ಅಧಿಕ ಮೈ ತೂಕ ಅಥವಾ ಬೊಜ್ಜಿಗೆ ಕಾರಣವೇನು? ತಡೆಗಟ್ಟುವುದು ಹೇಗೆ?

24-06-21 11:02 am       Reena TK, BoldSky Kannada   ಡಾಕ್ಟರ್ಸ್ ನೋಟ್

ಅತಿಯಾದ ಮೈ ತೂಕ ಅಥವಾ ಬೊಜ್ಜಿಗೆ ಕಾರಣವೇನು ಎಂದು ತಿಳಿದರೆ ಮೈ ಬೊಜ್ಜು ಬಾರದಂತೆ ತಡೆಗಟ್ಟಬಹುದು.

ದಪ್ಪಗಿರುವುದು ಒಂದು ಸಮಸ್ಯೆಯೇ? ಸ್ವಲ್ಪ ಮೈಕೈ ತುಂಬಿರುವುದರಿಂದ ದೊಡ್ಡ ತೊಂದರೆಯಿಲ್ಲ, ಅದೇ ವಿಪರೀತ ಮೈ ತೂಕ ಹೆಚ್ಚಾದರೆ ಅದೊಂದು ಸಮಸ್ಯೆ ಮಾತ್ರವಲ್ಲ ಅನೇಕ ಕಾಯಿಲೆಗಳಿಗೆ ಕಾರಣವಾಗುವುದು. ನಮ್ಮ ದೇಹ ಒಂದೇ ದಿನಕ್ಕೆ ದಪ್ಪಕ್ಕಾಗುವುದಿಲ್ಲ... ದಿನಾ ಸ್ವಲ್ಪ-ಸ್ವಲ್ಪವೇ ಹೆಚ್ಚಾಗುತ್ತಿರುತ್ತದೆ, ಆದರೆ ನಾವು ಅದರತ್ತ ನಿರ್ಲಕ್ಷ್ಯ ತೋರುತ್ತೇವೆ, ನಂತರ ಮೈ ತೂಕ ತುಂಬಾ ಹೆಚ್ಚಾದಾಗ ಅಯ್ಯೋ ಮೈ ಜಾಸ್ತಿಯಾಯಿತು ಅಂತ ಯೋಚಿಸುತ್ತೇವೆ. ಅತಿಯಾದ ಮೈ ತೂಕ ಅಥವಾ ಬೊಜ್ಜಿಗೆ ಕಾರಣವೇನು ಎಂದು ತಿಳಿದರೆ ಮೈ ಬೊಜ್ಜು ಬಾರದಂತೆ ತಡೆಗಟ್ಟಬಹುದು. ಮೈ ಬೊಜ್ಜಿಗೆ ಸಾಮಾನ್ಯವಾದ ಕಾರಣಗಳೇನು, ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬೊಜ್ಜು ದೇಹ ಎಂದರೇನು?

ಒಬ್ಬ ವ್ಯಕ್ತಿಯ ಬಾಡಿ ಇಂಡೆಕ್ಸ್ ಅಥವಾ BMI ನೋಡಿ ವೈದ್ಯರು ವ್ಯಕ್ತಿ ಬೊಜ್ಜಿನ ಮೈ ಹೊಂದಿದ್ದಾರೆಯೇ ಇಲ್ಲವೇ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಬಾಡಿ ಇಂಡೆಕ್ಸ್ 30.0-34.0 ಹೊಂದಿದ್ದರೆ ಕ್ಲಾಸ್‌ 1, 35.0-39.9ರ ನಡುವೆ ಇದ್ದರೆ ಬೊಜ್ಜಿನ ಮೈ ಎಂದು ಹೇಳಲಾಗುವುದು. ಅದಕ್ಕಿಂತ ಹೆಚ್ಚಿನ ಮೈ ತೂಕ ಹೊಂದಿದ್ದರೆ ಅತಿಯಾದ ಬೊಜ್ಜಿನ ದೇಹ ಎಂದು ಹೇಳಲಾಗುವುದು.



ಅತಿಯಾದ ತೂಕ ಎಂದರೇನು?

ಅತಿಯಾದ ಮೈ ತೂಕ ಎಂದರೆ ಬೊಜ್ಜಿನ ಮೈಗಿಂತ ಸ್ವಲ್ಪ ಕಡಿಮೆ ಮೈ ತೂಕ ಹೊಂದಿರುವುದು. ಅಧಿಕ ಮೈ ತೂಕದಿಂದ ಕೂಡ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್‌ ಮುಂತಾದ ಅನೇಕ ಕಾಯಿಲೆಗಳು ಬರುವುದು.



ಅಧಿಕ ಮೈತೂಕ ಅಥವಾ ಒಬೆಸಿಟಿಗೆ ಕಾರಣವೇನು?

ಅಧಿಕ ಮೈತೂಕಕ್ಕೆ ಅಥವಾ ಒಬೆಸಿಟಿಗೆ ಕಾರಣವೇನು ಎಂದು ತಿಳಿದರೆ ಅದನ್ನು ತಡೆಗಟ್ಟುವುದು ಸುಲಭವಾಗುವುದು. ಆಹಾರ: ನೀವು ಯಾವ ಬಗೆಯ ಆಹಾರ ಸೇವಿಸುತ್ತೀರಿ ಅದು ನಿಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು. ಅಳತೆ ಮೀರಿ ತಿನ್ನುವುದು, ಅಧಿಕ ಕೊಬ್ಬಿನಂಶವಿರುವ ಆಹಾರ ಸೇವನೆ, ಅಧಿಕ ಸಿಹಿ ಪದಾರ್ಥಗಳನ್ನು ತಿನ್ನುವುದು, ಕೃತಕ ಸಿಹಿ ಇರುವ ಆಹಾರ ವಸ್ತುಗಳನ್ನು ಬಳಸುವುದು, ಕಾರ್ಬ್ಸ್ ಆಹಾರಗಳು, ಸಂಸ್ಕರಿಸಿದ ಆಹಾರಗಳು, ರೆಡಿ ಟು ಕುಕ್ ಫುಡ್ಸ್ ಇವೆಲ್ಲಾ ಮೈ ತೂಕ ಹೆಚ್ಚಿಸುವುದು.

ದೈಹಿಕ ಚಟುವಟಿಕೆ ನಾವು ಯಾವ ಬಗೆಯ ಆಹಾರ ತಿನ್ನುತ್ತೇವೋ ಅದನ್ನು ಕರಗಿಸಲು ಪ್ರಯತ್ನಿಸುವುದು ಕೂಡ ಮುಖ್ಯ. ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೆ, ವ್ಯಾಯಾಮ ಮಾಡದಿದ್ದರೆ, ಒಂದೇ ಕಡೆ ತುಂಬಾ ಹೊತ್ತು ಕೂತರೆ ಮೈ ತೂಕ ಹೆಚ್ಚಾಗುವುದು. ಸರಿಯಾಗಿ ನಿದ್ದೆ ಮಾಡದಿದ್ದರೆ ಅತೀ ಕಡಿಮೆ ನಿದ್ದೆ ಮಾಡುವುದು ಅಥವಾ ತುಂಬಾ ಹೊತ್ತು ನಿದ್ದೆ ಮಾಡುವುದು ಮಾಡಿದರೆ ಮೈ ತೂಕ ಹೆಚ್ಚುವುದು. ನಿದ್ದೆ ಸರಿಯಾಗಿ ಇಲ್ಲದಿದ್ದರೆ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುವುದು. ಇದರಿಂದ ಮೈ ತೂಕ ಹೆಚ್ಚಾಗುವುದು. ಮಾನಸಿಕ ಒತ್ತಡ ಕೆಲವರು ಅತಿಯಾದ ಒತ್ತಡದಿಂದ ಮೈ ತೂಕ ತುಂಬಾ ಕಳೆದುಕೊಂಡರೆ ಇನ್ನು ಕೆಲವರು ತುಂಬಾ ದಪ್ಪಗಾಗುತ್ತಾರೆ.

ಅತ್ಯಧಿಕ ಮಾನಸಿಕ ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿ ಹೆಚ್ಚುವುದು, ಇದರಿಂದ ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚು ತಿನ್ನಲಾರಂಭಿಸುತ್ತಾರೆ. ಅಲ್ಲದೆ ಮಾನಸಿಕ ಒತ್ತಡದಲ್ಲಿ ಇರುವವರು ದೈಹಿಕ ವ್ಯಾಯಾಮದ ಕಡೆಗೂ ಗಮನ ನೀಡಲ್ಲ, ಇವೆಲ್ಲಾ ಮೈ ತೂಕ ಹೆಚ್ಚಿಸುವುದು. ಕೆಲವೊಂದು ಔಷಧಗಳು ಅನೇಕ ಔಷಧಗಳು ಮೈ ತೂಕ ಹೆಚ್ಚಿಸುವುದು. ಇನ್ನು ಖಿನ್ನತೆಗೆ ನೀಡುವ ಔಷಧ ಕೂಡ ಮೈ ತೂಕ ಹೆಚ್ಚಿಸುವುದು.



ತೂಕ ಹೆಚ್ಚುವುದನ್ನು ತಡೆಗಟ್ಟುವುದು ಹೇಗೆ?

ತುಂಬಾ ಮೈ ಬೊಜ್ಜು ಬಂದ ಮೇಲೆ ಅದನ್ನು ಕರಗಿಸಲು ಕಷ್ಟ ಪಡುವುದಕ್ಕಿಂತ ಬರುವಾಗಲೇ ಕರಗಿಸುವುದು ಒಳ್ಳೆಯದು. ಮೈ ತೂಕ ಹೆಚ್ಚಾಗುತ್ತಿದ್ದಣತೆ ಸೂಕ್ತ ಡಯಟಿಷಿಯನ್ ಕಂಡು ಸಲಹೆ ಪಡೆಯಿರಿ. ಯೋಗ, ಜಿಮ್‌ ಅಂತ ದೈಹಿಕ ಚಟುವಟಿಕೆ ಕಡೆ ಗಮನ ನೀಡಿ. ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿ ಡಯಟ್‌ ಎಂದರೆ ನಿಮಗೆ ಇಷ್ಟವಾದ ಆಹಾರವನ್ನು ತಿನ್ನದೇ ಇರುವುದು ಅಂದಲ್ಲ...

ಕೆಲವರು ಡಯಟ್ ಹೆಸರಿನಲ್ಲಿ ತಮ್ಮ ಇಷ್ಟದ ಎಲ್ಲಾ ಆಹಾರದಿಂದ ದೂರವಿರುತ್ತಾರೆ, ಇದು ತುಂಬಾ ಸಮಯ ಪಾಲಿಸಲು ಸಾಧ್ಯವಿಲ್ಲ, ಬದಲಿಗೆ ನೀವು ಇಷ್ಟಪಟ್ಟ ಆಹಾರ ತಿನ್ನಿ, ಮಿತಿಯಲ್ಲಿ ತಿನ್ನಿ. ನಿಮ್ಮ ಆಹಾರದಲ್ಲಿ ಕಾರ್ಬ್ಸ್, ಪ್ರೊಟೀನ್, ಕೊಬ್ಬು ಎಲ್ಲವೂ ಸಮತೋಲನದಲ್ಲಿರಲಿ. ಆರೋಗ್ಯಕರ ಜೀವನಶೈಲಿ: ಆರೋಗ್ಯಕರ ಜೀವನಶೈಲಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ, ಆರೋಗ್ಯ ವೃದ್ಧಿಸುತ್ತದೆ.

(Kannada Copy of Boldsky Kannada)