ಮುಖ್ಯಮಂತ್ರಿ ಭ್ರಷ್ಟಾಚಾರ ಆರೋಪ ; ರಾಜೀನಾಮೆಗೆ ಐವನ್ ಆಗ್ರಹ

30-09-20 02:11 pm       Mangalore Correspondent   ಲೀಡರ್ಸ್ ರಿಪೋರ್ಟ್

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ತನ್ನ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ ಎಂದು ಐವನ್ ಬಿಎಸ್‌ವೈ ವಿರುದ್ದ ಕಿಡಿ ಕಾರಿದ್ದಾರೆ.

ಮಂಗಳೂರು, ಸೆ. 30: ರಾಜ್ಯದ ಬಿಜೆಪಿ ಸರಕಾರ ತನ್ನ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪವರ್ ಟಿವಿ ವಿರುದ್ಧ ಕೈಗೊಂಡಿರುವ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು. ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು ಹಾಗೂ ನೇರ ಚುನಾವಣೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ತನ್ನ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ ಎಂದು ಆರೋಪಿಸಿದರು.

ಬಿಡಿಎ ಪ್ರಕರಣವೊಂದರಲ್ಲಿ 24 ಕೋಟಿ ರೂ.ಗಳ ಹಗರಣ ನಡೆದಿರುವ ಬಗ್ಗೆ ಸಾಕ್ಷ ಸಹಿತ ದಾಖಲೆಗಳಿವೆ. ಈ ಪ್ರಕರಣದಲ್ಲಿ 7.44 ಕೋಟಿ ರೂ. ಶೇಷಾದ್ರಿಪುರಂ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿಯ ಸಂಬಂಧಿಕರು ಪಡೆದಿದ್ದಾರೆ. ಇದಲ್ಲದೆ, ಉಳಿದ ಹಣ ಕೊಲ್ಕತ್ತಾದ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಬಂಧಿಕರ ಕಂಪನಿಗೆ ವರ್ಗಾವಣೆಯಾಗಿದೆ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆ ಇರುವಾಗ ತನಿಖೆ ಆಗಬೇಡವೇ ? ಈ ಬಗ್ಗೆ ಸುದ್ದಿ ಮಾಡಿದ ಚಾನೆಲ್ ಮೇಲೆ ಬಲಪ್ರಯೋಗಿಸುವ ಮೂಲಕ ಜನರ ಬಾಯಿಯನ್ನು ಮುಚ್ಚಿಸಲಾಗದು. 2008ರಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಡಳಿತವಿದ್ದಾಗ ಪ್ರೇರಣಾ ಟ್ರಸ್ಟ್ ಪ್ರಕರಣದ ಮೂಲಕ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಮತ್ತೆ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ. ರಾಜ್ಯದ ಮೂಲೆ ಮೂಲೆಗೂ ಜನರಿಗೆ ತಲುಪಿಸಲಾಗುವುದು ಎಂದು ಐವನ್ ಡಿಸೋಜಾ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್ ಮತಿತ್ತರು ಉಪಸ್ಥಿತಿ ಇದ್ದರು.