ಬ್ರೇಕಿಂಗ್ ನ್ಯೂಸ್
05-08-24 05:33 pm HK News Desk ದೇಶ - ವಿದೇಶ
ಢಾಕಾ, ಆಗಸ್ಟ್.5: ಬಾಂಗ್ಲಾದೇಶದಲ್ಲಿ ನಿರಂತರ ಪ್ರತಿಭಟನೆ, ಹಿಂಸಾಚಾರ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸದ್ದಿಲ್ಲದೆ, ದೇಶ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಶೇಖ್ ಹಸೀನಾ ರಾಜಿನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ದೇಶಾದ್ಯಂತ ಹಿಂಸಾಚಾರ ನಡೆಸಿತ್ತು.
ಮುಸ್ಲಿಂ ರಾಷ್ಟ್ರವಾಗಿದ್ದರೂ, ಸುದೀರ್ಘ ಕಾಲದಿಂದ ಬಾಂಗ್ಲಾದೇಶವನ್ನು ತನ್ನ ಮುಷ್ಠಿಯಲ್ಲಿಟ್ಟು ಪ್ರಧಾನಿ ಸ್ಥಾನದಲ್ಲಿ ಮುಂದುವರಿದಿದ್ದ ಶೇಖ್ ಹಸೀನಾ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಮೂರು ವರ್ಷಕ್ಕೆ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಇದೇ ವೇಳೆ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ ಕುಟುಂಬದ ಸದಸ್ಯರಿಗೆ ಸರಕಾರಿ ಕೆಲಸದಲ್ಲಿ ಮೀಸಲಾತಿಗೆ ಆದೇಶ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಅದೇ ನೆಪದಲ್ಲಿ ದೇಶಾದ್ಯಂತ ಪ್ರತಿಭಟನೆ ಶುರುವಾಗಿತ್ತು. ಹಸೀನಾ ರಾಜಿನಾಮೆ ಬೆನ್ನಲ್ಲೇ ಸೇನಾ ಮುಖ್ಯಸ್ಥ ವಾಕರ್ ಉಝ್ ಜವಾನ್ ಆಡಳಿತವನ್ನು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಹಂಗಾಮಿ ಸರಕಾರ ನೇಮಕ ಮಾಡುವುದಾಗಿ ಪ್ರಕಟಣೆ ನೀಡಿದ್ದಾರೆ. ಇತ್ತ ಶೇಖ್ ಹಸೀನಾ ತನ್ನ ತಂಗಿ ಶೇಖ್ ರೆಹನಾ ಜೊತೆಗೆ ದೇಶ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆಕೆ ಎಲ್ಲಿ ಹೋಗಿದ್ದಾರೆ ಎನ್ನುವುದು ದೃಢಪಟ್ಟಿಲ್ಲ.
ಬಾಂಗ್ಲಾದ ಇಂದಿರಾ ಶೇಖ್ ಹಸೀನಾ
1947ರಲ್ಲಿ ಜನಿಸಿದ್ದ ಶೇಖ್ ಹಸೀನಾರದ್ದು ಬಾಂಗ್ಲಾದೇಶದ ಚರಿತ್ರೆಯಲ್ಲಿ ವರ್ಣರಂಜಿತ ಅಧ್ಯಾಯ. 1971ರಲ್ಲಿ ಪೂರ್ವ ಪಾಕಿಸ್ಥಾನದಿಂದ ವಿಭಜನೆಗೊಂಡು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿ ಅದರಲ್ಲಿ ಯಶಸ್ವಿಯಾಗಿದ್ದವರು ಮುಜೀಬುರ್ ರೆಹ್ಮಾನ್. ಅವರ ಪುತ್ರಿಯೇ ಶೇಖ್ ಹಸೀನಾ. 1975ರಲ್ಲಿ ಮುಜೀಬುರ್ ರೆಹಮಾನ್ ಅವರನ್ನು ವಿದ್ರೋಹಿಗಳು ಹತ್ಯೆಗೈದ ಬಳಿಕ ದೇಶ ಬಿಟ್ಟು ಹೋಗಿದ್ದ ಶೇಖ್ ಹಸೀನಾ 1980ರಲ್ಲಿ ಮತ್ತೆ ಬಾಂಗ್ಲಾಕ್ಕೆ ಬಂದು ರಾಜಕೀಯಕ್ಕೆ ಎಂಟ್ರಿಯಾಗಿದ್ದರು. ತಂದೆ ಸ್ಥಾಪಿಸಿದ್ದ ಬಾಂಗ್ಲಾ ಅವಾಮಿ ಲೀಗ್ ಪಕ್ಷವನ್ನು ಮುನ್ನಡೆಸುತ್ತ 1981ರಲ್ಲಿ ಅಧ್ಯಕ್ಷೆಯಾಗಿದ್ದರಲ್ಲದೆ, ವಿಪಕ್ಷ ನಾಯಕರಾಗಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. 1996ರಲ್ಲಿ ಪಕ್ಷ ಅಧಿಕಾರಕ್ಕೇರುತ್ತಿದ್ದಂತೆ ಶೇಖ್ ಹಸೀನಾ ಬಾಂಗ್ಲಾ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು.
ಶೇಖ್ ಹಸೀನಾ ಪ್ರಧಾನಿಯಾಗಿ ಅತಿ ಹಿಂದುಳಿದ ಬಾಂಗ್ಲಾದೇಶದ ಜನರಿಗೆ ಉತ್ತಮ ಶಿಕ್ಷಣಕ್ಕಾಗಿ ಕ್ರಮ ಕೈಗೊಂಡಿದ್ದರು. ಇವರ ಆಡಳಿತದಲ್ಲಿ ವಿದೇಶಿ ಹೂಡಿಕೆ ಹೆಚ್ಚಿದ್ದಲ್ಲದೆ, ಜನರ ಆದಾಯವೂ ಹೆಚ್ಚುತ್ತ ಬಂದಿತ್ತು. ಗಾರ್ಮೆಂಟ್ ಇಂಡಸ್ಟ್ರಿಯಲ್ಲಿ ಇಡೀ ಜಗತ್ತಿನಲ್ಲೇ ಬಾಂಗ್ಲಾವನ್ನು ಮುಂಚೂಣಿ ಸ್ಥಾನಕ್ಕೇರಿಸಿದ್ದರು. ಆರೋಗ್ಯ ಕ್ಷೇತ್ರದಲ್ಲೂ ಹಸೀನಾ ಆಡಳಿತದಲ್ಲಿ ಬಾಂಗ್ಲಾ ಗಮನಾರ್ಹ ಸಾಧನೆ ಮಾಡಿತ್ತು. ಇದೇ ವೇಳೆ, ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ನೋಟ್ ಬುಕ್ ವಿತರಿಸಲು ಕ್ರಮ ಕೈಗೊಂಡಿದ್ದರು. ಶೇಖ್ ಹಸೀನಾ ಉತ್ತಮ ಆಡಳಿತಕ್ಕೆ ಹೆಸರಾದಷ್ಟೇ ವಿವಾದಕ್ಕೂ ತುತ್ತಾಗಿದ್ದರು. ನ್ಯಾಯಾಂಗವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟು ಪ್ರಜಾಪ್ರಭುತ್ವವನ್ನು ತಮಗೆ ಬೇಕಾದಂತೆ ಕುಣಿಸಿಕೊಂಡಿದ್ದರು ಎನ್ನುವ ಆರೋಪ ಬಂದಿತ್ತು.
2006-08ರಲ್ಲಿ ಮಿಲಿಟರಿ ಕ್ರಾಂತಿಯುಂಟಾಗಿ ಶೇಖ್ ಹಸೀನಾ ಅಧಿಕಾರ ಬಿಡುವಂತಾಗಿತ್ತು. 2009ರಲ್ಲಿ ಚುನಾವಣೆ ನಡೆದು ಶೇಖ್ ಹಸೀನಾ ಮತ್ತೆ ಜಯಭೇರಿ ಗಳಿಸಿ ಪ್ರಧಾನಿ ಸ್ಥಾನಕ್ಕೇರಿದ್ದರು. ಆನಂತರ, ಮತ್ತೆ ಎರಡು ಅವಧಿಗೆ ಪ್ರಧಾನಿ ಸ್ಥಾನಕ್ಕೇರಿದ್ದ ಶೇಖ್ ಹಸೀನಾ ಬಾಂಗ್ಲಾವನ್ನು ಏಕಮೇವಾದ್ವಿತೀಯ ಎನ್ನುವ ರೀತಿ ಆಳಿದ್ದು ಇತಿಹಾಸ. ಭಾರತದಲ್ಲಿ ಇಂದಿರಾ ಗಾಂಧಿಯ ರೀತಿ ತನಗ್ಯಾರೂ ಎದುರಾಳಿಗಳೇ ಇಲ್ಲ ಎನ್ನುವಂತೆ ಆಕೆಯ ಆಡಳಿತ ಇತ್ತು. ಹಸೀನಾ ಆಡಳಿತದಲ್ಲಿ ದೇಶ ಅಭಿವೃದ್ಧಿಗೊಂಡು ಜನರ ತಲಾದಾಯವೂ ವೃದ್ಧಿಯಾಗಿತ್ತಾದರೂ, ಪ್ರಜಾಪ್ರಭುತ್ವದ ಮೌಲ್ಯಗಳು ಗಾಳಿಗೆ ತೂರಲ್ಪಟ್ಟಿದ್ದವು ಎನ್ನುವ ಆರೋಪವೂ ಕೇಳಿಬಂದಿತ್ತು. ಚುನಾವಣೆಯಲ್ಲೂ ಅಕ್ರಮಗಳು ನಡೆದಿರುವ ಆರೋಪಗಳಿದ್ದವು. ಭಾರತದಲ್ಲಿ ಇಂದಿರಾ ಗಾಂಧಿಯ ಕಾಲದಲ್ಲಿಯೂ ಇದೇ ರೀತಿಯ ಆಡಳಿತ ಇತ್ತು. ತನ್ನ ಸ್ಥಾನಕ್ಕೆ ಚ್ಯುತಿ ಬರುತ್ತೆ ಎಂದಾಗ ಚುನಾವಣೆ ಅಕ್ರಮ, ತುರ್ತು ಸ್ಥಿತಿಯ ಹೇರಿಕೆಯೂ ಆಗಿತ್ತು.
ಇದೇನಿದ್ದರೂ ಸುದೀರ್ಘ 25 ವರ್ಷಗಳ ಕಾಲ ಬಾಂಗ್ಲಾವನ್ನು ಆಳಿದ್ದಲ್ಲದೆ, ಎಲ್ಲ ಕ್ಷೇತ್ರದಲ್ಲಿಯೂ ತನ್ನ ದೇಶವನ್ನು ಪಾಕಿಸ್ತಾನದಿಂದ ಮುಂಚೂಣಿಯಲ್ಲಿ ನಿಲ್ಲಿಸಿದ್ದು ಶೇಖ್ ಹಸೀನಾ ಹೆಚ್ಚುಗಾರಿಕೆ. ಪಾಕಿಸ್ತಾನ ಭಯೋತ್ಪಾದನೆ, ತೀವ್ರ ಆರ್ಥಿಕ ಕುಸಿತದಿಂದ ಜರ್ಝರಿತವಾಗಿದ್ದರೆ, ಹಿಂದೆ ಪಾಕಿಸ್ತಾನದಿಂದಲೇ ಒಡೆದು ಪ್ರತ್ಯೇಕಗೊಂಡಿದ್ದ ಬಾಂಗ್ಲಾದೇಶ ಗಾತ್ರದಲ್ಲಿ ಸಣ್ಣದಾಗಿದ್ದರೂ ವಿಶ್ವ ಭೂಪಟದಲ್ಲಿ ತನ್ನದೇ ಸ್ಥಾನ ಕಂಡುಕೊಂಡಿದೆ. ಶೇಖ್ ಹಸೀನಾ ನಾಯಕತ್ವಕ್ಕೆ ಭಾರತ ಸರಕಾರದ ಬೆಂಬಲವೂ ಜೊತೆಗಿತ್ತಲ್ಲದೆ, ನಿರಂತರ ಸ್ನೇಹ, ವ್ಯಾಪಾರ ಬಾಂಧವ್ಯದ ಹಸ್ತವೂ ಜೊತೆಗಿತ್ತು. ಬಾಂಗ್ಲಾದೇಶಕ್ಕೆ ಸುಸ್ಥಿರ ಆರ್ಥಿಕತೆಯ ದೃಷ್ಟಿ ತೋರಿಸಿದ್ದ 77 ವರ್ಷದ ಶೇಖ್ ಹಸೀನಾ ಈಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ತನ್ನ ಜನರಿಗೆ ಬೇಡವಾದ ಮೇಲೆ ಉಳಿಯೋದೂ ಇಲ್ಲ ಎಂದು ದೇಶವನ್ನೇ ತೊರೆದಿದ್ದಾರೆ. ಇದರೊಂದಿಗೆ, ಬಹುತೇಕ ಶೇಖ್ ಹಸೀನಾರ ಸುದೀರ್ಘ ರಾಜಕೀಯ ಯುಗವೂ ಅಂತ್ಯವಾಗುವ ಸಾಧ್ಯತೆ ಗೋಚರಿಸಿದೆ.
ಇದೇ ವೇಳೆ, ನೆರೆರಾಷ್ಟ್ರ ಭಾರತವು ತನ್ನ ಪ್ರಜೆಗಳಿಗೆ ಬಾಂಗ್ಲಾಕ್ಕೆ ತೆರಳದಂತೆ ಸೂಚನೆ ನೀಡಿದೆ. ಅಲ್ಲದೆ, ಬಾಂಗ್ಲಾ- ಭಾರತ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಶೇಖ್ ಹಸೀನಾ ವಿರುದ್ಧ ಹಿಂಸಾಚಾರ ನಡೆದಿರುವುದರ ಹಿಂದೆ ವಿರೋಧಿ ಪಕ್ಷಗಳ ಕೈವಾಡವೂ ಇದ್ದು, ಬಾಂಗ್ಲಾ ಸ್ಥಿತಿ ಮುಂದೇನು ಅನ್ನುವ ಕುತೂಹಲ ಉಂಟಾಗಿದೆ.
On August 5, Sheikh Hasina fled Bangladesh after resigning as the Prime Minister following months of violence and protests against her government’s move to bring in a quota, ending 15 years of continuous rule. Shortly after local media showed the embattled leader boarding a military chopper with her sister, Bangladesh’s military chief General Waker-uz-Zaman announced plans to seek the president's guidance on forming interim government.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm