ಟೊಮ್ಯಾಟೊ ಕೆಚಪ್ ಇಷ್ಟವೆಂದು ಅತಿಯಾಗಿ ತಿನ್ನುತ್ತಿದ್ದೀರಾ? ಹಾಗಾದ್ರೆ ಒಮ್ಮೆ ಇದನ್ನು ಓದಿ

10-09-21 03:49 pm       Shreeraksha, Boldsky   ಡಾಕ್ಟರ್ಸ್ ನೋಟ್

ಕೆಚಪ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದು, ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುವುದಿಲ್ಲ. ಇದರಿಂದ ಯಾವುದೇ ಪೋಷಕಾಂಶ ಸಿಗುವುದಿಲ್ಲ.

ಕೆಚಪ್ ಪ್ರಿಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ತಾವು ತಿನ್ನುವ ಪಿಜ್ಜಾ, ಮ್ಯಾಗಿಯಿಂದ ಹಿಡಿದು, ಪರೋಟಾದವರೆಗೂ ಎಲ್ಲದಕ್ಕೂ ಕೆಚಪ್ ಸುರಿದುಕೊಳ್ಳುವವರ ಸಂಖ್ಯೆ ಬಹಳಾನೇ ಇದೆ. ಕೇವಲ ಮಕ್ಕಳಷ್ಟೇ ಅಲ್ಲ, ವಯಸ್ಕರು, ಹಿರಿಯರು ಸೇರಿದಂತೆ ಪ್ರತಿಯೊಂದು ವಯೋಮಾನದವರಿಗೂ ಇಷ್ಟ ಈ ಟೊಮ್ಯಾಟೋ ಕೆಚಪ್.

ಆದರೆ, ಟೊಮ್ಯಾಟೋ ಕೆಚಪ್ ನಲ್ಲಿ ಕೇವಲ ಟೊಮ್ಯಾಟೋ ಅಷ್ಟೇ ಇರುತ್ತದೆ ಎಂದು ಭಾವಿಸಿದರೆ ಅದು ನಿಮ್ಮ ತಪ್ಪು. ಅವುಗಳಲ್ಲಿ ಸಕ್ಕರೆ, ಉಪ್ಪು, ಮಸಾಲೆಗಳು ಮತ್ತು ಫ್ರಕ್ಟೋಸ್ ಕಾರ್ನ್ ಸಿರಪ್ ತುಂಬಿಕೊಂಡಿರುತ್ತದೆ. ಜೊತೆಗೆ ಯಾವುದೇ ಪ್ರೋಟೀನ್ ಆಗಲಿ, ನಾರಿನಾಂಶವಾಗಲೀ ಇರುವುದಿಲ್ಲ. ಇಂತಹ ಕೆಚಪ್ ಅತಿಯಾಗಿ ಸೇವಿಸಿದರೆ ಎಂತಹ ಅಪಾಯ ಗೊತ್ತಾ?

1. ಕಡಿಮೆ ಪೌಷ್ಟಿಕತೆ: ಪೌಷ್ಟಿಕಾಂಶ ದಟ್ಟವಾದ ಆಹಾರವು ಮೈಕ್ರೋನ್ಯೂಟ್ರಿಯಂಟನ್ನು ದೇಹಕ್ಕೆ ಒದಗಿಸುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಆದರೆ, ಕೆಚಪ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದು, ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುವುದಿಲ್ಲ. ಇದರಿಂದ ಯಾವುದೇ ಪೋಷಕಾಂಶ ಸಿಗುವುದಿಲ್ಲ.



2. ಹೃದಯದ ಕಾಯಿಲೆ: ಫ್ರಕ್ಟೋಸ್ ಕಾರ್ನ್ ಸಿರಪ್ ಇರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ, ಟ್ರೈಗ್ಲಿಸರೈಡ್‌ಗಳು ಮತ್ತು ಹೃದಯದ ಸಮಸ್ಯೆಗಳು ಕಾಡಬಹುದು.



3. ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧಕ: ಅಧಿಕ ಸಕ್ಕರೆ ಅಂಶ ಮತ್ತು ಫ್ರಕ್ಟೋಸ್ ಕಾರ್ನ್ ಸಿರಪ್ ಇರುವ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಬೊಜ್ಜು ಉಂಟಾಗಬಹುದು ಜೊತೆಗೆ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು.



4. ಅಸಿಡಿಟಿ ಮತ್ತು ಎದೆಯುರಿ: ಟೊಮೆಟೊ ಕೆಚಪ್, ಆಮ್ಲೀಯ ಆಹಾರವಾಗಿದೆ. ಇದರಲ್ಲಿ ಮಲಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ನಂತಹ ಆಮ್ಲಗಳು ಇರುವುದರಿಂದ ಆಮ್ಲೀಯತೆ ಮತ್ತು ಎದೆಯುರಿಯನ್ನು ಉಂಟುಮಾಡಬಹುದು. ಹೀಗಾಗಿ, ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವವರು ಟೊಮೆಟೊ ಕೆಚಪ್ ಅನ್ನು ತಿನ್ನಲೇಬಾರದು.



5. ಗಂಟಿನ ಸಮಸ್ಯೆಗಳು: ಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರಗಳು ದೇಹದಲ್ಲಿ ಉರಿಯೂತದ ಅಪಾಯವನ್ನ ಉಂಟುಮಾಡುವುದು. ಇದರಿಂದ ಗಂಟಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.



6. ಕಿಡ್ನಿ ಸಮಸ್ಯೆಗಳು: ಸಂಸ್ಕರಿಸಿದ ಮತ್ತು ಅಧಿಕ ಸೋಡಿಯಂ ಅಂಶವಿರುವ ಆಹಾರಗಳು ಮೂತ್ರದಲ್ಲಿ ಕ್ಯಾಲ್ಸಿಯಂ ಅನ್ನು ಹೆಚ್ಚಿಸುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ.



7. ಅಲರ್ಜಿಗಳು: ಕೆಚಪ್‌ನಲ್ಲಿರುವ ಟೊಮೆಟೊಗಲ್ಲಿ ಹಿಸ್ಟಮೈನ್ ಅಂಶ ಸಮೃದ್ಧವಾಗಿವೆ. ಇದು ಸೀನುವಿಕೆ ಮತ್ತು ಉಸಿರಾಟದ ತೊಂದರೆಯಂತಹ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.