ಚಿಕ್ಕ ಪ್ರಾಯ, ಸದೃಢ ಮೈಕಾಯ ಆದರೂ ಹೃದಯಾಘಾತ ಸಂಭವಿಸುವುದು ಹೇಗೆ?

07-09-21 10:53 am       Reena TK, Boldsky   ಡಾಕ್ಟರ್ಸ್ ನೋಟ್

ನಾವು ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಹಾಗೂ ದಿನಾ ಸ್ವಲ್ಪ ವ್ಯಾಯಾಮ ಮಾಡಬೇಕು. ಆದರೆ ಅದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಅ

ಇತ್ತೀಚೆಗೆ ಹಿಂದಿ ಬಿಗ್‌ಬಾಸ್‌ ಸೀಸನ್‌ 13ನ ವಿಜೇತ ಸಿದ್ಧಾರ್ಥ್‌ ಶುಕ್ಲ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ನಂಬಲು ಅನೇಕರಿಗೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಫಿಟ್ನೆಸ್‌ ಕಡೆ ತುಂಬಾ ಗಮನ ಕೊಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ ಉಂಟಾಗಲು ಹೇಗೆ ಸಾಧ್ಯ ಎಂಬುವುದೇ ಅನೇಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಿಗೆ ಹೃದಯಾಘಾತ ಉಂಟಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅವರೇನು ಬೊಜ್ಜಿನ ಮೈ ಹೊಂದಿರುವುದಿಲ್ಲ, ಕೆಲವರಂತೂ ಜಿಮ್‌ಗೆ ಹೋಗಿ ಒಳ್ಳೆಯ ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಆರೋಗ್ಯಕರ ಆಹಾರ ಶೈಲಿ ಪಾಲಿಸುತ್ತಿರುತ್ತಾರೆ, ಅಂಥವರೂ ಹೃದಯಾಘಾತದಿಂದ ಬಲಿಯಾಗಿದ್ದಾರೆ. ಹಾಗಾದರೆ ಚಿಕ್ಕ ಪ್ರಾಯದವರಲ್ಲಿ ಈ ರೀತಿ ಹೃದಯಾಘಾತ ಉಂಟಾಗಲು ಕಾರಣವೇನು? ಎಂಬ ಪ್ರಶ್ನೆಗೆ ಇಂಡಿಯಾ ಟುಡೇಯೊಂದಿಗಿನ ಸಮದರ್ಶನದಲ್ಲಿ ಡಾ. ಅಂಬುಜ್ ರಾಯ್‌ ಕೆಲವೊಂದು ಅಂಶಗಳನ್ನು ವಿವರಿಸಿದ್ದಾರೆ, ಅವುಗಳೇನು ಎಂದು ನೋಡೋಣ:



ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಎಲ್ಲಾ ಮಾಡಿದರೂ ಹೃದಯಾಘಾತ ಏಕೆ ಬರುತ್ತಿದೆ?

ನಾವು ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಹಾಗೂ ದಿನಾ ಸ್ವಲ್ಪ ವ್ಯಾಯಾಮ ಮಾಡಬೇಕು. ಆದರೆ ಅದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಅನೇಕ ಜನರಿಗೆ ಅತ್ಯಧಿಕ ಮಾನಸಿಕ ಒತ್ತಡದಿಂದಾಗಿ ಹೃದಯಾಘಾತ ಉಂಟಾಗುತ್ತಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಹೆಚ್ಚಿನವರು ತುಂಬಾ ಹೊತ್ತು ಕೆಲಸ ಮಾಡುತ್ತಾರೆ, ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದೇ ಇಲ್ಲ ಈ ಕಾರಣದಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ.

ವಂಶವಾಹಿಯಾಗಿಯೂ ಕಂಡು ಬರುತ್ತಿದೆ

ಡಾ. ರಾಯ್ ಅವರು ಈ ಹೃದಯಘಾತ ಸಮಸ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿ ವಂಶವಾಹಿಯಾಗಿ ಕಂಡು ಬರುತ್ತಿದೆ, ಏಷ್ಯಾದ ಜನರಿಗೆ ಈ ಹೃದಯ ಸಂಬಂಧಿ ಸಮಸ್ಯೆ ಜೀನ್‌ನಲ್ಲಿಯೇ ಇದೆ, ಪಾಶ್ಚಿಮಾತ್ಯ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಅನೇಕ ಯುವ ಯುವ ಜನರಿಗೆ ಈ ಹೃದಯಾಘಾತ ಸಮಸ್ಯೆ ಉಂಟಾಗುತ್ತಿದೆ.



ಹೃದಯಾಘಾತ ತಡೆಗಟ್ಟುವುದು ಹೇಗೆ?

* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು: ಅತ್ಯಧಿಕ ಮಾನಸಿಕ ಒತ್ತಡದ ಕೆಲಸ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಯೋಗ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ.

* ಧೂಮಪಾನ ವರ್ಜಿಸಬೇಕು: ಹೃದಯಾಘಾತಕ್ಕೆ ಒತ್ತಡದ ಜೊತೆಗೆ ಮತ್ತೊಂದು ಕಾರಣ ಧೂಮಪಾನ. ಈ ಚಟದಿಂದ ಹೊರಬರಬೇಕು.

* ನಿಯಮಿತ ಆರೋಗ್ಯ ತಪಾಸಣೆ: ಕಾಯಿಲೆ ಬಂದ ಮೇಲೆಯೇ ಆಸ್ಪತ್ರೆಗೆ ಹೋಗುವುದು ಎಂದು ಕೂರಬೇಡಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ. ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ.