಾಡಲ್ಲೇ ಹುಟ್ಟಿ ಬೆಳೆದವರಿದ್ರೆ ಮಂತ್ರಿ ಸ್ಥಾನ ಬಿಟ್ಟುಕೊಡುತ್ತೇನೆ ! ಸಚಿವ ರಾಮಲಿಂಗಾರೆಡ್ಡಿ ಸಿಡಿಮಿಡಿ

25-11-26 07:48 pm       HK News Staffer   ಕರ್ನಾಟಕ

ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮಾಡುವ ವಿಚಾರದಲ್ಲಿ ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ಎಚ್.ಡಿ ತಮ್ಮಯ್ಯ ರಾಜೀನಾಮೆ ಮುಂದಾಗಿದ್ದಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸಿಡಿಮಿಡಿಗೊಂಡಿದ್ದಾರೆ. ಯಾರಾದ್ರೂ ಅರಣ್ಯದಲ್ಲೇ ಹುಟ್ಟಿ ಬೆಳೆದವರು ಇದ್ರೆ ಅವರಿಗೆ ಮಂತ್ರಿ ಸ್ಥಾನ ಬಿಟ್ಟು ಕೊಡುತ್ತೇನೆ. ನಾನು ಬನ್ನೆರುಘಟ್ಟ ಅರಣ್ಯ ಭಾಗದಿಂದ ಬಂದವನು. ನನಗೂ ಅರಣ್ಯದ ಬಗ್ಗೆ ಅರಿವು ಇದೆ ಎಂದು ಸ್ವಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ನ.25: ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮಾಡುವ ವಿಚಾರದಲ್ಲಿ ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ಎಚ್.ಡಿ ತಮ್ಮಯ್ಯ ರಾಜೀನಾಮೆ ಮುಂದಾಗಿದ್ದಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸಿಡಿಮಿಡಿಗೊಂಡಿದ್ದಾರೆ. ಯಾರಾದ್ರೂ ಅರಣ್ಯದಲ್ಲೇ ಹುಟ್ಟಿ ಬೆಳೆದವರು ಇದ್ರೆ ಅವರಿಗೆ ಮಂತ್ರಿ ಸ್ಥಾನ ಬಿಟ್ಟು ಕೊಡುತ್ತೇನೆ. ನಾನು ಬನ್ನೆರುಘಟ್ಟ ಅರಣ್ಯ ಭಾಗದಿಂದ ಬಂದವನು. ನನಗೂ ಅರಣ್ಯದ ಬಗ್ಗೆ ಅರಿವು ಇದೆ ಎಂದು ಸ್ವಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಗೊತ್ತಿಲ್ಲವೆಂದು ಎಚ್.ಡಿ ತಮ್ಮಯ್ಯ ಹೇಳಿದ್ದಾರೆ. ನಮ್ಮದು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಆನೇಕಲ್. ಅಲ್ಲಿ ನಮ್ಮ ತೋಟ ಇದ್ದು ಕಾಡಾನೆಗಳು ಬರುತ್ತವೆ. ಅರಣ್ಯದಲ್ಲಿ ಹುಟ್ಟಿ ಬೆಳೆದವರು ಮಂತ್ರಿಯಾದರೆ ಅಭ್ಯಂತರವಿಲ್ಲ. ನಾನು ಅರಣ್ಯ ಇಲಾಖೆ ಬಿಟ್ಟುಕೊಡಲು ರೆಡಿ ಇದ್ದೇನೆ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ. ಅರಣ್ಯ ಮಂತ್ರಿಯಾಗಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಿದ್ದೇನೆ. ಜನರ ಸಾವು ನೋವು ಕಡಿಮೆ ಆಗಬೇಕೆಂದು ನಮ್ಮ ಗುರಿ ಎಂದು ಹೇಳಿದರು.  

ಶಾಸಕರು ಸಿಎಂ, ಸ್ಪೀಕರ್ ಭೇಟಿಯಾಗಿದ್ದಾರೆ. ಅಲ್ಲಿನ ಶಾಸಕರು ಮುಂದೆ ಅವರನ್ನೇ ಕೇಳಲಿ. ನಾನು 8 ಬಾರಿ ಶಾಸಕನಾಗಿದ್ದೇನೆ, ನನಗೆ ಅರ್ಥ ಮಾಡಿಕೊಳ್ಳಲು ಆಗಲ್ವಾ? ಯಾವ ಅಧಿಕಾರಿಯೂ ನನ್ನನ್ನು ದಾರಿ ತಪ್ಪಿಸಿಲ್ಲ. ಏನೇ ನಿರ್ಣಯ ತೆಗೆದುಕೊಂಡರೂ ನಾನೇ ತೆಗೆದುಕೊಂಡಿದ್ದೇನೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಶ್ನೆಯೇ ಇಲ್ಲ. 

ನವೆಂಬರ್ 30ರಂದು ಕಾಡಾನೆ ಸ್ಥಳಾಂತರ ಬಗ್ಗೆ ಸಭೆ ಇದೆ. ಸದ್ಯಕ್ಕೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸಭೆಯ ತೀರ್ಮಾನ ನೋಡಿ ಆನೆಗಳ ಸ್ಥಳಾಂತರ ಬಗ್ಗೆ ನಿರ್ಧಾರ ಮಾಡುತ್ತೇವೆ. ಬೆಲೂರು ಆನೆ, ಚಿಕ್ಕಮಗಳೂರು ಆನೆ ಅಂತ ಪ್ರತ್ಯೇಕ ಇರಲ್ಲ. ಕಾಡು ಇರುವ ಎಲ್ಲಾ ಕಡೆ ಓಡಾಡಿಕೊಂಡು ಇರುತ್ತವೆ ಎಂದರು.