ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕೊರೊನಾ ಲಸಿಕೆ ಅಡ್ಡಪರಿಣಾಮ; ಕಾರಣ ಏನಿರಬಹುದು?

09-09-21 02:42 pm       Source: One India Kannada   ಡಾಕ್ಟರ್ಸ್ ನೋಟ್

ಕೊರೊನಾ ಲಸಿಕೆಗಳನ್ನು ಪಡೆದುಕೊಂಡ ಮೇಲೂ ಕೆಲವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಯಾವುದೇ ಲಸಿಕೆ ಪಡೆದುಕೊಂಡ ನಂತರ ಕೆಲವು ತಾತ್ಕಾಲಿಕ ಅಡ್ಡಪರಿಣಾಮಗಳು ಉಂಟಾಗುವುದು ಸಹಜ. ಕೊರೊನಾ ಲಸಿಕೆಗಳನ್ನು ಪಡೆದುಕೊಂಡ ಮೇಲೂ ಕೆಲವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಕೆಲವರಲ್ಲಿ ಲಸಿಕೆ ಪಡೆದುಕೊಂಡ ನಂತರ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇನ್ನೂ ಕೆಲವರಲ್ಲಿ ಮೈಕೈ ನೋವು, ಜ್ವರದಂಥ ಅಡ್ಡಪರಿಣಾಮಗಳು ಗೋಚರಿಸಬಹುದು.

ದೇಹದಲ್ಲಿನ ರೋಗನಿರೋಧಕ ಶಕ್ತಿ ಹಾಗೂ ಅನ್ಯ ಕಣಗಳಿಗೆ ದೇಹ ಹೇಗೆ ಪ್ರತಿಸ್ಪಂದನೆ ತೋರುತ್ತದೆ ಎಂಬುದರ ಮೇಲೆ ಅಡ್ಡಪರಿಣಾಮಗಳು ಅವಲಂಬಿಸಿರುತ್ತವೆ. ಹಾಗೆಯೇ ಕೊರೊನಾ ಲಸಿಕೆ ಪಡೆದುಕೊಂಡ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವ ಕಾರಣದಿಂದಾಗಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.



ಕೆಲವರಲ್ಲಿ ಜ್ವರ, ಸುಸ್ತು, ಮೈಕೈ ನೋವು ಕಾಣಿಸಕೊಳ್ಳುತ್ತದೆ. ಇದರ ಹೊರತಾಗಿ ಕೆಲವರಲ್ಲಿ ಲಸಿಕೆ ಪಡೆದ ಜಾಗದಲ್ಲಿ ಊತ, ಕೆರೆತ ಉಂಟಾಗಿ ಒಂದೆರಡು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಅಡ್ಡಪರಿಣಾಮಗಳು ದೀರ್ಘಕಾಲದ್ದಲ್ಲ, ಗರಿಷ್ಠ ನಾಲ್ಕೈದು ದಿನಗಳವರೆಗೆ ಈ ಪರಿಣಾಮಗಳು ಉಳಿದುಕೊಳ್ಳಬಹುದು. ಜೊತೆಗೆ ಕೊರೊನಾ ಲಸಿಕೆಯಿಂದ ಇಂಥವರಲ್ಲೇ ಅಡ್ಡಪರಿಣಾಮಗಳು ಉಂಟಾಗುತ್ತದೆ ಎನ್ನುವಂತಿಲ್ಲ. ಆದರೆ ಈಚಿನ ಕೆಲವು ಅಧ್ಯಯನಗಳನ್ನು ಗಮನಿಸಿದರೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಅಡ್ಡಪರಿಣಾಮಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದು ತಿಳಿದುಬರುತ್ತದೆ.

ರೋಗ ನಿಯಂತ್ರಣ ಹಾಗೂ ನಿರ್ಮೂಲನಾ ಕೇಂದ್ರದ ಪ್ರಕಾರ, ಕೊರೊನಾ ಸೋಂಕಿನ ಲಸಿಕೆಯಿಂದ ಅಂಥ ಗಂಭೀರವಾದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಅಡ್ಡಪರಿಣಾಮಗಳ ಪ್ರಮಾಣ ಮಹಿಳೆಯರಲ್ಲಿ ಹೆಚ್ಚಾಗಿದೆ ಎಂದು ತಿಳಿಸಿದೆ.



ಇದೇ ವಿಷಯದಲ್ಲಿ ಅಧ್ಯಯನವನ್ನು ನಡೆಸಲಾಗಿದ್ದು, 60% ಮಹಿಳೆಯರಿಗೆ ಕೊರೊನಾ ಸೋಂಕಿನ ವಿರುದ್ಧ ಲಸಿಕೆಯನ್ನು ನೀಡಲಾಗಿದ್ದು, ಇದರಲ್ಲಿ 79% ಮಹಿಳೆಯರಲ್ಲಿ ಅಡ್ಡಪರಿಣಾಮಗಳು ವರದಿಯಾಗಿದೆ. ಅಧ್ಯಯನದ ಪ್ರಕಾರ, ಮಾಡೆರ್ನಾ ಲಸಿಕೆ ಪಡೆದ 19 ಮಹಿಳೆಯರಲ್ಲಿ ಪ್ರತಿಕೂಲ ಪ್ರತಿಕ್ರಿಯೆ ಕಂಡುಬಂದಿದೆ. ಫೈಜರ್ ಲಸಿಕೆ ಪಡೆದ 44 ಮಹಿಳೆಯರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. ಪುರುಷರಲ್ಲಿ ಹೋಲಿಸಿದರೆ, ಮಹಿಳೆಯರಲ್ಲಿ ಅಡ್ಡಪರಿಣಾಮಗಳು ಹೆಚ್ಚಾಗಿ ಕಂಡುಬಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ರೋಗನಿರೋಧಕ ವ್ಯವಸ್ಥೆ ಕಾರಣ? ಕೊರೊನಾ ಲಸಿಕೆ ಪಡೆಯುತ್ತಿದ್ದಂತೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಚುರುಕುಗೊಳ್ಳುತ್ತದೆ. ಲಸಿಕೆಯಿಂದ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸಲು ಆರಂಭಿಸುತ್ತದೆ. ಹೀಗಾಗಿ ಕೆಲವು ಬದಲಾವಣೆಗಳು ಆರಂಭವಾಗುತ್ತವೆ. ಜೊತೆಗೆ ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ ಹಾಗೂ ಶಕ್ತಿಯುತ ಪ್ರತಿಕಾಯವಿದ್ದು, ಲಸಿಕೆ ನೀಡಿದ ನಂತರ ಜ್ವರ, ಮೈಕೈ ನೋವು ಬರುವುದು ಸಹಜ ಎಂದು ಸಂಶೋಧನೆ ಹೇಳಿದೆ. ಈ ವಿಷಯದಲ್ಲಿ ಹಾರ್ಮೋನು ಕೂಡ ಕಾರಣವಾಗಿರುತ್ತದೆ. ತಜ್ಞರ ಪ್ರಕಾರ, ಮಹಿಳೆಯರ ಹಾರ್ಮೋನು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ಪುರುಷರಿಗಿಂತ ಮಹಿಳೆಯರು ಲಸಿಕೆಯಿಂದ ಅಡ್ಡಪರಿಣಾಮ ಎದುರಿಸಲು ಇದೂ ಒಂದು ಕಾರಣವಾಗಿದೆ. ಆನುವಂಶಿಕ ವ್ಯತ್ಯಾಸಗಳು ದೇಹವು ಲಸಿಕೆಗೆ ಪ್ರತಿಕ್ರಿಯಿಸುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ, ಇದು ಮಹಿಳೆಯರು ಹೆಚ್ಚು ಅಡ್ಡ ಪರಿಣಾಮಗಳಿಗೆ ಗುರಿಯಾಗಲು ಕಾರಣ ಎನ್ನಲಾಗುತ್ತದೆ.



ಲಸಿಕೆ ಪಡೆದ ನಂತರ ಕಾಣಿಸಿಕೊಳ್ಳುವ ಬದಲಾವಣೆ

ಕೊರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ ಪ್ರತಿಕ್ರಿಯೆ ಕೆಲವು ಬದಲಾವಣೆಗಳಿಗೆ ಕಾರಣವಾಗುತ್ತದೆ. ಲಸಿಕೆ ಪಡೆದ ನಂತರ ಲಸಿಕೆ ಪಡೆದ ಜಾಗದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಸಹಜವಾಗಿದೆ. ನೋವು, ಜ್ವರ, ಮೈಕೈ ನೋವು, ಆಯಾಸ ಹಾಗೂ ಚಳಿ ಅನುಭವವಾಗುತ್ತದೆ. ಇವು ಸಾಮಾನ್ಯ ಲಕ್ಷಣಗಳಾಗಿವೆ. ಇನ್ನೂ ಕೆಲವರಿಗೆ ವಿಪರೀತ ತಲೆ ನೋವು ಕಾಣಿಸಿಕೊಳ್ಳುತ್ತದೆ.

ಆದರೆ ಎರಡು ಮೂರು ದಿನಗಳಲ್ಲಿ ಈ ಪರಿಣಾಮಗಳು ಕ್ರಮೇಣ ತಗ್ಗುತ್ತವೆ. ಅಡ್ಡಪರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಲಸಿಕೆಗಳನ್ನು ಅಭಿವೃದ್ಧಿಗೊಳಿಸಿ ಸುರಕ್ಷಿತ ಮಾನದಂಡಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸೋಂಕಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುವಾಗುವಂತೆ ಈ ಲಸಿಕೆಗಳನ್ನು ರೂಪಿಸಲಾಗಿದೆ.