ಈ ಎಲೆಗಳ ಫೇಸ್ ಮಾಸ್ಕ್ ಗಳಿಂದ ತ್ವಚೆಯ ಹಲವು ಸಮಸ್ಯೆಗಳಿಗೆ ಹೇಳಿ ಬೈ ಬೈ

06-09-21 12:38 pm       Shreeraksha, Boldsky   ಡಾಕ್ಟರ್ಸ್ ನೋಟ್

ತ್ವಚೆಯ ಸಮಸ್ಯೆಗಳಿಗೆ ರಾಸಾಯನಿಕಯುಕ್ತ ಉತ್ಪನ್ನವನ್ನು ಬಳಸುವುದಕ್ಕಿಂತ, ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸುವುದು ಅತ್ಯಂತ ಸುರಕ್ಷಿತ.

ತ್ವಚೆಯ ಸಮಸ್ಯೆಗಳಿಗೆ ರಾಸಾಯನಿಕಯುಕ್ತ ಉತ್ಪನ್ನವನ್ನು ಬಳಸುವುದಕ್ಕಿಂತ, ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸುವುದು ಅತ್ಯಂತ ಸುರಕ್ಷಿತ. ಇದರ ಫಲಿತಾಂಶ ತಡವಾಗಿದ್ದರೂ, ನಿಮಗೆ ಆರೋಗ್ಯವಂತ ತ್ವಚೆಯನ್ನು ನೀಡುವುದು, ಜೊತೆಗೆ ಯಾವುದೇ ಅಡ್ಡಪರಿಣಾಮಗಳ ಭಯ ಇರುವುದಿಲ್ಲ.

ಅಂತಹ ಪದಾರ್ಥಗಳಲ್ಲಿ ಪ್ರಾಕೃತಿಕ ದತ್ತವಾಗಿ ಲಭಿಸುವ ವಿವಿಧ ಸಸ್ಯಗಳ ಎಲೆಗಳೂ ಒಂದು. ಚರ್ಮ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವ ಎಲೆಗಳನ್ನು ಯಾವುದೇ ಭಯವಿಲ್ಲದೇ ಬಳಸಬಹುದು. ಆದರೆ ಹೇಗೆ, ಯಾವ ಎಲೆಗಳನ್ನು ಆಯ್ಕೆ ಮಾಡಬೇಕು ಎಂಬುದು ಮುಖ್ಯವಾಗಿರುತ್ತದೆ. ಆದ್ದರಿಂದ ಇಲ್ಲಿ ನಾವು ಫೇಸ್ ಮಾಸ್ಕ್ ಆಗಿ, ಬಳಸಬಹುದಾದ ಎಲೆಗಳ ಬಗ್ಗೆ ಹಾಗೂ ಅದನ್ನು ಹೇಗೆ ಬಳಸಬಹುದೆಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.



ಲೆಮನ್ ಬಾಮ್ ಎಲೆಗಳ ಫೇಸ್ ಮಾಸ್ಕ್:

ಪುದಿನಾ ಜಾತಿಗೆ ಸೇರಿದ ಲೆಮನ್ ಬಾಮ್ ಎಲೆಗಳು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಚರ್ಮ ಸಮಸ್ಯೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಬಳಸಬಹುದು. ಈ ಫೇಸ್ ಮಾಸ್ಕ್ ತಯಾರಿಸಲು, ಕುಟ್ಟಾಣಿಯಲ್ಲಿ ಲೆಮನ್ ಬಾಮ್ ಎಲೆಗಳನ್ನು ಹಾಕಿ, ಕುಟ್ಟಲು ಪ್ರಾರಂಭಿಸಿ, ಆಗ ಅದರ ಎಲ್ಲಾ ರಸ ಹೊರಬರುವುದು. ಈಗ ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, 20 ನಿಮಿಷಗಳ ನಂತರ ತೊಳೆಯಿರಿ.



ಯಾರೋವ್ ಎಲೆಗಳ ಫೇಸ್ ಮಾಸ್ಕ್ಕ:

ಯಾರೋವ್ ಎಲೆಗಳು ತ್ವಚೆಗೆ ಉತ್ತಮವಾಗಿದ್ದು, ಚರ್ಮ ಮೃದುತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಚರ್ಮದ ಮೇಲೆ ಇರುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಹೊರಹಾಕುತ್ತವೆ. ಅಷ್ಟೇ ಅಲ್ಲ, ಈ ಎಲೆಗಳು ವಯಸ್ಸಾಗುವುದನ್ನು ಮತ್ತು ಮೊಡವೆಗಳು ಹುಟ್ಟುವುದನ್ನು ತಡೆಯುತ್ತದೆ. ಇದಕ್ಕಾಗಿ ನೀವು ಯಾರೋವ್ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ, ಪೇಸ್ಟ್ ಅನ್ನು ದಪ್ಪವಾಗಿಸಲು ಸ್ವಲ್ಪ ರೋಸ್ ವಾಟರ್ ಮತ್ತು ಹಸಿ ಹಾಲನ್ನು ಸೇರಿಸಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ.



ಕಹಿಬೇವಿನ ಎಲೆಯ ಫೇಸ್ ಮಾಸ್ಕ್:

ಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಚರ್ಮಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಅಲ್ಲ, ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡಿ, ತ್ವಚೆಯಲ್ಲಿ ಕಾಂತಿಯನ್ನು ಹೆಚ್ಚಿಸುತ್ತದೆ. ನೀವೇನಾದರೂ ಮೊಡವೆ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಎಲೆಗಳ ಮಾಸ್ಕ್ ಪ್ರಯತ್ನಿಸುವುದು ಉತ್ತಮ. ಇದಕ್ಕಾಗಿ ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ನಂತರ ಅದನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮತ್ತು 25 ನಿಮಿಷಗಳ ಕಾಲ ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ನಿಮ್ಮ ಮುಖವನ್ನು ಟವೆಲ್‌ನಿಂದ ಒರೆಸಿ.



ಪುದೀನಾ ಫೇಸ್ ಮಾಸ್ಕ್:

ಕಪ್ಪು ಕಲೆಗಳು, ಮೊಡವೆಗಳನ್ನು ಕಡಿಮೆ ಮಾಡುವುದರಿಂದ ಹಿಡಿದು, ವಯಸ್ಸಾಗುವುದನ್ನು ನಿಧಾನಗೊಳಿಸುವುದು, ನಿಮ್ಮ ತ್ವಚೆಯನ್ನು ಕಾಂತಿಯುತವಾಗಿಸುವುದು ಸೇರಿದಂತೆ ಪುದೀನಾ ಎಲೆಗಳು ಎಲ್ಲದಕ್ಕೂ ಸಹಕಾರಿ. ಇದಕ್ಕಾಗಿ ಪುದೀನ ಎಲೆಗಳನ್ನು ಮಿಕ್ಷರ್ ನಲ್ಲಿ ಪೇಸ್ಟ್ ಮಾಡಿ, ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಮೊಸರು ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.



ತುಳಸಿ ಎಲೆಗಳ ಮಾಸ್ಕ್:

ತುಳಸಿ ಎಲೆಗಳು ತ್ವಚೆಗೆ ಅಗತ್ಯವಾದ ತೇವಾಂಶವನ್ನು ಒದಗಿಸಿ, ಅದನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ, ಈ ಎಲೆಗಳು ನಿಮ್ಮ ಮುಖವನ್ನು ಸೂರ್ಯನಿಂದ ರಕ್ಷಿಸುತ್ತವೆ ಹಾಗೂ ಮೊಡವೆಗಳಿಗೆ ಚಿಕಿತ್ಸೆಯನ್ನು ನೀಡುತ್ತವೆ. ಆದ್ದರಿಂದ, ನೀವು ಹೊಳೆಯುವ ಮತ್ತು ಮೃದುವಾದ ತ್ವಚೆಯನ್ನು ಬಯಸಿದರೆ, ಈ ಫೇಸ್ ಮಾಸ್ಕ್ ಬಳಸಿ. ಗ್ರೈಂಡರ್‌ನಲ್ಲಿ ತುಳಸಿ ಎಲೆಗಳ ಹಾಗೂ ಮುಲ್ತಾನಿ ಮಿಟ್ಟಿ ಸೇರಿಸಿ ಪೇಸ್ಟ್ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ತಣ್ಣೀರಿನಿಂದ ಮುಖ ತೊಳೆಯಿರಿ.