ಹೀಗೆ ಮಾಡಿ, ವಾರದೊಳಗೆ ಸಂಧಿವಾತ ನೋವು ಕಮ್ಮಿ ಆಗುತ್ತೆ ನೋಡಿ!

09-02-22 10:38 am       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸಂಧಿವಾತ ಸಮಸ್ಯೆ ಹೆಚ್ಚುತ್ತಿದ್ದು, ಇದಕ್ಕೆ ಬದಲಾದ ಜೀವನಶೈಲಿಯೇ ಕಾರಣ ಎನ್ನಲಾಗಿದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ, ವಯಸ್ಸಾದ ಮೇಲೆ ಜನರಿಗೆ ಮೂಳೆಗಳ ನೋವು ಕಂಡು ಬರುವುದು ಸಹಜ. ಆದರೆ ಇತ್ತೀಚೆಗೆ ವಯಸ್ಕರಲ್ಲಿ ಕೂಡ ಮೂಳೆಗಳ ಹಾಗೂ ಕೀಲುಗಳ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ! ಇದಕ್ಕೆ ಮುಖ್ಯ ಕಾರಣವೆಂದರೆ ಜನರ ಕೆಟ್ಟ ಜೀವನ ಶೈಲಿಯ ಜೊತೆಗೆ ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸದೇ ಇರುವುದು!

ನಿಮಗೆ ಗೊತ್ತಿರಲಿ, ಮೂಳೆಗಳ ಹಾಗೂ ಕೀಲುಗಳ ಸಮಸ್ಯೆಗಳು ಹೆಚ್ಚಾಗಿ ಕಂಡು ಬರಬಾರದು ಎಂದರೆ, ಮೊದಲಿಗೆ ದಿನನಿತ್ಯದ ವ್ಯಾಯಾಮ ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೂಳೆಗಳಿಗೆ ತೊಂದರೆ ಎನಿಸುವ ಆಹಾರಗಳಿಂದ ದೂರ ಉಳಿಯಬೇಕು. ಈ ಲೇಖನದಲ್ಲಿ ಅಂತಹ ಕೆಲವೊಂದು ಆಹಾರ ಪದಾರ್ಥಗಳ ಬಗ್ಗೆ ನೋಡೋಣ...

ಅಡುಗೆಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಶುಂಠಿ ಜಾಸ್ತಿ ಬಳಸಿ

ಸಾಮಾನ್ಯವಾಗಿ ನಮ್ಮ ದೈನಂದಿನ ಅಡುಗೆಗಳಲ್ಲಿ, ಈ ಮೂರು ತ್ರಿಮೂರ್ತಿಗಳನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಕೆಲವು ಕಡೆಗಳಲ್ಲಿ, ಹೆಚ್ಚಾಗಿ ಜೈನ್ಸ್ ನವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿರುತ್ತಾರೆ.

ಆದ್ರೆ ಇವುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ಶುಂಠಿಯನ್ನು ಬೇಕೆಂದರೆ ಸಣ್ಣ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡು, ಚೆನ್ನಾಗಿ ಕಚ್ಚಿ ಅದರ ರಸವನ್ನು ಹೀರಿಕೊಳ್ಳಬಹುದು.

ರಾಗಿ ಮುದ್ದೆ, ರೊಟ್ಟಿ ಸೇವಿಸಬೇಕು

  • ನಮಗೆಲ್ಲರಿಗೂ ಗೊತ್ತಿರುವ ಹಾಗೆ, ನಮ್ಮ ಕರ್ನಾಟಕದಲ್ಲಿ ಒಂದೊಂದು ಕಡೆ, ಒಂದೊಂದು ಬಗೆಯ ತಿಂಡಿ ತಿನಿಸುಗಳು ಫೇಮಸ್! ಉದಾಹರಣೆಗೆ ದಾವಣಗೆರೆಯಲ್ಲಿ ಬೆಣ್ಣೆ ದೋಸೆ, ರಾಯಚೂರು ಗುಲ್ಬರ್ಗ ಕಡೆ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದಲ್ಲಿ ಚಪಾತಿ ಮತ್ತು ಮುದ್ದೆ.
  • ನಮ್ಮ ಹಿರಿಯರು ಹೇಳಿದ ಹಾಗೆ, ದಕ್ಷಿಣ ಕರ್ನಾಟಕದ ಕಡೆ ಸೇವನೆ ಮಾಡುವ ರಾಗಿ ಮುದ್ದೆ, ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲದೇ, ದೇಹದ ಮೂಳೆಗಳಿಗೆ ಕೂಡ ಸದೃಢ ಎಂಬ ಮಾತು ಕೂಡ ಇದೆ. ಅಲ್ಲದೇ ವಿಶೇಷವಾಗಿ, ದಿನಾ ರಾಗಿ ರೊಟ್ಟಿ ಸೇವನೆಯಿಂದ ಒಳ್ಳೆಯ ಮೈಕಟ್ಟು ಸಿಗುತ್ತದೆ ಎಂದು ಹೇಳುತ್ತಾರೆ.

ಕೊಬ್ಬಿನ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ

  • ಕೊಬ್ಬಿನ ಅಂಶ ಎಂದ ತಕ್ಷಣ ಜನರು ದೂರ ಓಡುತ್ತಾರೆ! ಆದರೆ ನಿಮಗೆ ಗೊತ್ತಿರಲಿ ಆದರೆ ಕೊಬ್ಬಿನ ಅಂಶದಲ್ಲಿ ಎರಡು ವಿಧಗಳು ಕಂಡುಬರುತ್ತವೆ. ಆರೋಗ್ಯಕರವಾದ ಕೊಬ್ಬಿನ ಅಂಶಗಳು ಒಂದು ಕಡೆಯಾದರೆ ಕೆಟ್ಟ ಕೊಬ್ಬಿನ ಅಂಶ ಅಥವಾ ಕೊಲೆಸ್ಟ್ರಾಲ್ ಅಂಶ ಮತ್ತೊಂದು ಕಡೆ.
  • ಇದರಲ್ಲಿ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಹೆಚ್ಚಾಗಿರುವ ಆಹಾರಗಳು ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಹೀಗಾಗಿ ಒಳ್ಳೆಯ ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರಗಳು ಎಂದರೆ ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್ನಟ್, ಒಣ ಖರ್ಜೂರ, ಫ್ಲಾಕ್ಸ್ ಸೀಡ್ಸ್, ಸೂರ್ಯಕಾಂತಿ ಬೀಜಗಳನ್ನು ಹೆಚ್ಚಾಗಿ ಸೇವಿಸಬೇಕು.

 ಮೈದಾಹಿಟ್ಟು, ಉಪ್ಪು ಮತ್ತು ಸಕ್ಕರೆಗಳಿಂದ ದೂರವಿರಿ!

  • ಬಿಳಿ ಬಣ್ಣದ ಪದಾರ್ಥಗಳೆಂದೇ ಕರೆಯಲಾಗುವ, ಮೈದಾಹಿಟ್ಟು, ಉಪ್ಪು ಮತ್ತು ಸಕ್ಕರೆಗಳಿಂದ ಆದಷ್ಟು ದೂರವಿರಿ. ಇವುಗಳ ಬಳಕೆ ಜಾಸ್ತಿ ಆಗುತ್ತಾ ಹೋದರೆ, ಮುಂದೊಂದು ದಿನ ನಮ್ಮ ಮೂಳೆಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
  • ಹಾಗಾಗಿ ಸಕ್ಕರೆ ಬದಲು ಬೆಲ್ಲ ಅಥವಾ ಖರ್ಜೂರ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಹೆಚ್ಚುವರಿ ಖನಿಜಾಂಶಗಳನ್ನು ಆರೋಗ್ಯಕ್ಕೆ ಸಿಕ್ಕಂತೆ ಆಗುತ್ತದೆ. ಇನ್ನು ಉಪ್ಪಿನ ವಿಷ್ಯಕ್ಕೆ ಬರುವುದಾದರೆ ಅಡುಗೆಗೆ ಸಮುದ್ರದ ಉಪ್ಪನ್ನು ಅಥವಾ ಕಲ್ಲುಪ್ಪನ್ನು ಬಳಕೆ ಮಾಡಬಹುದು.

ಅರಿಶಿನದ ಹಾಲು ಕುಡಿಯಲು ಮರೆಯದಿರಿ 

ಸಂಧಿವಾತ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಅರಿಶಿನದ ಚಹಾ ಅಥವಾ ಬಿಸಿ ಹಾಲಿಗೆ ಅರಿಶಿನ ಹಾಕಿ ಮಿಶ್ರಣ ಮಾಡಿಸೇವನೆ ಮಾಡುವ ಅಭ್ಯಾಸ ದೈನಂದಿನ ರೂಢಿಯಲ್ಲಿ ಇಟ್ಟುಕೊಳ್ಳಿ.

ನೀಲಗಿರಿ ಎಣ್ಣೆ

ದೇಹದ ಉರಿಯೂತ ಸಮಸ್ಯೆ ಹಾಗೂ ನೋವು ನಿವಾರಣೆಯಲ್ಲಿ ನೀಲಗಿರಿ ಎಲೆಗಳ ಪಾತ್ರ ಮರೆಯುವಂತಿಲ್ಲ. ಹಾಗಾಗಿ ಸಂಧಿವಾತ ಸಮಸ್ಯೆ ಇರುವವರಿಗೆ ನೀಲಗಿರಿ ಎಲೆಗಳ ಎಣ್ಣೆ ಸಾಕಷ್ಟು ಪ್ರಭಾವ ಬೀರುತ್ತವೆ. ನೀಲಗಿರಿ ಎಲೆಗಳಲ್ಲಿ ಟ್ಯಾನಿನ್ ಎಂಬ ಅಂಶ ಕಂಡು ಬಂದಿದ್ದು, ಇದು ಕೈ ಕಾಲುಗಳ ಊತ ಮತ್ತು ನೋವನ್ನು ನಿವಾರಣೆ ಮಾಡುತ್ತದೆ.

Suffering From Arthritis Pain, Try These Natural Remedies To Get Relief.